Advertisement

ಮಳೆಗಾಲ ಸನ್ನಿಹಿತ: ಜಿಲ್ಲೆಯಲ್ಲಿ ಗುಡ್ಡ ಕುಸಿತದ ಭೀತಿ!

01:16 AM May 23, 2020 | Sriram |

ವಿಶೇಷ ವರದಿ– ಮಂಗಳೂರು: ಕರಾವಳಿ ಜಿಲ್ಲೆಗಳಿಗೆ ಮುಂಗಾರು ಪ್ರವೇಶಿಸುವುದರೊಂದಿಗೆ ಮಳೆಗಾಲ ಆರಂಭಗೊಳ್ಳುವುದಕ್ಕೆ ಇನ್ನೂ ಎರಡು ವಾರವಷ್ಟೇ ಬಾಕಿಯಿದೆ. ಆದರೆ, ರಸ್ತೆ ಕಾಮಗಾರಿ, ಕಳೆದ ವರ್ಷದ ಧಾರಾಕಾರ ಮಳೆಯಿಂದಾಗಿ ಮಂಗಳೂರು ಸಹಿತ ದ.ಕ. ಜಿಲ್ಲೆಯ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಗುಡ್ಡಗಳು ಕುಸಿತದ ಅಪಾಯ ಎದುರಿಸುತ್ತಿವೆ.

Advertisement

ಏಕೆಂದರೆ, ಕಳೆದ ವರ್ಷ ಮಳೆಯಿಂದ ಭೂಕುಸಿತ ಅಪಾ ಯವಿರುವ ಕಡೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಬೇಸಗೆಯಲ್ಲಿ ಅದನ್ನು ಸರಿಪಡಿಸುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಈಗ ಮತ್ತೆ ಮಳೆಗಾಲ ಸನ್ನಿಹಿತವಾಗಿದ್ದು, ಕುಸಿತದ ಅಪಾಯದ ಪ್ರದೇಶದಲ್ಲಿ ಇನ್ನೂ ಯಾವುದೇ ದುರಸ್ತಿ ಕಾಮಗಾರಿ ನಡೆಸದೇ ಯಥಾಸ್ಥಿತಿಯಲ್ಲಿದೆ. ಹೀಗಿರುವಾಗ, ಮುಂಗಾರು ಮಳೆ ಆರ್ಭಟಿಸಿದರೆ, ಕರಾವಳಿ ಭಾಗದಲ್ಲಿ ಮಣ್ಣು ಮೃದು ಆಗಿ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿದೆ.

ಅರ್ಧಕ್ಕೆ ನಿಂತ ಕಾಂಕ್ರೀಟ್‌ ಕಾಮಗಾರಿ
ಮಂಗಳೂರಿನಿಂದ ರಾಜಧಾನಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ. ರೋಡ್‌-ಅಡ್ಡಹೊಳೆ ನಡುವಣ ಚತುಷ್ಪಥ ಕಾಂಕ್ರೀಟ್‌ ಕಾಮಗಾರಿ ಆರಂಭ ವಾಗಿ ಅರ್ಧದಲ್ಲಿ ನಿಂತಿದೆ. ಮಳೆ ನೀರು ರಸ್ತೆಯ ಅಕ್ಕಪಕ್ಕದ ತಗ್ಗು ಸ್ಥಳಗಳಲ್ಲಿ ನಿಲ್ಲುವುದರಿಂದ ಮಳೆಗಾಲದಲ್ಲಿ ಸಮಸ್ಯೆಗೆ ಕಾರಣವಾಗಲಿದೆ. ಹೀಗಾಗಿ ಗುಡ್ಡ ಕುಸಿತದ ಅಪಾಯ ನಿಶ್ಚಿತ ಎಂಬಂತಿದೆ.

ಹೆದ್ದಾರಿ ನಿರ್ಮಿಸುವುದಕ್ಕಾಗಿ ಬಿ.ಸಿ. ರೋಡ್‌ನಿಂದ ಕಲ್ಲಡ್ಕ, ಉಪ್ಪಿನಂಗಡಿಯಾಗಿ ಈಗಾಗಲೇ ಗುಡ್ಡಗಳನ್ನು ಅಗೆಯಲಾಗಿದೆ. ಅದರಲ್ಲೂ ಬುಡೋಳಿ, ಗಡಿಯಾರ, ಪೆರ್ನೆ, ಉಪ್ಪಿನಂಗಡಿ ಸಹಿತ ಹಲವು ಭಾಗಗಳಲ್ಲಿ ಒಂದು ವೇಳೆ ಜೋರಾಗಿ ಮಳೆ ಸುರಿದರೆ ಗುಡ್ಡ ಜರಿಯುವ ಆತಂಕ ಇದೆ. ಇನ್ನೂ ಕಳೆದ ಬಾರಿ ಮಳೆಗೆ ಪೆರಿಯಶಾಂತಿ ಬಳಿ ಗುಡ್ಡ ಜರಿದು ಸಂಚಾರ ಬಂದ್‌ ಆಗಿತ್ತು. ಅಪಾಯಕಾರಿ ಗುಡ್ಡಗಳಿರುವ ರಸ್ತೆಯ ಅಕ್ಕಪಕ್ಕದಲ್ಲಿ ಹೊಸ ರಸ್ತೆಗಾಗಿ ಕೆಲವೆಡೆ ತಗ್ಗು ತೆಗೆದಿದ್ದು, ಕಳೆದ ಮಳೆಗಾಲದಲ್ಲೂ ಮಳೆ ನೀರು ನಿಂತು ಸಮಸ್ಯೆಯಾಗಿತ್ತು.

ನಗರದ ನಂತೂರು ವೃತ್ತ ಬಳಿ ಪಂಪ್‌ವೆಲ್‌ಗೆ ತೆರಳುವ ರಾ.ಹೆ.ಯಲ್ಲಿ ಒಂದು ಬದಿಯ ಗುಡ್ಡ ಈಗಾಗಲೇ ಸಣ್ಣ ಮಟ್ಟದಲ್ಲಿ ಜರಿದಿದ್ದು ಮಣ್ಣು ರಸ್ತೆಗೆ ಬೀಳಲು ಪ್ರಾರಂಭಿಸಿದೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಗುಡ್ಡದಿಂದ ಮಣ್ಣು ಜರಿದು ಮರವೊಂದು ಖಾಸಗಿ ಶಾಲಾ ವ್ಯಾನ್‌ ಮೇಲೆ ಉರುಳಿ ಬಿದ್ದ ಘಟನೆ ನಡೆದಿತ್ತು. ಅದೃಷ್ಟವಶಾತ್‌ ವ್ಯಾನ್‌ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದರು. ಶಾಲಾ ಬಸ್‌ ಮಾತ್ರವಲ್ಲದೆ ಒಂದು ಟ್ಯಾಂಕರ್‌ ಮತ್ತು ಪಿಕಪ್‌ ವಾಹನವು ಮರದಡಿ ಸಿಲುಕಿಕೊಂಡು, ಮೂರೂ ವಾಹನಗಳು ಜಖಂಗೊಂಡಿತ್ತು. ಇವಿಷ್ಟೇ ಅಲ್ಲದೆ, ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಸಮೀಪದ ಕೆ.ಸಿ. ರೋಡ್‌ನ‌ಲ್ಲಿಯೂ ಇದೇ ರೀತಿ ಅಪಾಯಕಾರಿಯಾದ ಎತ್ತರದ ಗುಡ್ಡ ಪ್ರದೇಶವಿದೆ.

Advertisement

ಮಂಗಳೂರಿನಲ್ಲೂ
ಇದೆ ಅಪಾಯಕಾರಿ ಗುಡ್ಡ
ರಸ್ತೆ ಬದಿ ಎತ್ತರದ ಗುಡ್ಡ ಪ್ರದೇಶ ಇರುವ ತಾಣಗಳು ಮಂಗಳೂರು ನಗರದ ಬಿಜೈ ಬಟ್ಟಗುಡ್ಡದ ಸರ್ಕ್ನೂಟ್‌ ಹೌಸ್‌ ಬಳಿ ಇದ್ದು, ಕಳೆದ ವರ್ಷ ಈ ಪ್ರದೇಶದಲ್ಲಿ ಕುಸಿತ
ಗೊಂಡಿ ತ್ತು. ಬಳಿಕ ಮರಳು ತುಂಬಿಸಿದ ಗೋಣಿ ಚೀಲಗಳನ್ನು ಇಟ್ಟು ತಾತ್ಕಾಲಿಕ ಪರಿಹಾರವನ್ನು ಕಲ್ಪಿಸಲಾಗಿತ್ತು. ಮಳೆಗಾಲ ಪೂರ್ಣಗೊಂಡು ಒಂದು ವರ್ಷ ಕಳೆದರೂ ಈ ಪ್ರದೇಶದಲ್ಲಿ ಶಾಶ್ವತ ಪರಿಹಾರವಾಗಿಲ್ಲ. ಈಗ ಮರಳು ಗೋಣಿ ಚೀಲಗಳು ರಸ್ತೆಗೆ ಬೀಳುವ ಆತಂಕದಲ್ಲಿದೆ. ಮಳೆಗಾಲ ಆರಂಭಕ್ಕೂ ಮುನ್ನ ಸಮಸ್ಯೆ ಬಗೆಹರಿಸಬೇಕಿದೆ.

 ಅಧಿಕಾರಿಗಳ
ಗಮನಕ್ಕೆ ತರುವೆ
ರಾಷ್ಟ್ರೀಯ ಹೆದ್ದಾರಿ, ಮಹಾನಗರ ಪಾಲಿಕೆ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳಜತೆ ಈಗಾಗಲೇ ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ. ಈ ಹಿಂದೆ ಮಳೆಗಾಲದಲ್ಲಾದ ಅನಾಹುತಗಳನ್ನು ಗಮನದಲ್ಲಿರಿಸಿ ಮತ್ತೊಮ್ಮೆ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಗುಡ್ಡ ಜರಿಯುವ ಭೀತಿ ಹಿನ್ನೆಲೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next