ಚಿಕ್ಕಬಳ್ಳಾಪುರ: ದಲಿತರಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಅನುಷ್ಠಾನಗೊಳಿಸದಿದ್ದರೆ ಬರುವ ಉಪ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ತಕ್ಕಪಾಠ ಕಲಿಸಲಾಗುವುದೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಪರಶುರಾಮ ಎನ್.ಮರೇಗುದ್ದಿ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡುವಂತೆ ಕೇಳುತ್ತಿದ್ದರೂ ಆಳುವ ಪಕ್ಷಗಳು ಸಮುದಾಯದ ಬೇಡಿಕೆ ಬಗ್ಗೆ ತಿರಸ್ಕಾರ ಮನೋಭಾವದಿಂದ ನೋಡುತ್ತಿವೆ ಎಂದು ದೂರಿದರು.
ಅಭ್ಯರ್ಥಿಗಳನ್ನು ಸೋಲಿಸುವ ಕೆಲಸ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರಕ್ಕೆ 2012 ರಲ್ಲಿ ಸಲ್ಲಿಸಲಾಗಿದೆ. ಆಯೋಗ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಇದುವರೆಗೂ ಯಾವುದೇ ಸರ್ಕಾರ ಮುಂದಾಗಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಹಾದಿಯಾಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ, ಅದಕ್ಕೂ ಮೊದಲು ಬಿಜೆಪಿ ಸರ್ಕಾರವೂ ಸ್ಪಂದಿಸಲಿಲ್ಲ. ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸಮುದಾಯದ ಪ್ರಮುಖ ಬೇಡಿಕೆ ಒಪ್ಪಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಘೋಷಣೆಯಾಗಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಕೆಲಸ ಮಾಡಲಿದೆ ಎಂದರು.
ಮೀಸಲಾತಿ ಕಲ್ಪಿಸಿ: ಸದ್ಯ ಉಪ ಚುನಾವಣೆ ಘೋಷಣೆ ಆಗಿದ್ದು, ನೀತಿ ಸಂಹಿತೆ ಜಾರಿಗೂ ಮೊದಲೇ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸ್ಪಷ್ಟ ಭರವಸೆ ನೀಡಬೇಕು. ಶತಮಾನಗಳಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಶೇ.15 ಮೀಸಲಾತಿ ಕಲ್ಪಿಸಬೇಕು ಎಂದು ಹೇಳಿದರು. ನಿಜವಾದ ದಲಿತರಾಗಿರುವ ಹೊಲೆ, ಮಾದಿಗರಿಗೆ ಸರ್ಕಾರದ ಯಾವುದೇ ಸೌಕರ್ಯ ಸಿಗುತ್ತಿಲ್ಲ. ಮುಖ್ಯವಾಗಿ ಉದ್ಯೋಗ, ಶಿಕ್ಷಣ, ರಾಜಕೀಯ ಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿ.11ಕ್ಕೆ ಕರಾಳ ದಿನಾಚರಣೆ: ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ 2012ರಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ದಂಡೋರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಚ್ ನಡೆಸಿ ಅಮಾನವೀಯವಾಗಿ ಥಳಿಸಿದ್ದರು. ಈ ಪ್ರಕರಣ ಖಂಡಿಸಿ ಬರುವ ಡಿ.11 ರಂದು ದಂಡೋರ ವತಿಯಿಂದ 7ನೇ ವರ್ಷದ ಕರಾಳ ದಿನವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೇಶವಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷರಾದ ಕೇಶವಮೂರ್ತಿ, ಮರಗೇಶ್ ಕಂಬಣ್ಣ, ಪ್ರಧಾನ ಕಾರ್ಯದರ್ಶಿ ಶಿವರಾಯ ಅಕ್ಕರಕಿ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಜಿ.ವೆಂಕಟರವಣಪ್ಪ, ರಾಜ್ಯ ಉಪಾಧ್ಯಕ್ಷ ಭಾನು ಪ್ರಕಾಶ್, ರಾಜ್ಯ ಕಾರ್ಯದರ್ಶಿ ಮಾಗಡಿ ಕೃಷ್ಣ, ಚಿಂತಕ ಲಕ್ಷ್ಮಣರಾಜು ಮತ್ತಿತರರಿದ್ದರು.