Advertisement

ಮನ್ಸೂರ್‌ ಖಾನ್‌ ಪತ್ತೆಗಾಗಿ 4 ತಂಡ; ವಂಚನೆಗೊಳಗಾದವರ ಆಕ್ರೋಶ

08:58 AM Jun 12, 2019 | Team Udayavani |

ಬೆಂಗಳೂರು: ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ನಾಪತ್ತೆಯಾಗಿರುವ ಐಎಂಎ ಜುವೆಲರ್ಸ್‌ ಮಾಲಕ ಮನ್ಸೂರ್‌ ಖಾನ್‌ ಪತ್ತೆಗಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ.

Advertisement

ಹೂಡಿಕೆ ಮಾಡಿದ್ದ ಮೂರು ಸಾವಿರಕ್ಕೂ ಹೆಚ್ಚು ಜನರು ಕಂಗಾಲಾಗಿದ್ದು, ತಕ್ಷಣ ಮನ್ಸೂರ್‌ನನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮನ್ಸೂರ್‌ ಖಾನ್‌ ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ ಕೇಳಿ ಸಾವಿರಾರು ಮಂದಿ ಹಣ ಕಳೆದುಕೊಂಡವರು ಶಿವಾಜಿನಗರದಲ್ಲಿರುವ ಕಚೇರಿ ಬಳಿ ಜಮಾವಣೆಗೊಂಡು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರವೂ ಕಚೇರಿ ಬಳಿ ನೂರಾರು ಮಂದಿ ಆಗಮಿಸುತ್ತಿದ್ದು, ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ.

ಇಲ್ಲಿಯವರೆಗೆ ಸುಮಾರು 3,500 ಮಂದಿ ತಮಗೆ ವಂಚನೆಯಾಗಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಹಣ ಕಳೆದುಕೊಂಡವರು ಆಕ್ರೋಶ ಹೊರ ಹಾಕುವ ಹಿನ್ನಲೆ
ಐಎಂಎ ಮೆಡಿಕಲ್‌ ಶಾಪ್‌ಗಳನ್ನು ಬಂದ್‌ ಮಾಡಲಾಗಿದೆ.

Advertisement

ಅಲ್ಪಸಂಖ್ಯಾತ ಮುಖಂಡರಿಂದ ಗೃಹಸಚಿವರ ಭೇಟಿ

ಐಎಂಎ ಪ್ರಕರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಂಚನೆಗೊಳಗಾಗಿರುವ ಹಿನ್ನಲೆಯಲ್ಲಿ ಕಾಂಗ್ರಸ್‌ ಪಕ್ಷದ ಮುಸ್ಲಿಂ ಸಮುದಾಯದ ನಾಯಕರು ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸಚಿವ ಜಮೀರ್‌ ಅಹಮದ್‌ ಖಾನ್‌ , ಶಾಸಕ ಎನ್‌.ಎ. ಹ್ಯಾರಿಸ್‌, ರಿಜ್ವಾನ್‌ ಅರ್ಷದ್‌ ಸೇರಿದಂತೆ ಪ್ರಮುಖ ನಾಯಕರು ಸಚಿವ ಎಂ.ಬಿ.ಪಾಟೀಲ್‌ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಮಧ್ಯಾಹ್ನ ಗೃಹಸಚಿವ ಎಂ.ಬಿ.ಪಾಟೀಲ್‌ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ.

ನಾಪತ್ತೆಗೂ ಮುನ್ನ ಮನ್ಸೂರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಶಿವಾಜಿನಗರ ಶಾಸಕ 400 ಕೋಟಿ ರೂ. ಪಡೆದು ಹಣ ವಾಪಸ್‌ ನೀಡಲಿಲ್ಲ’ ಎಂದು ಆರೋಪಿಸಿದ್ದಾರೆ. ಜತೆಗೆ ರಾಜಕಾರಣಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ. ಇದು ನನ್ನ ಕೊನೆಯ ಸಂದೇಶವಾಗಬಹುದು ಎಂದು ಹೇಳಲಾಗಿದೆ. ಇದು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ತಿರುವನ್ನ ಪಡೆದುಕೊಂಡಿದೆ.

ಶಾಸಕ ರೋಷನ್‌ ಬೇಗ್‌ ಟ್ವೀಟ್‌ ಮೂಲಕ ಆರೋಪದ ಕುರಿತು ಸ್ಪಷ್ಟನೆ ನೀಡಿದ್ದು, ತನಗೂ ಐಎಂಎ ಜುವೆಲರ್ಗೂ ಸಂಬಂಧವಿಲ್ಲ. ನಾನು 400 ಕೋಟಿ ರೂ. ಪಡೆದಿಲ್ಲ ಎಂದು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next