ನವದೆಹಲಿ: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದರೆ, ಮತ್ತೊಂದೆಡೆ ಇ.ಡಿ. ಕಷ್ಟದಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದ ಕಬ್ಬಾಳಮ್ಮ ದೇವಿ ಅರ್ಚಕ ಕುಂಕುಮವನ್ನು ಡಿಕೆಶಿ ಹಣೆಗೆ ಹಚ್ಚಿದ್ದಾರೆ.
ಕರ್ನಾಟಕ ಭವನದಿಂದ ಇ.ಡಿ. ಕಚೇರಿಗೆ ತೆರಳುವ ಮುನ್ನ, ಕಬ್ಬಾಳಮ್ಮ ದೇವಿ ಅರ್ಚಕ ಕಬ್ಬಾಳೆಗೌಡ ಅವರು ವಿಶೇಷ ಪೂಜೆ ನೆರವೇರಿಸಿ ತಂದಿದ್ದ ಕುಂಕುಮವನ್ನು ಡಿಕೆ ಶಿವಕುಮಾರ್ ಹಣೆಗೆ ಹಚ್ಚಿ ಆಶೀರ್ವದಿಸಿದ್ದಾರೆ.
ನನ್ನ ಕ್ಷಮಿಸಿ ಎಂದ ಶ್ರೀರಾಮುಲು:
ಬಿಜೆಪಿಯ ನನ್ನ ಕೆಲವು ಗೆಳೆಯರು ಹೇಳಿದ್ದ ಮಾತು ನಿಜವಾಗುತ್ತಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಬಿಜೆಪಿ ಮುಖಂಡ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆ ಉಲ್ಲೇಖಿಸಿ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಮೊಳಕಾಲ್ಮೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ಡಿಕೆಶಿ ಅಣ್ಣನವರೇ ನನ್ನ ಕ್ಷಮಿಸಿ, ನನ್ನ ಹೇಳಿಕೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ತಿಳಿಸಿದ್ದಾರೆ.