Advertisement

ಲಿಂಗಾಯತರು ಶರಣರ ನಿಜಾಚರಣೆ ಅರಿತು ಆಚರಿಸಬೇಕು : ಇಮಾಮುದ್ದಿನ ಅತ್ತಾರ

04:32 PM Jan 24, 2022 | Team Udayavani |

ನಾಲತವಾಡ: ಲಿಂಗಾಯತರು ಶರಣರ ನಿಜಾಚರಣೆ ಅರಿತು ಆಚರಿಸಬೇಕು. ಲಿಂಗಾಯತರ ಶಿವನು ಜಗದಗಲ-ಮುಗಿಲಗಲ ತುಂಬಿರುವ ನಿರಾಕಾರ ಮೂರ್ತಿಯೇ ಹೊರತು ವೈದಿಕರ ಸಾಕಾರ ರೂಪದ ಶಿವನಲ್ಲ. ಲಿಂಗಾಯತ ಧರ್ಮವು ವೈದಿಕತೆಯ ಅರ್ಥಹೀನ ಆಚರಣೆ ಖಂಡಿಸುವ ಧರ್ಮವಾಗಿದೆ’ ಎಂದು ಯಾದಗಿರಿ ಜಿಲ್ಲೆಯ ಕೊಡೇಕಲ್ಲದ ಶರಣ ಸಾಹಿತಿ ಇಮಾಮುದ್ದಿನ ಅತ್ತಾರ ಹೇಳಿದರು.

Advertisement

ಪಟ್ಟಣದ ಮಸ್ಕಿಯವರ ಮನೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಲಿಂಗೈಕ್ಯ ಪರಮಾನಂದ ಮಸ್ಕಿಯವರ ಸ್ಮರಣಾರ್ಥ ಏರ್ಪಡಿಸಿದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಮೌಢ್ಯ ಆಚರಣಿಗಳನ್ನು ಬಿಟ್ಟು ಬದುಕಿರಿ, ಧರ್ಮದ ಹೆಸರಿನಲ್ಲಿ ಸ್ವಾರ್ಥ ಸಾಧಿಸಿಕೊಳ್ಳುವ ಪುರೋಹಿತಶಾಹಿ ವರ್ಗವು ದೇವರು ಮತ್ತು ಜನರ ನಡುವಿನ ನಂಬಿಕೆಯನ್ನು ಬಂಡವಾಳ ಮಾಡಿಕೊಂಡಿದೆ. ಜಗತ್ತಿನ ಯಾವುದೇ ಮೂಲೆಯ ಜನರು ಕೂಡ ಅಪ್ಪಿ-ಒಪ್ಪಿಕೊಳ್ಳುವಂಥ ಬಸವತತ್ವವು ವಾಸ್ತವಿಕತೆಯ, ಸಹಜತೆಯ ಧರ್ಮವಾಗಿದ್ದು ಅದು ಕಾಲ್ಪನಿಕ ಕಟ್ಟುಕಥೆಗಳನ್ನು ಎಂದಿಗೂ ನಂಬುವುದಿಲ್ಲ. ಸ್ವರ್ಗ-ನರಕ, ಕೈಲಾಸ-ಪಾತಾಳಲೋಕಗಳ ಕಲ್ಪನೆಗಳನ್ನು ಅಲ್ಲಗಳೆದ ಶರಣರು ವೈಚಾರಿಕ ದೃಷ್ಠಿಕೋನಕ್ಕೆ ಮಹತ್ವ ನೀಡಿದವರು. ಆದ್ದರಿಂದ ಯಾವುದೇ ಆಚರಣೆಗಳನ್ನು ಆಚರಿಸುವ ಮುನ್ನ ವೈಜ್ಞಾನಿಕ ದೃಷ್ಠಿಕೋನದಲ್ಲಿ ಅಧ್ಯಯನ ಮಾಡುವುದನ್ನು ರೂಢಸಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಪ್ರಭು ಕಡಿ, ಎ.ಎಸ್.ಪಟ್ಟಣಶೆಟ್ಟಿ, ಶಂಭುಲಿಂಗಪ್ಪ ದುದ್ದಗಿ, ಪಿ.ಜಿ.ಬಿರಾದಾರ, ಇಮಾಮುದ್ದಿನ ಅತ್ತಾರ, ಎಸ್.ಬಿ.ಬಂಗಾರಿ, ಬಿ.ಪಿ.ಪಾಟೀಲ, ಮಹಾದೇವಿ ಮಸ್ಕಿ, ಎಸ್.ಎನ್.ಕಂಗಳ,ಸಂಗನಗೌಡ ಬಿರಾದಾರ, ಬಸವರಾಜ ಗಡ್ಡಿ ಬಸವ ಕೇಂದ್ರದ ಸರ್ವ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next