ವಾಷಿಂಗ್ಟನ್: ಕಾರ್ಪೋರೇಟ್ ಮತ್ತು ಪರಿಸರ ನಿಯಂತ್ರಣದ ಅನಿಶ್ಚಿತತೆ ಹಾಗೂ ಕೆಲವು ಬ್ಯಾಂಕೇತರ ಹಣಕಾಸು ಕಂಪನಿ(ಎನ್ ಬಿಎಫ್ ಸಿಎಸ್)ಗಳ ನಿಧಾನಗತಿಯ ದೌರ್ಬಲ್ಯದಿಂದಾಗಿ ಭಾರತದ ಆರ್ಥಿಕ ಅಭಿವೃದ್ಧಿ ನಿರೀಕ್ಷೆಗಿಂತ ಹೆಚ್ಚು ಕುಸಿತ ಕಂಡಿರುವುದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಭಿಪ್ರಾಯ ವ್ಯಕ್ತಪಡಿಸಿದೆ.
ಐಎಂಎಫ್ ವಕ್ತಾರ ಗೆರ್ರಿ ರೈಸ್ ಪತ್ರಕರ್ತರ ಜತೆ ಮಾತನಾಡುತ್ತ, ಆರ್ಥಿಕ ಅಭಿವೃದ್ಧಿ ಭಾರತದ ಪ್ರಶ್ನೆಯಾಗಿದೆ. ಅಲ್ಲದೇ ಅದರ ಅಭಿವೃದ್ಧಿ ಬೆಳವಣಿಗೆ ವಿಷಯವೂ ಹೌದು. ಮುಂದಿನ ದಿನಗಳಲ್ಲಿ ಜಿಡಿಪಿ ಕುರಿತ ಅಂಕಿಅಂಶ ಹೊರಬೀಳಲಿದೆ. ಆದರೆ ಇತ್ತೀಚೆಗಿನ ಭಾರತದ ಆರ್ಥಿಕ ಅಭಿವೃದ್ಧಿ ನಿರೀಕ್ಷೆಗಿಂತ ಕೆಳಮಟ್ಟಕ್ಕೆ ಕುಸಿದಿದೆ ಎಂದು ವಿಶ್ಲೇಷಿಸಿದರು.
ಉತ್ಪಾದನೆಯಲ್ಲಿನ ಕುಸಿತ ಮತ್ತು ಬಳಕೆಯಲ್ಲಿನ ಅಂಕಿ ಅಂಶ ಕುಸಿತವಾದ ಪರಿಣಾಮ ಭಾರತದ ಒಟ್ಟು ದೇಶೀಯ ಉತ್ಪಾದನೆ(ಜಿಡಿಪಿ) ಶೇ.5ಕ್ಕೆ(ಏಪ್ರಿಲ್-ಜೂನ್) ಇಳಿಕೆ ಕಂಡಿದೆ. ಇದು ಕಳೆದ 6 ವರ್ಷಗಳಲ್ಲಿಯೇ ಕಡಿಮೆ ಪ್ರಮಾಣದ ಜಿಡಿಪಿಯಾಗಿದೆ. 2013ರ ಮಾರ್ಚ್ ನಲ್ಲಿ ಜಿಡಿಪಿ ದಾಖಲೆಯ ಕುಸಿತ (ಶೇ.4.3ರಷ್ಟು) ಕುಸಿತ ಕಂಡಿತ್ತು. ಇದೀಗ ಭಾರತದ 5ನೇ ತ್ರೈಮಾಸಿಕ ಜಿಡಿಪಿ ದರ ಕೂಡಾ ಕುಸಿಯುತ್ತಿದೆ ಎಂದು ಐಎಂಎಫ್ ಹೇಳಿದೆ.
ಐಎಂಎಫ್ ನ ಜುಲೈ ತಿಂಗಳ ಅಂಕಿಅಂಶದ ಪ್ರಕಾರ, ಭಾರತದ 2019 ಮತ್ತು 2020ರ ಆರ್ಥಿಕ ಬೆಳವಣಿಗೆ ಪ್ರಗತಿಯಾಗಬೇಕಾಗಿದೆ. ಜಿಡಿಪಿ(ಒಟ್ಟು ದೇಶೀಯ ಉತ್ಪಾದನೆ) 2019ರಲ್ಲಿ ಶೇ.7ರಿಂದ ಶೇ.7.2ರಷ್ಟಾಗಬೇಕು. ಆದರೆ ದೇಶೀಯ ಉತ್ಪಾದನೆ ಬೇಡಿಕೆಗೆ ನಿರೀಕ್ಷೆಗಿಂತ ಕುಸಿತ ಕಂಡಿರುವುದು ಆರ್ಥಿಕ ಪ್ರಗತಿಗೆ ತೊಡಕಾಗಿದೆ ವಿವರಿಸಿದೆ.
ಏತನ್ಮಧ್ಯೆ ಜಿಡಿಪಿ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಕುಸಿತ ಕಾಣುತ್ತಿದೆ ಎಂಬ ಆರೋಪದ ನಡುವೆಯೂ ಭಾರತ ಈಗಲೂ ವಿಶ್ವದಲ್ಲಿಯೇ ಅತೀ ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿರುವ ದೇಶವಾಗಿದೆ. ಆರ್ಥಿಕ ಚೇತರಿಕೆಗೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಭಾರತ ಚೀನಾಕ್ಕಿಂತಲೂ ವೇಗವಾಗಿ ಆರ್ಥಿಕ ಬೆಳವಣಿಗೆಯಲ್ಲಿ ಮುಂದಿದೆ ಎಂದು ವಾಷಿಂಗ್ಟನ್ ಮೂಲಕ ಐಎಂಎಫ್ ತಿಳಿಸಿದೆ.
ಮೊದಲಿಗೆ ಆರ್ಥಿಕ ಬೆಳವಣಿಗೆ ಕುಸಿಯುತ್ತಿರುವ ಬಗ್ಗೆ ಭಾರತ ಹೆಚ್ಚಿನ ಗಮನಹರಿಸಬೇಕಾಗಿದೆ. ಭಾರತದ ನೂತನ ಜಿಡಿಪಿ ಅಂಕಿಅಂಶ ಇನ್ನಷ್ಟೇ ತಿಳಿಯಬೇಕಾಗಿದೆ. ಆ ನಿಟ್ಟಿನಲ್ಲಿ ಐಎಂಎಫ್ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ರೈಸ್ ಹೇಳಿದರು.