Advertisement

ಸಮೃದ್ಧಿ ಯೋಜನೆ ಅನುಷ್ಠಾನವಾಗಲಿ : ಶ್ರೀ

08:58 PM Mar 25, 2021 | Team Udayavani |

ಶಿರಸಿ : ಅಲ್ಲಿಯೂ ಇಲ್ಲಿಯೂ ಸಮೃದ್ಧಿ ಸಿಗುವ ಯೋಜನೆ ಮಾಡಬೇಕು. ಅದು ಬಿಟ್ಟು ತಾತ್ಕಾಲಿಕ ಯೋಜನೆ ಅನುಷ್ಠಾನಗೊಳಿಸಿ ಅಲ್ಲೂ, ಇಲ್ಲೂ ಬರಿದಾದರೆ, ಉಳಿದೆಡೆ ನದಿ ಜೋಡಣೆ ಪ್ರದೇಶದಲ್ಲಿ ಉಂಟಾದ ಸಮಸ್ಯೆ ಮುಂದೆ ಈ ಪ್ರದೇಶದಲ್ಲೂ ಹಾಗೇ ಆದರೆ ಯಾರು ಗತಿ? ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

Advertisement

ಅವರು ಬುಧವಾರ ನಗರದ ಟಿಆರ್‌ಸಿ ಸೊಸೈಟಿಯಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಏರ್ಪಡಿಸಿದ ಬೇಡ್ತಿ ಅಘನಾಶಿನಿ ವರದಾ ಜೋಡಣಾ ಯೋಜನೆ ಸಾಧಕ ಬಾಧಕಗಳ ಕುರಿತ ಸಮಾಲೋಚನಾ ಕಾರ್ಯಾಗಾರ ಹಾಗೂ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬಯಲು ಸೀಮೆಯಲ್ಲೂ ಹಸಿರೀಕರಣ ಮಾಡಿ, ಜಲ ಕೊಯ್ಲು ನಡೆಸಬೇಕು. ಸರಕಾರಗಳು ಜಲ ಕೋಯ್ಲು, ವೈವಿಧ್ಯಮಯ ಅರಣ್ಯ ಸಂರಕ್ಷಣೆಗೆ ಇನ್ನಷ್ಟು ಮಹತ್ವ ನೀಡಬೇಕು. ವೈಜ್ಞಾನಿಕ ತಳಹದಿ ಮೇಲೆ ಯೋಜನೆ ಅನುಷ್ಠಾನ ಮಾಡಬೇಕು. ಯೋಜನೆ ಅನುಷ್ಠಾನದಿಂದ ತಾತ್ಕಾಲಿಕ ಪ್ರಯೋಜನಕ್ಕಿಂತ, ದೀರ್ಘ‌ ನಷ್ಟವನ್ನೂ ನೋಡಬೇಕು ಎಂದು ಹೇಳಿದರು.

ಬಯಲು ಸೀಮೆಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಇಲ್ಲಿನ ನದಿ ಜೋಡಣಾ ಪ್ರಸ್ತಾಪವಿದೆ ಎನ್ನುತ್ತದೆ ಸರಕಾರ. ಅಲ್ಲಿ ಕೊರತೆ ಇರೋದು ಸತ್ಯ. ಆದರೆ, ನದಿ ಜೋಡಣೆ ಪರಿಹಾರ ಆಗಬಲ್ಲದೇ? ಎಂಬುದು ನಮ್ಮ ಪ್ರಶ್ನೆ ಎಂದ ಶ್ರೀಗಳು, ಕೇವಲ ತಕ್ಷಣದ ಪರಿಸ್ಥಿತಿ ಆಲೋಚಿಸದೇ ಮುಂದಿನ ದೀರ್ಘ‌ ಕಾಲದ ಆಲೋಚನೆ ಮಾಡದೇ ಹೋದರೆ ಕಷ್ಟವಾಗುತ್ತದೆ ಎಂದರು. ಹಿಂದೆ ಋಷಿಗಳು ಯಾವುದು ಒಳಿತು, ಕೆಡಕು ಎನ್ನುತ್ತಿದ್ದರು. ಆದರೆ, ಈಗ ಇಂಥ ಕಾರ್ಯವನ್ನು ವಿಜ್ಞಾನಿಗಳು ಮಾಡುತ್ತಾರೆ. ಮುಂದೆ ಯಾವ ಯಾವ ದೊಡ್ಡ ಅನಾಹುತ ಆಗುತ್ತದೆ ಎಂಬುದು ಗೊತ್ತಾಗದ ಸಂದಿಗ್ಧ  ಕಾಲದಲ್ಲಿ ನಾವಿದ್ದೇವೆ ಎಂದರು.

ಈಗಲೇ ನೀರಿಲ್ಲ. ಬೇಡ್ತಿಲಿ ಏನು ವಯ್ತಾರೆ. ದ್ರಾವಿಡ ಪ್ರಾಣಾಯಾಮ ಎಂಬಂತೆ ಆಗುತ್ತದೆ ಎಂದ ಶ್ರೀಗಳು, ಪರಿಸರ ವಾದಿಗಳು ಪ್ರಗತಿಗೆ ವಿರೋಧಿ ಗಳಲ್ಲ. ಆದರೆ, ಜಗತ್ತಿನ ಒಳಿತಿಗಾಗಿ ನಮ್ಮ ಪಶ್ಚಿಮ ಘಟ್ಟದ ರಕ್ಷಣೆ, ಸಂರಕ್ಷಣೆ ಮಾಡಿಕೊಳ್ಳಬೇಕಾಗಿದೆ ಎಂದರು. ದಾಹ ನೀಗಿಸಲಾಗದು: ಹಿರಿಯ ಪರಿಸರ ಬರಹಗಾರ ನಾಗೇಶ ಹೆಗಡೆ ಅವರು ತಮ್ಮ ದಿಕ್ಸೂಚಿ ಮಾತಿನ ಉದ್ದಕ್ಕೂ ನದಿ ಜೋಡಣೆ ಅಪಾಯದ ಕುರಿತು ಮಾತನಾಡಿದರು.

ಬೇಡ್ತಿ ಅಘನಾಶಿನಿ ಕೊಳ್ಳದಲ್ಲಿ ನದಿಯ ಹರಿವು ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದೂ ಹೇಳಿದರು. ನನ್ನ ಸುತ್ತಲಿನ ಪರಿಸರ ರಕ್ಷಣೆ ಮಾಡಿಕೊಳ್ಳುವುದು ಎಲ್ಲರ ಧರ್ಮ ಆಗಬೇಕು. ಪಶ್ಚಿಮ ಘಟ್ಟ ರಕ್ಷಣೆ ನಾವೇ ಮಾಡುಕೊಳ್ಳಬೇಕು. ಜಗತ್ತಿಗೆ ಪಶ್ಚಿಮಘಟ್ಟ ಅಮೂಲ್ಯ ಸಂಪತ್ತು. ನದಿಯು ಹರಿಯಬೇಕು. ಇರುವೆಗಳೂ, ಗೆದ್ದಲು ಸೇರಿ ಎಲ್ಲವೂ ತನ್ನಷ್ಟಕ್ಕೆ ಇರಿಯಬೇಕು. ಅದಕ್ಕೆ ಅಪಾಯ ಬಂದರೆ ಎದುರಿಸಿ ರಕ್ಷಣೆ ಮಾಡಿಕೊಳ್ಳಬೇಕು. ಬಾಯಾರಿಕೆ ಇದ್ದವರಿಗೆ ನೀರು ಕೊಡಬೇಕು. ದಾಹ ಇದ್ದವರಿಗೆ ಬೆಲೆ ಕೊಟ್ಟರೆ ಅದು ಅಧರ್ಮ ಆಗುತ್ತಿದೆ. ಆ ದಾಹ ಒಬ್ಬರಿಂದ ಒಬ್ಬರಿಗೆ ವಿಸ್ತಾರ ಆಗುತ್ತಿದೆ.

Advertisement

ಉದಾಹರಣೆಗೆ 26 ಕೋ.ರೂ. ಖರ್ಚು ಮಾಡಿ ಬೇಡ್ತಿ ನೀರನ್ನು ಒಯ್ದಿದ್ದಾರೆ. ಆದರೆ ಹಣ ಖರ್ಚಾಗಿದೆ. ನೀರು ಎಲ್ಲಿ ಎಂಬುದು ಗೊತ್ತಾಗುತ್ತಿಲ್ಲ ಎಂದರು. ಅಘನಾಶಿನಿ ಹಾಗೂ ಬೇಡ್ತಿ ಇಡೀ ಜಗತ್ತಿನಲ್ಲಿ ಕನ್ಯತ್ವ ಉಳಿಸಿಕೊಂಡ ನದಿ. ಅಣೆಕಟ್ಟು, ತ್ಯಾಜ್ಯ ಇಲ್ಲ. ಇಲ್ಲಿನ ನದಿಗೆ ಅದರ ಸ್ವಾತಂತ್ರÂ ಉಳಿಸಿಕೊಳ್ಳಬೇಕು, ಕೊಡಬೇಕು. ಈ ಪವಿತ್ರ ಭೂಮಿ ಉಳಿಸಿಕೊಳ್ಳೋಣ ಎಂದರು. ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ಈ ನದಿ ಜೋಡಣೆಗೆ ಸಂಬಂಧಿಸಿ ವೈಜ್ಞಾನಿಕ ಸಮಾಲೋಚನೆ ನಡೆಯುತ್ತಿದೆ. ಸ್ಪೀಕರ್‌ ಕಾಗೇರಿ, ಸಚಿವ ಹೆಬ್ಟಾರ್‌ ಅವರ ಜೊತೆ ಈಗಾಗಲೇ ಸಮಾಲೋಚನೆ ಮಾಡಲಾಗಿದೆ. ಅವರೂ ಶೀಘ್ರ ಮುಖ್ಯಮಂತ್ರಿಗಳ ಜತೆ ಬೇಡ್ತಿ ಸಮಿತಿ ಪದಾಧಿಕಾರಿಗಳಿಂದ ಸಮಾಲೋಚನೆ ಮಾಡಲು ಅವಕಾಶ ಮಾಡಿಕೊಳ್ಳೋಣ ಎಂದಿದ್ದಾರೆ. ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್‌ದಲ್ಲೂ ಈ ಜೋಡಣೆ ಪ್ರಸ್ತಾಪ ವಿರೋಧಿಸುವ ನಿರ್ಣಯ ಕೂಡ ಅಂಗೀಕರಿಸಿ ಸರಕಾರಕ್ಕೆ ಕಳಿಸಬೇಕು ಎಂದೂ ಹೇಳಿದರು.

ಹಿರಿಯ ವಿಜ್ಞಾನಿ ಡಾ| ಟಿ.ವಿ.ರಾಮಚಂದ್ರ ಮಾತನಾಡಿ, ಕಾಡು ನಾಶ ಮಾಡಿದರೆ ಜಲ ಸಿಗುವುದಿಲ್ಲ. ಸ್ಥಳೀಯ ಪ್ರಭೇದದ ಸಸ್ಯಗಳು ಇದ್ದಾಗ ಜಲ ಸಂರಕ್ಷಣೆ ಕೂಡ ಆಗುತ್ತದೆ. ನದಿ ಜೋಡಣೆ ಬದಲಿಗೆ ಸ್ಥಳೀಯ ಕಾಡು ಬೆಳೆಸಬೇಕು. ಹಸಿರು ಪ್ರದೇಶದಲ್ಲಿ 12 ತಿಂಗಳು ನೀರು ಇರುತ್ತದೆ ಎಂದರು. ಮಠದ ಅಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ಮನಳ್ಳಿ, ಅರ್ಥಶಾಸ್ತ್ರಜ್ಞ ಡಾ| ಬಿ.ಎಂ. ಕುಮಾರಸ್ವಾಮಿ, ಶಿವಾನಂದ ಕಳವೆ, ಕೇಶವ ಕೊರ್ಸೆ, ಬಾಲಚಂದ್ರ ಸಾಯಿಮನೆ, ಜಿ.ವಿ. ಹೆಗಡೆ ಹುಳಗೋಳ, ವಾಸಂತಿ ಹೆಗಡೆ, ಪ್ರಭಾಕರ ಭಟ್ಟ ತಟ್ಟಿಕೈ, ಶ್ರೀಧರ ಭಟ್ಟ ಇತರರು ಇದ್ದರು. ಮಧುಮತಿ ಹೆಗಡೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next