Advertisement
ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಆಲೋಚನೆಗಳನ್ನು ಹಂಚಿಕೊಳ್ಳಲು ಅಥವಾ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಸಂವಹನ ಅತೀ ಅಗತ್ಯವಾಗಿದೆ. ಸಂವಹನವು ಭಾಷಿಕವಾಗಿರಬಹುದು, ಭಾಷೆ ರಹಿತವಾಗಿರಬಹುದು. ಭಾಷೆಯನ್ನು ಉಪಯೋಗಿಸದೆಯೇ ಆಂಗಿಕಗಳು ಮತ್ತು ಹಾವಭಾವಗಳ ಮೂಲಕ ಎಷ್ಟೋ ವಿಚಾರಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಪಡಿಸಲು ಸಾಧ್ಯವಿದೆ. ಉದಾಹರಣೆಗೆ, ನಮ್ಮ ಸಿಟ್ಟನ್ನು ಮುಖಭಾವದ ಮೂಲಕವೇ ಯಶಸ್ವಿಯಾಗಿ ಅಭಿವ್ಯಕ್ತಿಪಡಿಸಬಹುದು. ಅದಕ್ಕಾಗಿ “ನನಗೆ ಸಿಟ್ಟು ಬಂದಿದೆ’ ಎಂದು ಹೇಳಬೇಕಾಗಿಯೇ ಇಲ್ಲ. ಆದರೆ ಸಂವಹನವು ಭಾಷಿಕವಾಗಿರಲಿ, ಭಾಷೆಯನ್ನು ಉಪಯೋಗಿಸದೆ ಇರಲಿ; ಅದು ಪರಿಣಾಮಕಾರಿಯಾಗಲು ಹಲವು ಅಂಶಗಳು ಪ್ರಾಮುಖ್ಯವಾಗಿವೆ.
Related Articles
ವಯೋವೃದ್ಧರಲ್ಲಿ ಈ ಪ್ರಕ್ರಿಯೆಯು ಇಷ್ಟು ವೇಗವಾಗಿ ನಡೆಯುತ್ತದೆಯೇ? ಅದರಲ್ಲೂ ಶ್ರವಣ ದೋಷ ಹೊಂದಿರುವ ಮತ್ತು ಡಿಮೆನ್ಶಿಯಾ ಸಮಸ್ಯೆ ಹೊಂದಿರುವ ವಯೋವೃದ್ಧರ ಸ್ಥಿತಿಯನ್ನೊಮ್ಮೆ ಕಲ್ಪಿಸಿಕೊಳ್ಳಿ!
Advertisement
ಗ್ರಹಣ ಶಕ್ತಿಯು ಕುಂದುವುದು ಮತ್ತು ಶ್ರವಣ ಶಕ್ತಿ ನಷ್ಟವಾಗುವುದು ಎರಡೂ ವಯಸ್ಸಾಗುವುದರೊಂದಿಗೆ ಸಂಬಂಧ ಹೊಂದಿರುವ ಎರಡು ವಿಭಿನ್ನ ನರಶಾಸ್ತ್ರೀಯ ಸ್ಥಿತಿಗಳು. ಗ್ರಹಣ ಶಕ್ತಿ ವೈಫಲ್ಯ ಎಂಬುದು ಲಘು ವೈಫಲ್ಯದಿಂದ ಹಿಡಿದು ಪೂರ್ಣ ಡಿಮೆನ್ಶಿಯಾದ ತನಕ ಹಲವು ಸ್ತರಗಳಲ್ಲಿ ಇರಬಲ್ಲುದಾಗಿದೆ. ವಯಸ್ಸಿಗೆ ಸಂಬಂಧಿಸಿದ ಶ್ರವಣ ಶಕ್ತಿ ನಷ್ಟವು ಸ್ವತಂತ್ರವಾಗಿ ಡಿಮೆನ್ಶಿಯಾದ ಜತೆಗೆ ಸಂಬಂಧ ಹೊಂದಿರುತ್ತದೆ ಎಂಬುದನ್ನು ಅನೇಕ ಅಧ್ಯಯನ ವರದಿಗಳು ಹೇಳಿವೆ. ಆದ್ದರಿಂದ ಡಿಮೆನ್ಶಿಯಾ ಬೆಳವಣಿಗೆಯ ಸ್ವತಂತ್ರ ಲಕ್ಷಣಗಳಲ್ಲಿ ಶ್ರವಣ ಶಕ್ತಿ ನಷ್ಟವೂ ಒಂದು ಎನ್ನಬಹುದಾಗಿದೆ.
ಡಿಮೆನ್ಶಿಯಾವು ಸ್ಮರಣೆ, ಯೋಚನಾ ಶಕ್ತಿ ಮತ್ತು ಸಾಮಾಜಿಕ ಸಾಮರ್ಥ್ಯಗಳನ್ನು ಬಾಧಿಸುವ ಅನಾರೋಗ್ಯ ಲಕ್ಷಣಗಳ ಸಮೂಹವಾಗಿದ್ದು, ಇದರಿಂದ ದೈನಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಇದೊಂದು ನಿರ್ದಿಷ್ಟ ಕಾಯಿಲೆಯಲ್ಲ; ಆದರೆ ಅನೇಕ ವಿಭಿನ್ನ ಅನಾರೋಗ್ಯಗಳು ಡಿಮೆನ್ಶಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಡಿಮೆನ್ಶಿಯಾವು ಸ್ಮರಣ ಶಕ್ತಿ ನಷ್ಟವನ್ನು ಒಳಗೊಂಡಿದೆಯಾದರೂ ಸ್ಮರಣ ಶಕ್ತಿ ನಷ್ಟಕ್ಕೆ ಅನ್ಯ ಕಾರಣಗಳೂ ಇರುತ್ತವೆ. ವಯೋವೃದ್ಧರಲ್ಲಿ ಪ್ರಗತಿಶೀಲ ಡಿಮೆನ್ಶಿಯಾಕ್ಕೆ ಅಲಿlàಮರ್ಸ್ ಕಾಯಿಲೆಯು ಸರ್ವೇಸಾಮಾನ್ಯವಾದ ಕಾರಣವಾಗಿರುತ್ತದೆಯಾದರೂ ಡಿಮೆನ್ಶಿಯಾಕ್ಕೆ ಇನ್ನೂ ಹಲವಾರು ಕಾರಣಗಳಿರುತ್ತವೆ. ಕಾರಣಗಳನ್ನು ಆಧರಿಸಿ ಕೆಲವು ಲಕ್ಷಣಗಳನ್ನು ಸರಿಪಡಿಸಬಹುದಾಗಿದೆ.
ಇಂಥವರಲ್ಲಿ ಕಾಣಿಸಿಕೊಳ್ಳುವ ಸರ್ವೇಸಾಮಾನ್ಯವಾದ ಲಕ್ಷಣಗಳ್ಯಾವುವು?ಸಿಟ್ಟು, ಗೊಂದಲ, ಆತಂಕ, ಉದ್ವಿಗ್ನತೆ ಮತ್ತು ದುಃಖೀತರಾಗುವುದು ಡಿಮೆನ್ಶಿಯಾಕ್ಕೆ ಸಂಬಂಧಿಸಿದ ಕೆಲವು ಭಾವನಾತ್ಮಕ ಲಕ್ಷಣಗಳು. ಇವು ಕೆಲವು ಅನಿರೀಕ್ಷಿತ ವರ್ತನೆಗಳ ಉತ್ಪನ್ನವಾಗಿ ಪ್ರಕಟಗೊಳ್ಳಬಹುದಾಗಿದೆ. ಇಂಥವರು ಅಲ್ಪಸ್ವಲ್ಪ ಪ್ರಚೋದನೆಗೂ ಅತಿಯಾಗಿ ಕಿರಿಕಿರಿ ಅನುಭವಿಸಬಹುದು, ಉದ್ವಿಗ್ನಗೊಳ್ಳಬಹುದು. ಗೊಂದಲಕ್ಕೆ ಒಳಗಾಗುವ, ಆಲೋಚನೆಗಳು ದಿಕ್ಕುತಪ್ಪುವ ಪ್ರಕ್ರಿಯೆ ಆಗಾಗ ಪ್ರಕಟಗೊಳ್ಳಬಹುದು, ತಮ್ಮ ಸುತ್ತಮುತ್ತ ಇರುವವರನ್ನು ನಂಬಿಸುವ, ದಿಕ್ಕುತಪ್ಪಿಸುವ ಕೆಲಸ ಮಾಡಬಹುದು. ಇಂತಹ ವ್ಯಕ್ತಿಗಳ ಜತೆಗೆ ಸಂವಹನ ನಡೆಸುವುದು ಹತಾಷೆಯ ಪ್ರಯತ್ನವಾಗಬಹುದು, ಆದರೆ ಇವೆಲ್ಲವೂ ಕಾಯಿಲೆಯಿಂದಾಗಿ ಉಂಟಾಗುವಂಥವಾಗಿದ್ದು, ಕಾಯಿಲೆಯು ಮಿದುಳಿನಲ್ಲಿ ಉಂಟು ಮಾಡುವ ಬದಲಾವಣೆಗಳಿಂದಾಗಿ ಪ್ರಕಟಗೊಳ್ಳುವಂಥವಾಗಿರುತ್ತವೆ. ಇವುಗಳನ್ನು ಮಾಡಬೇಡಿ
– ಇಂಥವರ ಜತೆಗೆ ವಾದಕ್ಕೆ ಇಳಿಯದಿರಿ ಅಥವಾ ಅವರನ್ನು ಉದ್ವಿಗ್ನಗೊಳಿಸುವ ವಿಚಾರಗಳನ್ನು ಒತ್ತಾಯಪೂರ್ವಕ ಹೇರಬೇಡಿ. “ಇತರ ಆಯ್ಕೆಗಳಿಲ್ಲದ ವಿನಾ ಅವರನ್ನು ಯಾವುದೇ ವಿಚಾರಗಳಲ್ಲಿ ನಿಯಂತ್ರಿಸಬೇಡಿ’. – ಅಂಥವರಿಗೆ ದೀರ್ಘ ವಿವರಣೆ ಕೊಡುವುದು, ಕಾರಣಗಳನ್ನು ವಿವರಿಸುವುದರಿಂದ ಉಪಯೋಗವಿಲ್ಲ. ಡಿಮೆನ್ಶಿಯಾ ಹೊಂದಿರುವವರಿಗೆ ಕಾರ್ಯಕಾರಣ ಸಮರ್ಥನೆ ನೀಡುವುದು ಸಾಧ್ಯವಿಲ್ಲ. ಕಾರಣ ಕೊಡುವ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳುವುದರಿಂದಲೂ ಅವರು ಉದ್ವಿಗ್ನರಾಗಬಹುದು. – ಪರಿಸ್ಥಿತಿಯನ್ನು ನಿಭಾಯಿಸುವ ಅವರ ಸಾಮರ್ಥ್ಯವನ್ನು ಪ್ರಶ್ನಿಸುವುದು ಅಥವಾ ವಾದ ಮಾಡುವುದು ಉದ್ವಿಗ್ನತೆಗೆ ಕಾರಣವಾಗಬಹುದು. ತಮ್ಮ ಸ್ವಂತ ಚಟುವಟಿಕೆ, ವ್ಯವಹಾರಗಳನ್ನು ನಿಭಾಯಿಸುವ ಅವರ ಸಾಮರ್ಥ್ಯವನ್ನು ಪ್ರಶ್ನಿಸುವುದರಿಂದ ಅವರನ್ನು ಕೆಣಕಿದಂತಾಗುತ್ತದೆ. – ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಅಥವಾ ನಿರಾಕರಿಸಲು ಹಳೆಯ ವಿಚಾರಗಳನ್ನು, ಘಟನೆಗಳನ್ನು ಎತ್ತಬೇಡಿ. ಸುಳ್ಳು ಹೇಳುತ್ತಿದ್ದೀರಿ, ದಿಕ್ಕುತಪ್ಪಿಸುದ್ದೀರಿ ಎಂಬುದಾಗಿ ಅವರನ್ನು ನಿಂದಿಸಬೇಡಿ. ಹೀಗೆ ಮಾಡಿ
ವಯೋವೃದ್ಧರಲ್ಲಿ ಇಂತಹ ಲಕ್ಷಣಗಳನ್ನು ಗುರುತಿಸುವುದು ಒಂದು ಸವಾಲಾಗಿದ್ದರೂ ಇಂತಹ ನಡವಳಿಕೆಗಳು ರೋಗಗ್ರಸ್ಥ ಮಿದುಳಿನ ಲಕ್ಷಣಗಳು ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ತೀವ್ರ ಡಿಮೆನ್ಶಿಯಾ ಹೊಂದಿರುವ ಅನೇಕ ಮಂದಿಯ ಮಿದುಳಿನಲ್ಲಿ ಭಾವನೆಗಳು ಮತ್ತು ಸಾಮಾಜಿಕ ನಡವಳಿಕೆಯನ್ನು ನಿಯಂತ್ರಿಸುವ ಭಾಗದ ಕಾರ್ಯಚಟುವಟಿಕೆ ನಶಿಸಿರುತ್ತದೆ. ವ್ಯಕ್ತಿಯು ವಾಸ್ತವ ಮತ್ತು ಅವಾಸ್ತವಗಳ ನಡುವೆ ವ್ಯತ್ಯಾಸ ಗುರುತಿಸುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತಾರೆ ಮತ್ತು ಸುಳ್ಳು ಹೇಳುವುದರ ವಿಚಾರವಾಗಿ ಅದು ಅನೈತಿಕ ಎಂಬ ಪ್ರಜ್ಞೆಯನ್ನು ಕಳೆದುಕೊಂಡಿರುತ್ತಾರೆ. ಸರಳ ವಿವರಣೆಗಳ ಮೂಲಕ, ಫೊಟೋಗಳು ಮತ್ತು ಬಲವಾದ ಸಾಕ್ಷಿಗಳ ಸಹಿತವಾಗಿ ಸಂಭಾಷಿಸುವುದರಿಂದ ಇಂತಹವರು ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಬಹುದು ಅಥವಾ ಬೇರೆಯದರ ಕಡೆಗೆ ಪುನರ್ ನಿರ್ದೇಶಿಸಬಹುದು. ಮುಂದಿನ ವಾರಕ್ಕೆ ಈ ಲೇಖನದ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ, ಕೆಎಂಸಿ ಆಸ್ಪತ್ರೆ , ಮಣಿಪಾಲ ಡಾ| ದೀಪಾ ಎನ್. ದೇವಾಡಿಗ
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ ಎಂಸಿಎಚ್‌ಪಿ, ಮಾಹೆ, ಮಣಿಪಾಲ