Advertisement

ರಸ್ತೆ ಸುರಕ್ಷತಾ ವಿಧಾನ ಸಮರ್ಪಕ ಅನುಷ್ಠಾನಗೊಳಿಸಿ

09:43 PM Jan 03, 2020 | Lakshmi GovindaRaj |

ಚಾಮರಾಜನಗರ: ರಸ್ತೆ ಸುರಕ್ಷತೆ ಸಂಬಂಧಿಸಿದಂತೆ ವಿಧಾನಗಳನ್ನು ಇಲಾಖೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿದಲ್ಲಿ ರಸ್ತೆ ಅವಘಡಗಳನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾಲೇಖಪಾಲರ ತಪಾಸಣಾ ತಂಡ ಹಾಗೂ ಪಾಲುದಾರ ಇಲಾಖೆಗಳ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

Advertisement

ಗುಣಮಟ್ಟದ ರಸ್ತೆ ಅಗತ್ಯ: ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವಲ್ಲಿ ಸಂಬಂಧಪಟ್ಟ ಇಲಾಖೆಗಳ ಪಾತ್ರ ಮಹತ್ವದಾಗಿರುತ್ತದೆ. ಹೀಗಾಗಿ ರಸ್ತೆ ಅವಘಡಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಜನಸ್ನೇಹಿ ಸಂಚಾರ ವ್ಯವಸ್ಥೆ ರಚಿಸಬೇಕು. ಅಪಘಾತಗಳನ್ನು ನಿಯಂತ್ರಿಸಲು ಗುಣಮಟ್ಟದ ರಸ್ತೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಉತ್ತಮ ರಸ್ತೆಗಳ ನಿರ್ಮಾಣ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.

ರಸ್ತೆಗಳನ್ನು ವಿಸ್ತರಿಸಿ: ಮಹಾಲೇಖಪಾಲರ ಅಡಿಟ್‌ ತಂಡ ಜಿಲ್ಲೆಯಲ್ಲಿ ಅಪಘಾತದ ಸಂಭವನೀಯ ಸ್ಥಳ (ಬ್ಲ್ಯಾಕ್‌ ಸ್ಪಾಟ್‌)ಗಳನ್ನು ಈಗಾಗಲೇ ಗುರುತಿಸಿದೆ. ಹೆದ್ದಾರಿಗಳಲ್ಲಿನ ಅಪಘಾತ ವಲಯಗಳನ್ನು ಗುರುತಿಸಿ, ಅಲ್ಲಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಹುಬ್ಬುಗಳನ್ನು ನಿರ್ಮಿಸಬೇಕು. ರಾಜ್ಯ ಹೆದ್ದಾರಿಗೆ ಸೇರಿರುವ ಪ್ರಮುಖ ಜಿಲ್ಲಾ ರಸ್ತೆಗಳು ಸಿಂಗಲ್‌ ಲೇನ್‌ ರಸ್ತೆಗಳಾಗಿದ್ದು, ಅವುಗಳನ್ನು ವಿಸ್ತರಿಸಬೇಕು ಎಂದು ತಿಳಿಸಿದರು.

ಬ್ಯಾರಿಕೇಡ್‌, ಸೂಚನೆ ಫ‌ಲಕ ಅಳವಡಿಸಿ: ರಸ್ತೆ ತಿರುವು ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್‌ ಹಾಗೂ ಸೂಚನಾ ಫ‌ಲಕಗಳನ್ನು ಅಳವಡಿಸಬೇಕು. ಹಳ್ಳಕೊಳ್ಳಗಳಿಂದ ಕೂಡಿರುವ ರಸ್ತೆಗೆ ತಡೆಗೋಡೆಗಳನ್ನು ನಿರ್ಮಿಸಬೇಕು. ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಯ ಎರಡು ಕಡೆ ವೈಟ್‌ಲೆçನ್‌ ಹಾಕಬೇಕು. ಇದರಿಂದ ಸುರಕ್ಷಿತ ರಸ್ತೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ವೇಗದ ಚಾಲನೆ ತಡೆಗೆ ಕ್ರಮವಹಿಸಿ: ಅಪ್ರಾಪ್ತ ಯುವಕರು, ಶಾಲಾ ವಿದ್ಯಾರ್ಥಿಗಳು ವಾಹನಗಳನ್ನು ಅತಿವೇಗದಿಂದ ಚಲಾಯಿಸುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಾ ಶಾಲೆ, ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆ ಹಾಗೂ ನಿಯಮಗಳ ಬಗ್ಗೆ ಕಾರ್ಯಾಗಾರಗಳನ್ನು ಏರ್ಪಡಿಸಿ, ಮಕ್ಕಳಲ್ಲಿ ಅತಿವೇಗದ ಚಾಲನೆಯಿಂದಾಗುವ ಅನಾಹುತಗಳ ಬಗ್ಗೆ ಕಲಿಕಾ ಹಂತದಲ್ಲಿಯೇ ಅರಿವು ಮೂಡಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ರಸ್ತೆ ನಿರ್ಮಾಣವಾದ ಕೂಡಲೇ, ಪಾದಚಾರಿ ರಸ್ತೆಗಳನ್ನು ತಪ್ಪದೇ ನಿರ್ಮಿಸಬೇಕು. ರಸ್ತೆ ಬದಿಯಲ್ಲಿ ಸುಸಜ್ಜಿತ ಪಾದಚಾರಿ ರಸ್ತೆಗಳನ್ನು ನಿರ್ಮಿಸುವ ಮೂಲಕ ನಾಗರಿಕರಿಗೆ ಅನುಕೂಲ ಕಲ್ಪಿಸುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.

ತುರ್ತು ಅಪಘಾತ ಚಿಕಿತ್ಸಾ ಕೇಂದ್ರ ತೆರೆಯಿರಿ: ಮಹಾಲೇಖಪಾಲರ ಕಚೇರಿಯ ಹಿರಿಯ ಆಡಿಟ್‌ ಅಧಿಕಾರಿ ಬಿ.ಎಸ್‌.ಶ್ರೀನಾಥ್‌ ಮಾತನಾಡಿ, ಬೆಂಗಳೂರಿನ ಸಂಜಯ್‌ಗಾಂಧಿ ತುರ್ತು ಅಪಘಾತ ಚಿಕಿತ್ಸಾ ಕೇಂದ್ರದ ಮಾದರಿಯಲ್ಲಿ ಮೈಸೂರಿನಲ್ಲಿ ತುರ್ತು ಅಪಘಾತ ಚಿಕಿತ್ಸಾ ಕೇಂದ್ರದ ಕಿರು ಮಾದರಿ ಕೇಂದ್ರ ತೆರೆಯಬೇಕು. ಇದರಿಂದ ಚಾಮರಾಜನಗರದ ಜನತೆಗೆ ಅನುಕೂಲವಾಗಲಿದೆ. ತುರ್ತು ಚಿಕಿತ್ಸಾ ಕೇಂದ್ರದಿಂದ ಅಪಘಾತದಿಂದಾಗುವ ಮರಣವನ್ನು ತಾತ್ಕಾಲಿಕವಾಗಿ ಮುಂದೂಡಬಹುದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮಹಾಲೇಖಪಾಲರ ಕಚೇರಿಯ ಹಿರಿಯ ತಪಾಸಣಾ ಅಧಿಕಾರಿ ಬಿ.ವಿ. ಹರೀಶ್‌, ಉಮೇಶ್‌, ಸಹಾಯಕ ತಪಾಸಣಾ ಅಧಿಕಾರಿ ದತ್ತ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಸುರೇಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಜಿಲ್ಲಾದ್ಯಂತ ಹೆಲ್ಮೆಟ್‌ ಬಳಕೆಗೆ ಉತ್ತಮ ಸ್ಪಂದನೆ ದೊರೆತಿದೆ. ಎಲ್ಲರೂ ಹೆಲ್ಮೆಟ್‌ ಬಳಸುವುದರಿಂದ ಅಪಘಾತಗಳಿಂದ ತಪ್ಪಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೆಲ್ಮೆಟ್‌ ಬಳಕೆಯಿಂದಾಗುವ ಪ್ರಯೋಜನಗಳ ಬಗ್ಗೆ ನಿರಂತರ ಅರಿವು ಕಾರ್ಯಕ್ರಮ ನಡೆಸಲಾಗುವುದು.
-ಜೆ. ಮೋಹನ್‌, ಡಿವೈಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next