Advertisement

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

09:09 PM Apr 17, 2024 | Team Udayavani |

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆ ದರದ ನಿರೀಕ್ಷೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಶೇ.6.5ರಿಂದ ಶೇ.6.8ಕ್ಕೆ ಹೆಚ್ಚಿಸಿದೆ. ಜಗತ್ತಿನ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತದ ಜಿಡಿಪಿ ಪ್ರಗತಿ ದರವೇ ಅತ್ಯಧಿಕ ಏರಿಕೆ ಕಾಣಲಿದೆ ಎಂದೂ ಹೇಳಿದೆ.

Advertisement

ದೇಶೀಯ ಬೇಡಿಕೆ ಹೆಚ್ಚುತ್ತಿರುವುದು ಮತ್ತು ಕೆಲಸ ಮಾಡುವ ಜನಸಂಖ್ಯೆಯ ಕಾರಣಗಳಿಂದಾಗಿ ಐಎಂಎಫ್ ತನ್ನ ಅಂದಾಜನ್ನು ಪರಿಷ್ಕರಿಸಿದೆ. ಗಮನಾರ್ಹವೆಂದರೆ ಐಎಂಎಫ್ ವಿಶ್ಲೇಷಣೆ ಪ್ರಕಾರ ಜಗತ್ತಿನ ಪ್ರಬಲ ರಾಷ್ಟ್ರಗಳಾಗಿರುವ ಅಮೆರಿಕ, ಚೀನಾ, ಯುನೈಟೆಡ್‌ ಕಿಂಗ್‌ಡಮ್‌ಗಳನ್ನು ಹಿಂದಿಕ್ಕಿ ಭಾರತದ ಜಿಡಿಪಿ ಹೆಚ್ಚಿನ ದರದಲ್ಲಿ ಅಭಿವೃದ್ಧಿ ಕಾಣಲಿದೆ ಎಂದಿದೆ. ಅಮೆರಿಕದ ನಿರೀಕ್ಷಿತ ಜಿಡಿಪಿ ಪ್ರಗತಿ ದರ ಶೇ.2.7 ಆಗಿದ್ದರೆ, ಯು.ಕೆ.ಯದ್ದು ಶೇ.0.5 ಆಗಿರಲಿದೆ. ನೆರೆರಾಷ್ಟ್ರ ಚೀನಾದ್ದು ಶೇ.4.6 ಆಗಿರಲಿದೆ.

ಕಳೆದ ಕೆಲವು ವಾರಗಳಲ್ಲಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತದ ಆರ್ಥಿಕಾಭಿವೃದ್ಧಿಯ ಅಂದಾಜನ್ನು ಹೆಚ್ಚಿಸಿವೆ. ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌, ಎಸ್‌ಆ್ಯಂಡ್‌ಪಿ ಮತ್ತು ಮೂಡಿ ಸೇರಿದಂತೆ ಹಲವು ಸಂಸ್ಥೆಗಳು ಹಿಂದಿನ ಅಂದಾಜನ್ನು ಪರಿಷ್ಕರಿಸಿವೆ.

ಇನ್ನು, ಜಾಗತಿಕ ಆರ್ಥಿಕತೆ ಕೂಡ ಪ್ರಸಕ್ತ ವಿತ್ತ ವರ್ಷದಲ್ಲಿ ಶೇ.3.2ರ ದರದಲ್ಲಿ ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಚೀನಾ ಆರ್ಥಿಕತೆಯು ಶೇ.4.6 ಮತ್ತು ಆಸಿಯಾನ್‌-5 ಶೇ.4.5ರಷ್ಟು ಪ್ರಗತಿ ಕಾಣಲಿದೆ ಎಂದು ವರ್ಲ್ ಎಕನಾಮಿಕ್‌ ಔಟ್‌ಲುಕ್‌ ತಿಳಿಸಿದೆ.

ನಿರಾಶಾದಾಯಕ ಊಹೆಗಳ ಹೊರತಾಗಿಯೂ, ನಿರಂತರ ಬೆಳವಣಿಗೆ ಮತ್ತು ಇಳಿಯುತ್ತಿರುವ ಹಣದುಬ್ಬರದಿಂದಾಗಿ ಜಾಗತಿಕ ಆರ್ಥಿಕತೆಯ ಗಮನಾರ್ಹವಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿದೆ ಎಂದು ಐಎಂಎಫ್ ಮುಖ್ಯ ಆರ್ಥಿಕ ತಜ್ಞ ಪಿಯರೆ ಒಲಿಯರ್‌ ಗೌರಿಂಚಾಸ್‌ ಅವರು ಹೇಳಿದ್ದಾರೆ.

Advertisement

ರಾಷ್ಟ್ರ ಜಿಡಿಪಿ ಅಂದಾಜು (ಶೇಕಡಾವಾರು)
ಭಾರತ 6.8
ಚೀನಾ 4.6
ನೈಜೀರಿಯಾ 3.3
ರಷ್ಯಾ 3.2
ಅಮೆರಿಕ 2.7
ಮೆಕ್ಸಿಕೋ 2.4
ಸೌದಿ ಅರೇಬಿಯಾ 2.6
ಯು.ಕೆ. ಶೇ. 0.5
ಜರ್ಮನಿ 0.2

 

 

Advertisement

Udayavani is now on Telegram. Click here to join our channel and stay updated with the latest news.

Next