ಬೆಂಗಳೂರು: ವಿಚಾರವಾದಿಗಳನ್ನು ಹತ್ಯೆ ಮಾಡಿದವರು ಭಯೋತ್ಪಾದಕರಷ್ಟೇ ಕ್ರೂರ. ಬಿಜೆಪಿ ಅಂತವರನ್ನು ರಕ್ಷಿಸುವ ಮೂಲಕ ಬಲಪಂಥೀಯ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ಕೆಪಿಸಿಸಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಗೌರಿ ಹತ್ಯೆ ಮಾಡಿದವರನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚುವ ಕೆಲಸ ಮಾಡಿದೆ. ಆದರೆ, ಮಹಾರಾಷ್ಟ್ರದಲ್ಲಿ ದಾಬೋಲ್ಕರ್ ಹಾಗೂ ಪನ್ಸಾರೆ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚುವ ಕೆಲಸವನ್ನು ಅಲ್ಲಿನ ಬಿಜೆಪಿ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಮುಸ್ಲಿಂ ವ್ಯಕ್ತಿ ವಿಚಾರವಾದಿಗಳ ಹತ್ಯೆ ಮಾಡಿದ್ದರೆ, ಅದನ್ನೇ ಭಯೋತ್ಪಾದನೆ ಎಂದು ಪ್ರತಿ ದಿನ ಹೋರಾಟ ಮಾಡುತ್ತಿದ್ದರು. ವಿಚಾರವಾದಿಗಳನ್ನು ಹತ್ಯೆ ಮಾಡಿದವರ ಪಟ್ಟಿಯಲ್ಲಿ ಗಿರೀಶ್ ಕಾರ್ನಾಡ್, ಪ್ರೊ. ಭಗವಾನ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸಾಹಿತಿಗಳ ಹೆಸರಿರುವುದು ಬಹಿರಂಗವಾಗಿದೆ. ಈ ಕೃತ್ಯದಲ್ಲಿ ತೊಡಗಿದವರನ್ನು ಭಯೋತ್ಪಾದಕರು ಎನ್ನದೇ ವಿಧಿಯಿಲ್ಲ ಎಂದರು.
ಬಿಜೆಪಿಯವರು ಪ್ರಗತಿಪರ ವಿಚಾರಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಮಹಿಳಾ ಮೀಸಲಾತಿಯ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಚಕಾರ ಎತ್ತುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ಮೀಸಲಾತಿ ವಿರೋಧಿಗಳಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಾಗಿದ್ದೇವೆಂದು ದಲಿತರ ಮನೆಯಲ್ಲಿ ತಿಂಡಿ ತಿಂದು ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಪರ ಇದ್ದೇವೆ ಎಂದು ಗಿಮಿಕ್ ಮಾಡುತ್ತಾರೆ.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪು ನೀಡಿದಾಗ ಕೇಂದ್ರ ಸರ್ಕಾರ ಮೌನವಾಗಿತ್ತು. ಮಂಡಲ್ ವರದಿಯನ್ನು ಎಲ್.ಕೆ. ಆಡ್ವಾಣಿ ವಿರೋಧಿಸಿದ್ದರು. ರಾಮಾಜೋಯಿಸ್ ಮೀಸಲಾತಿ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವಕಾಶ ವಂಚಿತರನ್ನು ಬಿಜೆಪಿ ಕಣ್ಣೆತ್ತಿಯೂ ನೋಡುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಾಜೀವ್ ಗಾಂಧಿ ರಾಷ್ಟ್ರದ ಅಪರೂಪದ ರಾಜಕಾರಣಿ, ಅವರ ದೂರದೃಷ್ಟಿತ್ವದಿಂದ ದೇಶದ ಕಟ್ಟ ಕಡೆಯ ಹಳ್ಳಿಯಲ್ಲಿಯೂ ಮೊಬೈಲ್ ಸಂಪರ್ಕ ದೊರೆತಿದೆ ಎಂದು ಅವರು ಹೇಳಿದರು.