Advertisement

ವಿಜಯಕ್ಕೆ ಪ್ರಭಾವಿಗಳ ಶಕ್ತಿ ಪ್ರದರ್ಶನ

11:56 AM Apr 21, 2018 | Team Udayavani |

ವಸತಿ ಸಚಿವರ ತವರು ಕ್ಷೇತ್ರ ವಿಜಯನಗರದಲ್ಲಿ ಈ ಬಾರಿ ಕಾಂಗ್ರೆಸ್‌, ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗುತ್ತಿದೆ. ಇನ್ನೊಂದೆಡೆ ವಿ.ಸೋಮಣ್ಣ ಪುನರಾಗಮನದಿಂದ ಗೋವಿಂದರಾಜನಗರ ಕ್ಷೇತ್ರದ ಚುನಾವಣೆಯೂ ಕಳೆಗಟ್ಟಿದೆ. ಇಲ್ಲಿ ಸೋಮಣ್ಣ ಅವರಿಗೆ, ಸಚಿವ ಕೃಷ್ಣಪ್ಪ ಅವರ ಪುತ್ರ ಪ್ರಿಯ ಕೃಷ್ಣ ಪ್ರತಿಸ್ಪರ್ಧಿ. ಇತ್ತ ಯಲಹಂಕ ಕ್ಷೇತ್ರದಲ್ಲಿ ತಾನು ಹೊಂದಿರುವ ಪ್ರಾಬಲ್ಯ ಮುಂದುವರಿಸಿಕೊಂಡು ಹೋಗಲು ಬಿಜೆಪಿ ಸಿದ್ಧತೆ ನಡೆಸಿದ್ದು, ಜೆಡಿಎಸ್‌ ಅಚ್ಚರಿಯ ಅಭ್ಯರ್ಥಿಯ ಕಣಕ್ಕಿಳಿಸುವ ಸೂಚನೆ ನೀಡಿದೆ.

Advertisement

ಗೋವಿಂದರಾಜ ನಗರದಲ್ಲಿ ವ್ಯಕ್ತಿಗತ ಹೋರಾಟ: ಗೋವಿಂದರಾಜ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಿಯ ಕೃಷ್ಣ  ಹಾಗೂ ಬಿಜೆಪಿಯಿಂದ ಮಾಜಿ ಸಚಿವ ವಿ.ಸೋಮಣ್ಣ ಕಣದಲ್ಲಿದ್ದು, ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. ಜೆಡಿಎಸ್‌ ಇನ್ನೂ ಅಭ್ಯರ್ಥಿ ಘೋಷಿಸಿಲ್ಲವಾದರೂ ಕ್ಷೇತ್ರಾದ್ಯಂತ ಪ್ರಚಾರದ ಅಬ್ಬರ ಜೋರಿದೆ. ಇಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಹೋರಾಟಕ್ಕಿಂತ ವಿ.ಸೋಮಣ್ಣ ಹಾಗೂ ಎಂ.ಕೃಷ್ಣಪ್ಪ ನಡುವಿನ ಹಣಾಹಣಿ ಎಂದೇ ಬಿಂಬಿತವಾಗಿದೆ. ಇಬ್ಬರೂ ಸಮಬಲದ ರಾಜಕಾರಣಿಗಳೇ.

ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಸಾಬೀತುಪಡಿಸುವ ಅಗ್ನಿಪರೀಕ್ಷೆ ಎಂಬಂತೆ ಚುನಾವಣಾ ಕಣದಲ್ಲಿ ಹೋರಾಟಕ್ಕಿಳಿದಿದ್ದಾರೆ. ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ, ಡಾ.ರಾಜ್‌ಕುಮಾರ್‌ ವಾರ್ಡ್‌, ಮಾರೇನಹಳ್ಳಿ, ಮಾರುತಿಮಂದಿರ, ಮೂಡಲಪಾಳ್ಯ, ನಾಗರಭಾವಿ, ನಾಯಂಡಹಳ್ಳಿ ವಾರ್ಡ್‌ಗಳನ್ನು ಗೋವಿಂದರಾಜನಗರ ಕ್ಷೇತ್ರ ಒಳಗೊಂಡಿದ್ದು, ಇಬ್ಬರು ಕಾಂಗ್ರೆಸ್‌, ಒಬ್ಬರು ಜೆಡಿಎಸ್‌ ಹಾಗೂ ಮೂವರು ಬಿಜೆಪಿ ಕಾರ್ಪೊರೇಟರ್‌ಗಳಿದ್ದಾರೆ.

ವಿಜಯನಗರ; ಕೈ-ಕಮಲಕ್ಕೆ ಪ್ರತಿಷ್ಠೆ: ವಿಜಯನಗರದಲ್ಲೂ ರಾಜಕೀಯ ಕಾಳಗ ಜೋರಾಗೇ ಇದೆ. ಇಲ್ಲಿ ವಸತಿ  ಸಚಿವ ಎಂ.ಕೃಷ್ಣಪ್ಪ ಕಾಂಗ್ರೆಸ್‌ನಿಂದ  ಸ್ಪರ್ಧೆ ಮಾಡಿದರೆ, ಬಿಜೆಪಿಯಿಂದ ಪಾಲಿಕೆ ಮಾಜಿ ಸದಸ್ಯ ಎಚ್‌.ರವೀಂದ್ರ ಅಭ್ಯರ್ಥಿ. ಇಲ್ಲೂ ನಡೆಯಲಿರುವುದು ವಿ.ಸೋಮಣ್ಣ ಹಾಗೂ ಎಂ.ಕೃಷ್ಣಪ್ಪ ನಡುವಿನ ಹೋರಾಟವೇ. ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ವಿಜಯನಗರ-ಗೋವಿಂದರಾಜನಗರ ರಾಜಕೀಯವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿರುವುದರಿಂದ ಈ ಎರಡೂ ಕ್ಷೇತ್ರಗಳಲ್ಲಿ ಆರು ತಿಂಗಳ ಹಿಂದೆಯೇ ವೈಯಕ್ತಿಕವಾಗಿ ಪ್ರಚಾರ ಆರಂಭವಾಗಿತ್ತು.

ಇದೀಗ ಪಕ್ಷಗಳ ಅಧಿಕೃತ ಚಿಹ್ನೆಯಡಿ ಮತ ಕೇಳಬೇಕಷ್ಟೇ. ವಿಜಯನಗರ ವಿಧಾನಸಭೆ ಕ್ಷೇತ್ರ ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ, ಬಾಪೂಜಿನಗರ, ಗಾಳಿ  ಆಂಜನೇಯ ದೇವಾಲಯ, ದೀಪಾಂಜಲಿ ನಗರ ಸೇರಿ ಎಂಟು ವಾರ್ಡ್‌ಗಳನ್ನು ಹೊಂದಿದ್ದು, ಆ ಪೈಕಿ ಐದರಲ್ಲಿ ಬಿಜೆಪಿ, ಎರಡಲ್ಲಿ ಕಾಂಗ್ರೆಸ್‌, ಒಂದರಲ್ಲಿ ಪಕ್ಷೇತರ ಅಭ್ಯರ್ಥಿಗಳು ಬಿಬಿಎಂಪಿ ಚುನಾವಣೆಯಲ್ಲಿ ಜಯಗಳಿಸಿದ್ದರು. ನಂತರ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್‌ ಸೇರಿದ್ದಾರೆ.

Advertisement

ಯಲಹಂಕ ಗೆಲುವಿಗೆ ಸಮಬಲದ ಹೋರಾಟ: ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಲವು  ಕ್ಷೇತ್ರಗಳನ್ನು ಒಳಗೊಂಡು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಯಲಹಂಕ ಅತಿದೊಡ್ಡ ಕ್ಷೇತ್ರದ ಜತೆಗೆ ರಾಜಕೀಯವಾಗಿ ಪ್ರತಿಷ್ಠೆಯ ಕಣವೂ ಹೌದು. ಬಿಜೆಪಿಯಿಂದ ಇಲ್ಲಿ ಎಸ್‌.ಆರ್‌.ವಿಶ್ವನಾಥ್‌ ಅಭ್ಯರ್ಥಿಯಾದರೆ ಕಾಂಗ್ರೆಸ್‌ನಿಂದ ಗೋಪಾಲಕೃಷ್ಣ ಅಭ್ಯರ್ಥಿ.

ಜೆಡಿಎಸ್‌ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. ಆದರೆ, ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಚಾರ ಪ್ರಾರಂಭಿಸಿಬಿಟ್ಟಿದೆ. ಜೆಡಿಎಸ್‌ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಪ್ರಚಾರದ ಜತೆಗೆ ಯಾರು ಜೆಡಿಎಸ್‌ ಅಭ್ಯರ್ಥಿಯಾಗಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಇಲ್ಲಿ ಸಮಬಲದ ಸಾಮರ್ಥ್ಯ ಹೊಂದಿದೆ. ಅಭ್ಯರ್ಥಿ ಯಾರೇ ಆಗಲಿ ಪಕ್ಷಗಳ ಶಕ್ತಿಗೇನೂ ಕಡಿಮೆಯಿಲ್ಲ.

ಮಹಾಲಕ್ಷ್ಮಿ ಲೇಔಟ್‌ ಮರುವಶಕ್ಕೆ ಲೆಕ್ಕಾಚಾರ: ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರ ಬೆಂಗಳೂರಿನ ರಾಜಕೀಯದಲ್ಲಿ ವಿಶೇಷವಾದ ಕಾರಣಗಳಿಗೆ ಖ್ಯಾತಿ ಪಡೆದಿದೆ. ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿ ಘೋಷಣೆಗೆ ಮುನ್ನ ಇಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರು ಕೇಳಿ ಬಂದಿತ್ತು. ಕ್ಷೇತ್ರ ವಶಕ್ಕೆ ಪಡೆಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ನಾನಾ ಲೆಕ್ಕಾಚಾರ ಹಾಕಿದರೂ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಬಗ್ಗೆ ಪ್ರಾರಂಭದಲ್ಲೇ ಅಪಸ್ವರ ಎದ್ದಿದೆ.

ಜೆಡಿಎಸ್‌ನಿಂದ ಹಾಲಿ ಶಾಸಕ ಗೋಪಾಲಯ್ಯ, ಬಿಜೆಪಿಯಿಂದ ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ನೆ.ಲ.ನರೇಂದ್ರಬಾಬು, ಕಾಂಗ್ರೆಸ್‌ನಿಂದ ಮಂಜುನಾಥ್‌ಗೌಡ ಅಭ್ಯರ್ಥಿಗಳು. ಇವರ ಜತೆಗೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಎಂ.ನಾಗರಾಜ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಜತೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಗಿರೀಶ್‌ ನಾಶಿ ಸಹ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ, ಕ್ಷೇತ್ರದ ಹೋರಾಟ ಜಿದ್ದಾಜಿದ್ದಿಯಾಗುವ ಎಲ್ಲ ಲಕ್ಷಣಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next