Advertisement
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಾಯಿಲೆ ಉಂಟು ಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ದೇಹದ ಸಾಮರ್ಥ್ಯವೇ ರೋಗ ನಿರೋಧಕ ಶಕ್ತಿ. ಇದು ಚೆನ್ನಾಗಿ ಕಾರ್ಯನಿರ್ವಹಿಸಬೇಕಾದರೆ ಅದು ಸಮತೋಲಿತವಾಗಿರಬೇಕು ಮತ್ತು ಸಾಮರಸ್ಯದಿಂದ ಇರಬೇಕು. ಜೀವನ ವಿಧಾನದಲ್ಲಿ ಕಿರು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ದೇಹದ ಪ್ರತೀ ಅಂಗಾಂಗವೂ ತನ್ನ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಅಂತಹ ಜೀವನಶೈಲಿ ಬದಲಾವಣೆಗಳು ಎಂದರೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನವನ್ನು ತ್ಯಜಿಸುವುದು, ಮಾದರಿ ದೇಹತೂಕವನ್ನು ಕಾಪಾಡಿ ಕೊಳ್ಳುವುದು, ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು.
Related Articles
Advertisement
ನಿಮ್ಮ ಆಹಾರ ಶಿಫಾರಸುಗಳು :
- ತೆಳು ಮಾಂಸ, ಕೋಳಿಮಾಂಸ, ಮೀನು ದ್ವಿದಳ ಧಾನ್ಯಗಳು, ಮೊಟ್ಟೆ, ಯೋಗರ್ಟ್ ಇತ್ಯಾದಿ ಆಹಾರವಸ್ತುಗಳು ಪ್ರೊಟೀನ್ ಅಂಶವನ್ನು ಧಾರಾಳವಾಗಿ ಹೊಂದಿವೆ. ಆ್ಯಂಟಿಬಾಡಿಗಳು ಮತ್ತು ಬಿಳಿ ರಕ್ತ ಕಣಗಳಂತಹ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಪ್ರಮುಖ ಅಂಗಗಳನ್ನು ಕಟ್ಟಿ ಬೆಳೆಸುವುದಕ್ಕೆ ಪ್ರೊಟೀನ್ ಅಗತ್ಯವಾಗಿ ಬೇಕು. ಬೂತಾಯಿ ಮೀನಿನಲ್ಲಿ ಪ್ರೊಟೀನ್ ಮಾತ್ರವಲ್ಲದೆ ಉರಿಯೂತ ನಿರೋಧಕವಾಗಿ ಕೆಲಸ ಮಾಡುವ ಒಮೇಗಾ 3 ಆವಶ್ಯಕ ಫ್ಯಾಟಿ ಆ್ಯಸಿಡ್, ಝಿಂಕ್ ಮತ್ತು ಸೆಲೆನಿಯಂ ಕೂಡ ಇರುವುದರಿಂದ ಅದು ನಮ್ಮ ಆಹಾರದ ಭಾಗವಾಗಿರುವುದು ಇನ್ನಷ್ಟು ರಕ್ಷಣೆಯನ್ನು ಒದಗಿಸುತ್ತದೆ.
- ಚೀನೀ ಕಾಯಿಗಳನ್ನು ಕತ್ತರಿಸುವಾಗ ಬೀಜಗಳನ್ನು ಎಸೆಯುವುದುಂಟು, ಆದರೆ ಈಗ ಅವುಗಳನ್ನು ತೆಗೆದಿಟ್ಟು ಸೇವಿಸುವುದಕ್ಕೆ ಉತ್ತಮ ಕಾಲ. ಚೀನೀಕಾಯಿಯ ಅರ್ಧ ಕಪ್‌ನಷ್ಟು ಬೀಜಗಳಲ್ಲಿ 5 ಮಿಲಿಗ್ರಾಂನಷ್ಟು ಝಿಂಕ್ ಇರುತ್ತದೆ. ಇದು ರೋಗ ನಿರೋಧಕ ಶಕ್ತಿ ಸಮರ್ಪಕವಾಗಿ ಕೆಲಸ ಮಾಡಲು ಅಗತ್ಯ. ನೀವು ಚೀನೀಕಾಯಿ ಬೀಜಗಳನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ಅಥವಾ ಮೈಕ್ರೊವೇವ್ ಓವನ್‌ನಲ್ಲಿ ಏಳೆಂಟು ನಿಮಿಷ ಬೇಯಿಸಿ ತಿನ್ನಬಹುದು.
- ಯೋಗರ್ಟ್ ಮತ್ತು ಮೊಸರು ಅಗತ್ಯ: ನಮ್ಮ ದೇಹದ ಶೇ.70ರಷ್ಟು ರೋಗ ನಿರೋಧಕ ಅಂಗಾಂಶಗಳು ಕರುಳಿನಲ್ಲಿ ಇರುತ್ತವೆ. ಕೆಲವು ಬಗೆಯ ಯೋಗರ್ಟ್‌ಗಳು ಮತ್ತು ಮೊಸರಿನಲ್ಲಿ ಕಂಡುಬರುವ ಸೂಕ್ಷ್ಮಾಣುಗಳ ಸಜೀವ ಸಮೂಹಗಳು ನಮ್ಮ ಪಚನಾಂಗ ವ್ಯೂಹವನ್ನು ಸೇರಿದ ಬಳಿಕ ಅಲ್ಲಿರುವ ಲ್ಯಾಕ್ಟೊಬೆಸಿಲಸ್ ಆ್ಯಸಿಡೋಫಿಲಸ್‌ನಂತಹ ಬ್ಯಾಕ್ಟೀರಿಯಾಗಳ ಜತೆಗೆ ಸೇರಿಕೊಂಡು ವೃದ್ಧಿಸುತ್ತವೆ. ನಿಮ್ಮ ಫ್ರುಟ್ ಡೆಸರ್ಟ್‌ಗಳನ್ನು ಯೋಗರ್ಟ್‌ನಿಂದ ಅಲಂಕರಿಸಲು ಮತ್ತು ದಾಲಿcನ್ನಿ ಅಥವಾ ನಟ್‌ಮೆಗ್ ಪುಡಿ ಸಿಂಪಡಿಸಿ ವೆನಿಲ್ಲಾ ಫ್ಲೇವರ್ ಜತೆಗೆ ಸ್ವಾದ ಹೆಚ್ಚಿಸಲು ಪ್ರಯತ್ನಿಸಿ.
- ಜಪಾನಿಯರಲ್ಲಿ ರೋಗ ಉಂಟಾಗುವಿಕೆ ಕಡಿಮೆ. ಯಾಕೆಂದರೆ ಅವರು ಗ್ರೀನ್ ಟೀ ಕುಡಿಯುವುದು ಹೆಚ್ಚು. ಇದು ಆ್ಯಂಟಿಓಕ್ಸಿಡೆಂಟ್‌ಗಳ ಆಗರವಾಗಿದೆ. ಕಪ್ಪು ಚಹಾದಲ್ಲಿರುವ ಎಲ್-ಥಿಯಾನಿನ್ ಎಂಬ ಸಂಯುಕ್ತವು ರೋಗ ಪ್ರತಿರೋಧ ಶಕ್ತಿಗೆ ಬಲ ಒದಗಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
- ಬೆಳ್ಳುಳ್ಳಿ ಮತ್ತು ನೀರುಳ್ಳಿಗಳಲ್ಲಿ ಗಂಧಕ ಸಂಯುಕ್ತಗಳಿದ್ದು, ಇದು ಮ್ಯಾಕ್ರೊಫೇಗಸ್ ಮತ್ತು ಟಿ ಸೆಲ್‌ಗಳ ಹೋರಾಟ ಶಕ್ತಿಯನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ. ಅರಶಿನ, ದಾಲಿcನ್ನಿ, ಲವಂಗ ಮತ್ತು ಕಾಳುಮೆಣಸಿನಂತಹ ಸಂಬಾರ ಪದಾರ್ಥಗಳು ಉರಿಯೂತ ನಿರೋಧಕ ಅಂಶಗಳನ್ನು ಹೊಂದಿವೆ. ಇವುಗಳನ್ನು ಅನಾದಿ ಕಾಲದಿಂದಲೂ ಭಾರತೀಯ ಅಡುಗೆ ಪದ್ಧತಿಯಲ್ಲಿ ಉಪಯೋಗಿಸಲಾಗುತ್ತಿದೆ.
- ತಾಜಾ ಹಣ್ಣು ತರಕಾರಿಗಳಿಂದ ಊಟದ ಬಟ್ಟಲನ್ನು ಅಲಂಕರಿಸಿ. ಸಾವಯವವಾಗಿರಲಿ ಅಲ್ಲದಿರಲಿ; ಪ್ರತೀ ದಿನ ಏಳೆಂಟು ಸಲವಾದರೂ ಗಾಢ ಬಣ್ಣದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
- ಸಂಸ್ಕರಿತ ಸಕ್ಕರೆ ಮತ್ತು ಪಿಷ್ಟ ಸಹಿತ ಆಹಾರವಸ್ತುಗಳು ಹೆಚ್ಚು ಗ್ಲೆ„ಸೇಮಿಕ್ ಇಂಡೆಕ್ಸ್ ಹೊಂದಿದ್ದು, ಬಿಳಿ ರಕ್ತ ಕಣಗಳ ಚಟುವಟಿಕೆಯನ್ನು ತಗ್ಗಿಸುತ್ತವೆ. ಇದರಿಂದ ರೋಗಕಾರಕಗಳ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳ ಸಾಮರ್ಥ್ಯ ಕುಗ್ಗುತ್ತದೆ.
- ಸ್ಯಾಚ್ಯುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್‌ಗಳನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಉರಿಯೂತ ಉಂಟಾಗುವ ಸಾಧ್ಯತೆ ಇರುತ್ತದೆ.
- ಮದ್ಯವು ರೋಗ ನಿರೋಧಕ ಶಕ್ತಿಯನ್ನು ಕೂಡ ಅಮಲಿಗೀಡು ಮಾಡುತ್ತದೆ. ಆದ್ದರಿಂದ ವರ್ಜಿಸುವುದೇ ಲೇಸು.