Advertisement

ಊರಲ್ಲೇ ವಲಸಿಗರಿಗೆ ಕೆಲಸ?

09:25 AM Jun 12, 2020 | mahesh |

ಹೊಸದಿಲ್ಲಿ : ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಸೇರಿಸುವುದು ಮಾತ್ರವಲ್ಲ, ಅವರಿಗೆ ದುಡಿಯುವ ಮಾರ್ಗವನ್ನು ಕಲ್ಪಿಸಲು ಕೇಂದ್ರ ಸರಕಾರ ಹೆಜ್ಜೆಯಿಟ್ಟಿದೆ. ಇದಕ್ಕಾಗಿ, ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 70,000 ಕಿ.ಮೀ.ವರೆಗಿನ ರಸ್ತೆ ನಿರ್ಮಾಣ, ಬಡವರಿಗೆ 50 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಕೋವಿಡ್ ಲಾಕ್‌ಡೌನ್‌ನಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಪೂರ್ತಿಗೊಳಿಸುವ ಹಾಗೂ ಅದೇ ಕಾಮಗಾರಿಗಳಿಂದ ವಲಸೆ ಕಾರ್ಮಿಕರ ದುಡಿಮೆಗೆ ದಾರಿ ತೋರುವ ಎರಡು ಅನುಕೂಲಗಳನ್ನು ಸರಕಾರ ಆಲೋಚಿಸಿದೆ ಎಂದಿರುವ ಅವರು, ಈ ಕುರಿತಂತೆ ನೀಲನಕ್ಷೆ ಸಿದ್ಧವಾಗಿದ್ದು, ಎಲ್ಲಾ ರಾಜ್ಯಗಳಿಗೆ ಈ ಕುರಿತಂತೆ ಸೂಚನೆ ರವಾನಿಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪುನರಾರಂಭಿಸಲು ಹಾಗೂ ಆ ಕಾಮಗಾರಿಗಳಲ್ಲಿ ಕಟ್ಟಡ ನಿರ್ಮಾಣ ಕೌಶಲ್ಯವಿರುವ ವಲಸೆ ಕಾರ್ಮಿಕರನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ರಾಜ್ಯ ಸರಕಾರಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಬಾಕಿಯಿರುವ ಸಡಕ್‌ ಯೋಜನೆ
ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯಡಿ (ಪಿಎಂಜಿಎಸ್‌ವೈ) ಕಳೆದ ವರ್ಷ ನಿರ್ಮಿಸಲು ಉದ್ದೇಶಿಸಿದ್ದ ರಸ್ತೆ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಂಡಿಲ್ಲ. ಕಳೆದ ವರ್ಷ 1.74ಲಕ್ಷ ರಸ್ತೆ ಕಾಮಗಾರಿ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಅದರಲ್ಲಿ 1.57ಲಕ್ಷ ರಸ್ತೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಅದರ ಜೊತೆಯಲ್ಲೇ, ಹೆಚ್ಚುವರಿಯಾಗಿ 14,000 ಕಿ.ಮೀ.ವರೆಗಿನ ಹೊಸ ರಸ್ತೆ ಕಾಮಗಾರಿಗಳನ್ನೂ ನಡೆಸಲು ಉದ್ದೇಶಿ ಸಲಾಗಿದ್ದು, ಒಟ್ಟಾರೆಯಾಗಿ 70,000 ಕಿ.ಮೀ. ವ್ಯಾಪ್ತಿಯ ಕಾಮಗಾರಿಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಈ ಕಾಮಗಾರಿಗಳಲ್ಲಿ ಹಳೆ ರಸ್ತೆಗಳ ಉನ್ನತೀಕರಣ ಹಾಗೂ ಹೊಸ ರಸ್ತೆಗಳ ಕಾಮಗಾರಿ ಜೊತೆಗೇ ನಡೆಯಲಿವೆ.

50 ಲಕ್ಷ ಮನೆಗಳು
ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ, (ಪಿಎಂಎವೈ) ಪ್ರಸಕ್ತ ಹಣಕಾಸು ವರ್ಷದಲ್ಲಿ 60 ಲಕ್ಷದ 15 ಸಾವಿರ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಮಂಜೂರಾಗಿದ್ದ ಮನೆಗಳಲ್ಲಿ 1,95,000 ಮನೆಗಳು ಮಾತ್ರ ಪೂರ್ತಿಯಾಗಿದ್ದು ಉಳಿದ 58,20,000 ಮನೆಗಳನ್ನು ಇನ್ನು ನಿರ್ಮಿಸಬೇಕಿದೆ.

90-95 ದಿನ ಉದ್ಯೋಗ ಖಾತ್ರಿ
ಸರಕಾರದ ಬಳಿಯಿರುವ ಮಾಹಿತಿಯ ಪ್ರಕಾರ, ಮೂರನೇ 2ರಷ್ಟು ವಲಸೆ ಕಾರ್ಮಿಕರು ಈ ಕಾಮಗಾರಿಗಳಲ್ಲಿ ನೇರವಾಗಿ ಭಾಗಿಯಾಗಬಹುದಾಗಿದ್ದು, ಉಳಿದ ಕಾರ್ಮಿಕರನ್ನು ಈ ಕಾಮಗಾರಿಗಳಿಗೆ ಸಂಬಂಧಿಸಿದ ಇತರೆ ಕೆಲಸಗಳಲ್ಲಿ ಸಹಾಯಕರನ್ನಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ವರ್ಷದಲ್ಲಿ 90ರಿಂದ 95 ದಿನಗಳವರೆಗೆ ಕಾರ್ಮಿಕರಿಗೆ ಕೆಲಸ ಸಿಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

24 ಗಂಟೆಗಳಲ್ಲಿ 357 ಸಾವು, 9,996 ಹೊಸ ಪ್ರಕರಣಗಳು
ಒಂದೇ ದಿನದಲ್ಲಿ ಗರಿಷ್ಠ ಕೋವಿಡ್ ಪ್ರಕರಣಗಳಿಗೆ ದೇಶ ಮತ್ತೂಮ್ಮೆ ಸಾಕ್ಷಿಯಾಗಿದೆ. ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8ರವರೆಗಿನ 24 ಗಂಟೆಗಳ ಅವಧಿಯಲ್ಲಿ 357 ಮಂದಿ ಸೋಂಕಿಗೆ ಬಲಿಯಾಗಿದ್ದು, 9,996 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನದಲ್ಲಿ ಸಾವಿನ ಸಂಖ್ಯೆ 300ರ ಗಡಿ ದಾಟಿರುವುದು ಇದೇ ಮೊದಲು. ಈ ನಡುವೆ, ಸತತ ಎರಡನೇ ದಿನವೂ ಗುಣಮುಖರಾದವರ ಸಂಖ್ಯೆಯು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಮೀರಿದ್ದು, ದೇಶದ ಕೋವಿಡ್ ಗುಣಮುಖ ಪ್ರಮಾಣ ಶೇ.49.21ಕ್ಕೇರಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈವರೆಗೆ ಒಟ್ಟಾರೆ 1,41,028 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ನಾಲ್ಕನೇ 1 ಭಾಗ ಮುಂಬಯಿನಲ್ಲಿ
ದೇಶದ ಒಟ್ಟು ಸೋಂಕಿತರ ಸಂಖ್ಯೆಯ ನಾಲ್ಕನೇ ಒಂದು ಭಾಗ ಮುಂಬಯಿನಲ್ಲಿಯೇ ಇದೆ. ಅದಕ್ಕೆ ಪೂರಕವಾಗಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಟ್ಟು ಪ್ರಕರಣಗಳ ಪೈಕಿ ಶೇ.20ರಿಂದ ಶೇ¬.25 ಸೋಂಕಿತರು ದೇಶದ ಆರ್ಥಿಕ ರಾಜಧಾನಿ ಮತ್ತು ಅದರ ಸುತ್ತ ಇರುವ ಉಪನಗರಗಳಲ್ಲೇ ಇದ್ದಾರೆ ಎಂಬುದು ನಿಜಕ್ಕೂ ಚಿಂತಿಸಬೇಕಾದ ವಿಷಯ. ಮುಂಬಯಿ ನಗರ, ಉಪನಗರ ಜಿಲ್ಲೆಗಳನ್ನು ಹೊಂದಿರುವ ಮಹಾನಗರವು 603 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಜೊತೆಗೆ ಥಾಣೆ ನಗರ, ಪಾಲ್ಗರ್‌ ಮತ್ತು ರಾಯಗಢ ಜಿಲ್ಲೆಗಳ ಕೆಲ ಭಾಗಗಳೂ ಮುಂಬಯಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುತ್ತವೆ.
ಮಳೆ ಪ್ರವೇಶ: ಇದೇ ವೇಳೆ,ಮಹಾರಾಷ್ಟ್ರಕ್ಕೆ ಗುರುವಾರ ನೈಋತ್ಯ ಮುಂಗಾರು ಪ್ರವೇಶಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಈಗಾಗಲೇ ಮಹಾರಾಷ್ಟ್ರ ಕೊರೊನಾದಿಂದ ತತ್ತರಿಸಿದ್ದು, ಇದೀಗ ಮುಂಗಾರು ಶುರುವಾಗಿರುವುದರಿಂದ ಕಟ್ಟೆಚ್ಚರ ವಹಿಸಬೇಕಾಗಿದೆ.

70,000 ಕಿ.ಮೀ.- ಪಿಎಂಜಿಎಸ್‌ವೈ ಅಡಿಯಲ್ಲಿ ನಿರ್ಮಾಣವಾಗಲಿರುವ ರಸ್ತೆ
58,20,000 ಪಿಎಂಎವೈ ಅಡಿಯಲ್ಲಿ ನಿರ್ಮಾಣವಾಗಲಿರುವ ಮನೆ
90 95 ವರ್ಷದಲ್ಲಿ ವಲಸೆ ಕಾರ್ಮಿಕರಿಗೆ ಸಿಗಲಿರುವ ಉದ್ಯೋಗ ಖಾತ್ರಿ ದಿನಗಳು

Advertisement

Udayavani is now on Telegram. Click here to join our channel and stay updated with the latest news.

Next