ನವದೆಹಲಿ:ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ, ಆದಾಯ ತೆರಿಗೆ ಪಾವತಿದಾರರಿಗೆ ನೀಡಲಾಗುವ ನಿಗದಿತ ಕಡಿತ(ಸ್ಟ್ಯಾಂಡರ್ಡ್ ಡಿಡಕ್ಷನ್)ದ ಸೌಲಭ್ಯವನ್ನು ಹೊಸ ತೆರಿಗೆ ಪದ್ಧತಿಯಡಿ ರಿಟರ್ನ್ ಸಲ್ಲಿಸುವವರಿಗೂ ವಿಸ್ತರಣೆ ಮಾಡಲಾಗಿದೆ.
ಅದರಂತೆ, ಇನ್ನು ಮುಂದೆ ಹೊಸ ತೆರಿಗೆ ಪದ್ಧತಿಯಡಿ ವೇತನದಾರರು, ಪಿಂಚಣಿದಾರರು ಮತ್ತು ಕೌಟುಂಬಿಕ ಪಿಂಚಣಿ ಪಡೆಯುವವರು ಸ್ಟ್ಯಾಂಡರ್ಡ್ ಡಿಡಕ್ಷನ್‌ನ ಅನುಕೂಲತೆಯನ್ನು ಪಡೆಯಬಹುದು.
ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕಾಲಕಾಲಕ್ಕೆ ನಿಗದಿತ ಕಡಿತದ ಪ್ರಮಾಣವನ್ನು ಬದಲಾಯಿಸುತ್ತಾ ಇರುತ್ತದೆ. ಪ್ರಸ್ತುತ, ತೆರಿಗೆದಾರರು ಗರಿಷ್ಠ 50 ಸಾವಿರ ರೂ.ಗಳವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆಯಬಹುದು.
ಅಂದರೆ, ಏನನ್ನೂ ಮಾಡದೇ ನೀವು 50 ಸಾವಿರ ರೂ.ಗಳ ತೆರಿಗೆಯನ್ನು ಉಳಿಸಬಹುದು. ಈ ಡಿಡಕ್ಷನ್ ನಿಮ್ಮ ತೆರಿಗೆಯುಕ್ತ ಆದಾಯವನ್ನು ಕಡಿಮೆಗೊಳಿಸುವುದರಿಂದ, ನಿಮ್ಮ ಮೇಲಿನ ತೆರಿಗೆ ಹೊಣೆಗಾರಿಕೆಯೂ ತಗ್ಗುತ್ತದೆ.
ಈವರೆಗೆ ಹಳೆಯ ತೆರಿಗೆ ಪದ್ಧತಿಯನ್ನು ಅನುಸರಿಸಿಕೊಂಡು ಬಂದವರಿಗೆ ಮಾತ್ರವೇ ಇದರ ಲಾಭ ಸಿಗುತ್ತಿತ್ತು. ಆದರೆ, ಈಗ ಹೊಸ ತೆರಿಗೆ ಪದ್ಧತಿಯಡಿ ರಿಟರ್ನ್ ಸಲ್ಲಿಸುವವರೂ ಸ್ಟ್ಯಾಂಡರ್ಡ್ ಡಿಡಕ್ಷನ್‌ನ ಅನುಕೂಲತೆ ಪಡೆಯಬಹುದು.