Advertisement
ಐಎಂಎ ಸಮೂಹ ಸಂಸ್ಥೆಯ ಬಹುಕೋಟಿ ಹಗರಣ ಬೆಳಕಿಗೆ ಬರುವ ಮೊದಲೇ ಆ ಸಂಸ್ಥೆ ವಿರುದ್ಧ ಆರ್‌ಬಿಐ ಪ್ರಧಾನ ವ್ಯವಸ್ಥಾಪಕಿ ಕೆ.ಎಸ್. ಜೋಸ್ನಾ ಅವರು ನೀಡಿದ ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದ ಸಿಐಡಿಯ ಆರ್ಥಿಕ ಅಪರಾಧ ವಿಭಾಗಗಳ ಅಂದಿನ ಐಜಿಪಿ ಹೇಮಂತ್ ನಿಂಬಾಳ್ಕರ್ ಆರೋಪಿತ ಸಂಸ್ಥೆಯ ಪರವಾಗಿ ವರದಿ ನೀಡಿದ್ದರು. ತಮ್ಮ ಪರವಾಗಿ ವರದಿ ನೀಡಲು ಪ್ರಮುಖ ಆರೋಪಿ ಮನ್ಸೂರ್ ಖಾನ್‌ನಿಂದ ಲಂಚ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆ ನಡೆಸಿದೆ.
Related Articles
Advertisement
ಈ ಸಂಬಂಧ ಭಾನುವಾರ ನಿಂಬಾಳ್ಕರ್ ಅವರನ್ನು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿರುವ ಸಿಬಿಐ ಅಧಿಕಾರಿಗಳು, ಆರ್‌ಬಿಐ ಅಧಿಕಾರಿಗಳು ಆರೋಪಿತ ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡಿದರೂ ಸಂಸ್ಥೆ ಹಾಗೂ ಆರೋಪಿಗಳಿಗೆ ಕ್ಲೀನ್‌ಚೀಟ್ ಕೊಡಲು ಕಾರಣವೇನು? ತಮ್ಮ ವರದಿಯಲ್ಲಿ ಹಣಕಾಸಿನ ಸಂಸ್ಥೆಯಾಗಿರುವುದಿಲ್ಲ ಎಂದು ಉಲ್ಲೇಖೀಸಿದ್ದಿರಿ? ಆದರೆ, ಹಣಕಾಸಿನ ಸಂಸ್ಥೆ ಅಲ್ಲದಿದ್ದರೇ ಹೇಗೆ ಸಾವಿರಾರು ಮಂದಿಯಿಂದ ಸಾವಿರಾರು ಕೋಟಿ ರೂ. ಸಂಗ್ರಹ ಮಾಡುತ್ತಾರೆ? ವಂಚನೆ ಬಗ್ಗೆ ಯಾವುದೇ ಸೂಕ್ತ ಸಾಕ್ಷ್ಯಗಳು ಇಲ್ಲ ಎಂದು ಹೇಳುತ್ತಿರಿ?
ಹಾಗಾದರೆ ಯಾವ ಉದ್ದೇಶಕ್ಕೆ ಸಂಸ್ಥೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿತ್ತು? ನಂತರ ಅದನ್ನು ಹೇಗೆ ಹಿಂದಿರುಗಿಸುತ್ತಿತ್ತು? ಎಂಬುದು ತಮ್ಮ ತನಿಖೆಯಿಂದ ತಿಳಿದು ಬಂದಿರಲಿಲ್ಲವೇ?, ವಂಚಕ ಸಂಸ್ಥೆಯಲ್ಲಿ ನ್ಯೂನ್ಯತೆಗಳಿಲ್ಲ ಎನ್ನುವುದಾದರೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಂಚನೆ ಆಗಲು ಹೇಗೆ ಸಾಧ್ಯ? ಸಂಸ್ಥೆಯ ಪರವಾಗಿ ವರದಿ ನೀಡಲು ಲಂಚ ಪಡೆದಿದ್ದಿರಾ ಎಂಬ ಆರೋಪ ಕುರಿತ ಪ್ರತಿಕ್ರಿಯೆ ಏನು? ಸೇರಿದಂತೆ ಸುಮಾರು 25ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿಚಾರಣೆ ಸಾಧ್ಯತೆ: ಈ ನಡುವೆ 2017ರಲ್ಲಿ ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಾಗ ಪೂರ್ವವಿಭಾಗದ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಈ ಮೊದಲು ತನಿಖೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು ಅಜಯ್ ಹಿಲೋರಿ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಸಂಂಬಧ ಎಸ್‌ಐಟಿಗೆ ನೀಡಿರುವ ಹೇಳಿಕೆಯನ್ನಾಧರಿಸಿ ಸದ್ಯದಲ್ಲೇ ಅಜಯ್ ಹಿಲೋರಿ ಅವರನ್ನು ಸಹ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.