ನವದೆಹಲಿ: ಮುಂದಿನ ತಿಂಗಳ 1ರಿಂದ ಕೇಂದ್ರದ ಹೊಸ ಕಾರ್ಮಿಕ ನಿಯಮಗಳು ಜಾರಿಗೆ ಬರಲಿವೆ. ಅದರ ಪರಿಣಾಮ, ಉದ್ಯೋಗಿಗಳ ದಿನದ ಸೇವಾವಧಿ ಹಾಗೂ ವಾರದ ರಜೆಗಳು (ವೀಕ್ ಆಫ್ ಗಳು) ಹೆಚ್ಚಾಗಲಿವೆ. ಅದರ ಜೊತೆಗೆ, ಉದ್ಯೋಗಿಗಳ ವೇತನದಿಂದ ಕಡಿತವಾಗುವ ಭವಿಷ್ಯ ನಿಧಿಗೆ ದೇಣಿಗೆ ಪ್ರಮಾಣವೂ ಜಾಸ್ತಿಯಾಗಲಿದೆ. ಇದರ ಪರಿಣಾಮವಾಗಿ, ಉದ್ಯೋಗಿಗಳ ಕೈಗೆ ಸಿಗುವ ವೇತನ ಕಡಿಮೆಯಾಗಲಿದೆ.
ಹೊಸ ಕಾರ್ಮಿಕ ನೀತಿಯ ಪ್ರಕಾರ, ಕಂಪನಿಗಳು ತಮ್ಮ ಉದ್ಯೋಗಿಗಳ ದೈನಂದಿನ ಸೇವಾವಧಿಯನ್ನು ಈಗಿರುವ 8-9 ಗಂಟೆಯಿಂದ 12 ಗಂಟೆಯವರೆಗೆ ವಿಸ್ತರಿಸಬಹುದಾಗಿದೆ.
ಜೊತೆಗೆ, ವಾರಕ್ಕೆ ಮೂರು ದಿನ ವೀಕ್-ಆಫ್ ಕೊಡಬಹುದಾಗಿದೆ. ಅಂದರೆ, ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸವಿರಲಿದೆ.
ಈ ಸೌಲಭ್ಯವು, ವಾರಕ್ಕೆ 48 ಗಂಟೆಗಳ ಕಾಲ ದುಡಿಮೆ ಆಗಲೇಬೇಕೆಂಬ ನಿಯಮ ಉಲ್ಲಂಘನೆಯಾಗದಂತೆ ಕಂಪನಿಗಳು ನೋಡಿಕೊಳ್ಳಬೇಕಿರುತ್ತದೆ.
ಇದನ್ನೂ ಓದಿ:ಅಗ್ನಿಪಥ ಯೋಜನೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ
ಹೊಸ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಉದ್ಯೋಗಿಯ ಮೂಲ ವೇತನ, ಒಟ್ಟಾರೆ ವೇತನದ ಶೇ. 50ರಷ್ಟು ಮಾತ್ರವೇ ಇರಲಿದೆ. ಭವಿಷ್ಯ ನಿಧಿಗಾಗಿ ಮಾಸಿಕ ವೇತನದಲ್ಲಿ ಆಗುವ ಕಡಿತ ಹೆಚ್ಚಾಗಲಿದೆ.
ಇದರಿಂದ, ನಿವೃತ್ತಿಯ ನಂತರ ಸಿಗುವ ಭವಿಷ್ಯ ನಿಧಿ ಹಾಗೂ ಗ್ರಾಚ್ಯುಟಿ ಹಣದಲ್ಲಿ ಹೆಚ್ಚಳವಾಗಲಿದೆ.