Advertisement
ನನ್ನ ಬಾಳ ಸೊಗಸೇ,ನಿನ್ನ ನೆನಪಿನ ಆಸರೆಯಲ್ಲಿ ಅನುಗಾಲ ತನು-ಮನ ಮಿಂದರೂ ನಾನರಿಯದ ಒಬ್ಬಂಟಿತನ, ಏಕಾಂಗಿಭಾವ ನನ್ನ ಹೃದಯವನ್ನು ತೊರೆಯುವುದೇ ಇಲ್ಲ. ಕಾರಣ ಹೇಳಲೆ? ನೀನಿಲ್ಲ ನೋಡು, ನೀನಿನ್ನು ಬರುವುದೇ ಇಲ್ಲ ಎಂಬ ಯಾತನೆ ಹಗಲಿರುಳು ಮೈಮನಸ್ಸನ್ನು ಮುತ್ತಿ, ಸೊಗಸೆಂಬುದು ಮರೀಚಿಕೆಯಾಗಿದೆ. ಅದೇಕೆ ಹೀಗೆ ಹೇಳದೆ, ಕೇಳದೆ ಮಾಯವಾದೆ? ಕಾರಣ ಹೇಳದೆ!
ನೀನೀಗ ಬಾರದೆ…
ಜೊತೆಯಿರದ ಬಾಳ ಜಾತ್ರೆಯಲಿ
ಸೊಗಸೇನಿದೆ….?
ಹೌದು. ನೀನಿರದ, ನಿನ್ನ ಸಾಮೀಪ್ಯವಿರದ ಬದುಕ ಜಾತ್ರೆಯಲ್ಲಿ ಸೊಗಸು, ಸಂಭ್ರಮ ಎಲ್ಲಿಂದ ಬಂದೀತು? ನನ್ನ ಪಾಡಿಗೆ ನಾನಿದ್ದೆ. ಅದೆಲ್ಲಿಂದಲೋ ಬಂದು, ಮನದ ತಿಳಿಗೊಳದಲ್ಲಿ ಬಿರುಗಾಳಿ ಎಬ್ಬಿಸಿ, ಪ್ರೀತಿಯ ಮಳೆ ಹನಿಗಳ ಸುರಿಸಿ, ನಿನ್ನ ಪ್ರೇಮಪಾಶದಲ್ಲಿ ಬಂಧಿಸಿಬಿಟ್ಟೆಯಲ್ಲ; ಅದನ್ನು ನೆನಪಿಸಿಕೊಂಡರೆ ಸಾಕು; ನನಗೆ ವಿಸ್ಮಯವೆನಿಸುತ್ತದೆ. ನನ್ನಂಥ ಕಠೊರ ಹೃದಯಿ, ನಿಷ್ಠುರವಾದಿ, ಗಾಢ ಮೌನಿ, ಏಕಾಂತ ಪ್ರಿಯನನ್ನು ನೀನದೆಷ್ಟು ಸುಲಭವಾಗಿ ಬದಲಾಯಿಸಿಬಿಟ್ಟೆ? ಕಠೊರ ಹೃದಯ ಬೆಣ್ಣೆಗಿಂತ ಮೃದುವಾಯಿತು. ನಿಷ್ಟುರ ನಿಲುವು ಸಡಿಲಾಯಿತು. ಗಾಢ ಮೌನಿ ವಾಚಾಳಿಯಾದ. ಏಕಾಂತ ಇಷ್ಟಪಡುತ್ತಿದ್ದವ ಸಂಗಾತಿಗಾಗಿ ಹಂಬಲಿಸತೊಡಗಿದ. ಇಷ್ಟೆಲ್ಲ ಆಗಲು ವರ್ಷಗಳೇ ಉರುಳಬೇಕಾಗಿರಲಿಲ್ಲ, ಆದರೆ ಕೆಲವೇ ಕೆಲವು ದಿನಗಳು, ಕ್ಷಣಗಳು ಸಾಕಾದವು. ನಿನ್ನ ಪ್ರೀತಿಯಲ್ಲಿ, ಕಣ್ಣುಗಳಲ್ಲಿ ಹೊಳೆಯುತ್ತಿದ್ದ ಬೆಳಕ ಪ್ರಭೆಯಲ್ಲಿ, ತುಟಿಯಂಚಿನ ಜೇನ ಸುಧೆಯಲ್ಲಿ ಇಷ್ಟೊಂದು ತಾಕತ್ತಿದೆಯೆಂದು ನನಗೆ ಗೊತ್ತಿರಲಿಲ್ಲ. ಕೆಲವೇ ದಿನಗಳಲ್ಲಿ ನಿನ್ನ ದಾಸಾನುದಾಸನಾಗಿಬಿಟ್ಟೆ. ಆಮೇಲೆ ಏನಾಯ್ತು ಗೊತ್ತಲ್ಲ; ಅದುವರೆಗೂ ಶಿಸ್ತೇ ಇಲ್ಲದವನ ಬದುಕಲ್ಲಿ ಶಿಸ್ತು ನಳನಳಿಸತೊಡಗಿತು. ಓದೆಂದರೆ ಮಾರುದ್ದ ಹಾರುತ್ತಿದ್ದ ನಾನು, ಸಾಹಿತ್ಯ ಪುಸ್ತಕಗಳ ಧೂಳು ಕೊಡವಿ, ಪದ್ಮಾಸನ ಹಾಕಿ ಓದಲು ಕುಳಿತೆ. ನಸುಕಿನ ಸಕ್ಕರೆ ನಿದ್ದೆಯನ್ನು ಲಕ್ಷ ಕೊಟ್ಟರೂ ಕಳೆದುಕೊಳ್ಳಲಿಚ್ಛಿಸದ ನಾನು, ಕೇವಲ ನಿನಗೋಸ್ಕರ ಕೋಳಿ ಕೂಗುವ ಮುನ್ನ ಎದ್ದು ಸಕಲ ಸಾಹಸ ಕಾರ್ಯಗಳಿಗೆ ಸಿದ್ಧನಾಗುತ್ತಿದ್ದೆ. ತುಂಬಾ ಮಂಕುದಿನ್ನೆಯಾಗಿದ್ದ ನಾನು ನಿನ್ನ ಗೆಳೆತನದ ಕಾರಣದಿಂದಲೇ ಬಲುಬೇಗ ಪರಿವರ್ತನೆ ಹೊಂದಿದ್ದನ್ನು ಕಂಡು ಆಶ್ಚರ್ಯಗೊಂಡಿರಬೇಕು ನೀನು.
Related Articles
Advertisement
-ನಿನ್ನವನುನಾಗೇಶ್ ಜೆ. ನಾಯಕ