ಬೆಳಗಾವಿ: ಪ್ರವಾಹ ಮತ್ತು ಮಳೆಯಿಂದ ಸಂಪೂರ್ಣ ಮನೆ ಬಿದ್ದಿದ್ದರೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ.ಪರಿಹಾರ ನೀಡಲಾಗುವುದು. ಮನೆ ನಿರ್ಮಾಣ ಮಾಡುವವರೆಗೆ 10 ತಿಂಗಳವರೆಗೆ ಮಾಸಿಕ ಐದು ಸಾವಿರ ರೂ.ಬಾಡಿಗೆ ಅಥವಾ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ತಕ್ಷಣವೇ 50 ಸಾವಿರ ರೂ.ನೀಡಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪರಿಹಾರ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ, ಸಂತ್ರಸ್ತರಿಗೆ ನೀಡಲಾಗುತ್ತಿರುವ ಊಟ, ಉಪಾಹಾರ, ಔಷಧಿ ಮತ್ತಿತರ ಸೌಲಭ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಪರಿಹಾರ ಕೇಂದ್ರದಲ್ಲಿ ಎಷ್ಟು ಜನರಿಗೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಯಾವ ರೀತಿಯ ಔಷಧಿ ವಿತರಣೆ ಮಾಡಲಾಗಿದೆ. ಗರ್ಭಿಣಿಯರು ಎಷ್ಟು ಜನರಿದ್ದಾರೆ. ಅವರಿಗೆ ಯಾವ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ ಎಂಬುದರ ಬಗ್ಗೆ ವೈದ್ಯಾಧಿ ಕಾರಿಗಳಿಂದ ಪಡೆದರು.
ಬಳಿಕ ಮಾತನಾಡಿದ ಅವರು, ಬಾಡಿಗೆ ಮನೆಯ ಲ್ಲಿದ್ದವರಿಗೂ ತಕ್ಷಣವೇ 50 ಸಾವಿರ ರೂ. ನೀಡಲಾಗುವುದು. ಸಂತ್ರಸ್ತರು ಜಮೀನು ಹೊಂದಿದ್ದರೆ ಮನೆ ನಿರ್ಮಾಣಕ್ಕೆ ಹಣ ನೀಡಲಾಗುವುದು. ಜಮೀನು ಇಲ್ಲದವರಿಗೆ ಸರ್ಕಾರದಿಂದಲೇ ಮನೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಎತ್ತರದ ಸೇತುವೆ ನಿರ್ಮಾಣಕ್ಕೆ ಮನವಿ: ಪ್ರವಾಹ ಸಂದರ್ಭದಲ್ಲಿ ರಾಯಬಾಗ, ಚಿಕ್ಕೋಡಿ ಹಾಗೂ ಮಹಾರಾಷ್ಟ್ರದ ಸಂಪರ್ಕ ಕಡಿತಗೊಳ್ಳುವುದರಿಂದ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲ ಆಗುವಂತೆ ಫ್ಲೈ ಓವರ್ ಮಾದರಿಯಲ್ಲಿ ಎತ್ತರದ ಸೇತುವೆ ನಿರ್ಮಾಣ ಅಗತ್ಯವಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜುಗೂಳ, ಮಂಗಾವತಿ ಸೇರಿ ಮೂರು ಗ್ರಾಮಗಳ ಸ್ಥಳಾಂತರ ಅತ್ಯಗತ್ಯ ಎಂದು ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಮನವಿ ಮಾಡಿದರು.
3.5 ಲಕ್ಷ ಕ್ಯೂಸೆಕ್ ನೀರು ಬಂದರೆ ಈಗಿರುವ ಸೇತುವೆಗಳು ಮುಳುಗಡೆಯಾಗುತ್ತವೆ ಎಂದು ಹಿಡಕಲ್ ಜಲಾಶಯದ ಅಧಿಧೀಕ್ಷಕ ಅಭಿಯಂತರ ಸಿ.ಡಿ. ಪಾಟೀಲ ಹೇಳಿದರು. ಬೇರೆ ಕಡೆ ಜಾಗ ನೀಡಿದರೆ ನಾವು ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ರುತ್ತೇವೆ. ಮಣ್ಣಿನ ಮನೆ ಸಂಪೂರ್ಣ ಕುಸಿದಿದೆ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡರು.