ಬಾಗಲಕೋಟೆ: ಈರುಳ್ಳಿ ಬೆಲೆ ಕುಸಿತ ಮತ್ತು ಕಡಿಮೆ ಬೆಲೆ ನಿಗದಿ ಖಂಡಿಸಿ ರೈತರು ನವನಗರದ ಎಪಿಎಂಸಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ತಾಲೂಕಿನಿಂದ ನವನಗರದ ಎಪಿಎಂಸಿಗೆ ಆಗಮಿಸಿದ ರೈತರು ರಸ್ತೆ ತಡೆ ನಡೆಸಿ, ಈರುಳ್ಳಿ ರಸ್ತೆಗೆ ಸುರಿದು ಹಾಗೂ ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರೈತರು, ಸಾವಿರಾರು ರೂಪಾಯಿ ಖರ್ಚು ಆಳು, ಬೀಜ, ಗೊಬ್ಬರಕ್ಕೆ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೇವೆ. ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್‌ಗೆ 200 ರೂ. ಬೆಲೆ ನಿಗದಿ ಮಾಡಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ 50 ಕೆ.ಜಿ. ಈರುಳ್ಳಿ ಚೀಲದಲ್ಲಿ ರೂ. 25ರಿಂದ 50ರವರೆಗೆ ಬೆಲೆ ಕುಸಿದಿದೆ. ದಲ್ಲಾಳಿಗಳು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ. ರೈತರಿಗೆ ಆಗುತ್ತಿರುವ ಮೋಸಕ್ಕೆ ಸರ್ಕಾರಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಸಾಲಮನ್ನಾ ಅಲ್ಲದೆ ಬೆಳೆದ ಬೆಳೆಗೆ ಸೂಕ್ತ ಸಹ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ರಸ್ತೆ ತಡೆ: ರೈತರು ಕೈಗೊಂಡ ಈ ದಿಢೀರ್ ಪ್ರತಿಭಟನೆಯಿಂದ ಎಪಿಎಂಸಿ ವೃತ್ತದಲ್ಲಿ ವಾಹನ ದಟ್ಟಣೆ ನಿರ್ಮಾಣವಾಯಿತು. ಇದರಿಂದ ವಾಹನ ಸವಾರರು ಪರದಾಡುವ ವಾತಾವರಣ ನಿರ್ಮಾಣವಾಯಿತು. ರೈತರು ಜಿಲ್ಲಾಧಿಕಾರಿಗಳು ಮತ್ತು ಬೆಲೆ ಸಮರ್ಪಕವಾಗಿ ನಿಗದಿ ಮಾಡುವ ಅಧಿಕಾರಿಗಳು ಬರುವವರೆಗೂ ಪಟ್ಟು ಹಿಡಿದಿದ್ದರು. ಸುಮಾರು ಸಮಯದವರೆಗೆ ಸಂಚಾರದ ದಟ್ಟಣೆಯ ವಾತಾವರಣ ನಿಮಾಣವಾಗಿತ್ತು. ತಾಲೂಕಿನ ಕಿರಸೂರ, ಬೇವಿನಮಟ್ಟಿ, ಬೇನಕಟ್ಟಿ, ಹೊನ್ನಾಕಟ್ಟಿ ಮುಂತಾದ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.