ಮಂಡ್ಯ: ನಾನು ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಗುಲಾಮನಲ್ಲ. ನನ್ನ ನಿಲುವನ್ನು ಪ್ರಶ್ನಿಸುವ ಅಧಿಕಾರವಿರುವುದು ಆರೂವರೆ ಕೋಟಿ ಕನ್ನಡಿಗರಿಗೆ ಮಾತ್ರ. ನಾನು ಕನ್ನಡಿಗರ ಗುಲಾಮ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇರವಾಗಿ ನುಡಿದರು.
ತಾಲೂಕಿನ ಹೆಬ್ಬಕ ವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಹುಲ್‌ಗಾಂಧಿಗೆ ಕರ್ನಾಟಕದ ಚಿತ್ರಣವೇ ಗೊತ್ತಿಲ್ಲ. ಅಂದ ಮೇಲೆ ಜೆಡಿಎಸ್ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡಲು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.
ರಾಹುಲ್ ಜೆಡಿಎಸ್‌ನ್ನು ಬಿಜೆಪಿಯ ಬಿ-ಟೀಂ ಎಂದು ಟೀಕಿಸಿದ್ದಾರೆ. ಅವರು ಮಾತನಾಡುವಾಗ ರಾಜ್ಯದ ಇತಿಹಾಸ ತಿಳಿದು ಮಾತನಾಡಬೇಕು. 2010ರಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದವರು ಯಾರು? ಬಹುಮತ ಸಾಬೀತಿಗೆ ಅವಕಾಶ ನೀಡುವ ಮೂಲಕ ರಾಜ್ಯದಲ್ಲಿ 2ನೇ ಬಾರಿಗೆ ಬಿಜೆಪಿ ಉಳಿಸಿದ್ದು ಕಾಂಗ್ರೆಸ್ ಎನ್ನುವುದನ್ನು ಮರೆಯಬಾರದು ಎಂದು ನೆನಪಿಸಿದರು.
ಸಿದ್ದರಾಮಯ್ಯನೇ ಅವಕಾಶವಾದಿ: ಜೆಡಿಎಸ್‌ನ್ನು ಅವಕಾಶವಾದಿ ಪಕ್ಷವೆಂದು ಟೀಕಿಸಿರುವ ಸಿದ್ದರಾಮಯ್ಯನವರೇ ಅವಕಾಶವಾದಿ ರಾಜಕಾರಣದ ರೂವಾರಿ.
ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಅಭ್ಯರ್ಥಿ ಹಾಕದಂತೆ ಜೆಡಿಎಸ್ ಕಾಲು ಹಿಡಿದುಕೊಂಡವರು ಯಾರು, ಬಿಬಿಎಂಪಿ ಅಧಿಕಾರಕ್ಕಾಗಿ ಯಾರು ಯಾರ ಮನೆಗೆ ಬಂದಿದ್ದರು ಎಂಬುದನ್ನು ಒಮ್ಮೆ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.