Advertisement

ನಾನು ಪೇಪರ್‌ ಹುಲಿ ಅಲ್ಲ

04:52 PM Nov 15, 2018 | |

ದಾವಣಗೆರೆ: ನಾನು ಪೇಪರ್‌ ಹುಲಿ ಅಲ್ಲ, ಪ್ರಾಕ್ಟಿಕಲ್‌ ಮ್ಯಾನ್‌!. ಇದು, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯರ ಗುಡುಗು. ಮರಳುಗಾರಿಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧ ಒಂದು ರೀತಿ
ಸಮರಕ್ಕಿಳಿದಿರುವ ಅವರು, ಬರೀ ಪತ್ರಿಕಾ ಹೇಳಿಕೆಗಳಿಂದ ಬೆಳೆದವನಲ್ಲ.

Advertisement

ನಾನು ಜನಪರ ಹೋರಾಟ ನಡೆಸಿ ಈಗಾಗಲೇ ಬೆಳಗಾವಿ-ಬಳ್ಳಾರಿ ಜೈಲಿಗೆ ಹೋಗಿ ಬಂದವನು. ಯಾರ ಗೊಡ್ಡು ಬೆದರಿಕೆಗೂ ಬಗ್ಗುವನಲ್ಲ. ನಾನು ಜನರ ಸಮಸ್ಯೆ ಪರಿಹಾರಕ್ಕಾಗಿ ಹೋರಾಟಕ್ಕಿಳಿದಿದ್ದೇನೆ.  ನನ್ನ ವಿರುದ್ಧ ಎಷ್ಟೇ ಕೇಸ್‌ ದಾಖಲಿಸಿದರೂ ಹೆದರುವುದಿಲ್ಲ. ಆದರೆ, ಅಮಾಯಕರಿಗೆ ಏನಾದರೂ ತೊಂದರೆ ಮಾಡಿದರೆ ಮಾತ್ರ ಸುಮ್ಮನಿರುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಕಳೆದ ಸೋಮವಾರ ನಡೆಸಲುದ್ದೇಶಿಸಿದ್ದ ಪ್ರತಿಭಟನೆ ಮುಂದೂಡಲಾಯಿತು. ನಾನು ಪ್ರತಿಷ್ಠೆಯಾಗಿ ಪ್ರತಿಭಟನೆ ನಡೆಸುತ್ತಿಲ್ಲ. ತಾಲೂಕಿನಲ್ಲಿ ಆಶ್ರಯ ಮನೆ, ಶೌಚಾಲಯ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಈ ಸಂಬಂಧ ಈಗಾಗಲೇ 5 ಭಾರಿ ಸಭೆ, ಮೂರು ಸಲ ಬೃಹತ್‌ ಪ್ರತಿಭಟನೆ ನಡೆಸಿದ್ದೇನೆ. ನಾನೇನು ದಿಢೀರನೇ ಹೊಳೆಗೆ ಇಳಿಯಲು ಹೊರಟಿಲ್ಲ. ಇದುವರೆಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

ಹಾಗಾಗಿ ಅನಿವಾರ್ಯವಾಗಿ ಹೋರಾಟಕ್ಕೆ ಮುಂದಾಗಿದ್ದು. ನ. 19ರಂದು ಬೆಳಿಗ್ಗೆ 10-30ಕ್ಕೆ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಬಳಿಯಿಂದ ಮೆರವಣಿಗೆ ಮೂಲಕ ನದಿಪಾತ್ರಕ್ಕೆ ತೆರಳಿ ಮರಳು ತೆಗೆಯುವ ಕೆಲಸ ಮಾಡಿಯೇ ತೀರುತ್ತೇನೆ ಎಂದು ಹೇಳಿದರು.

ಹೊನ್ನಾಳಿ ಸೇರಿದಂತೆ ಜಿಲ್ಲೆಯ ಯಾವ ಕಡೆಯೂ ಮರಳಿನ ಅಭಾವ ಇಲ್ಲ ಎಂಬುದಾಗಿ ಉಪವಿಭಾಗಾಧಿಕಾರಿ ಹೇಳಿಕೆ ನೀಡಿದ್ದಾರೆ. ಹಾಗಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಎಸ್ಪಿ, ಎಸಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಲ್ಲರೂ ಸೇರಿ ಹೊನ್ನಾಳಿ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿ, ಯಾವ ಆಶ್ರಯ ಮನೆ, ಶೌಚಾಲಯ, ದೇವಸ್ಥಾನಕ್ಕೆ ಮರಳು ನೀಡಲಾಗಿದೆ ಎಂಬುದನ್ನು ಸಾಬೀತು ಪಡಿಸಲಿ. ಮರಳು ನಿಜವಾಗಿಯೂ ಅಗತ್ಯ ಇದ್ದವರಿಗೆ ಸಿಕ್ಕಿದ್ದಲ್ಲಿ ನಾನು ರಾಜಕೀಯದಿಂದಲೇ ನಿವೃತ್ತಿ ಆಗುವೆ ಎಂದು ಸವಾಲು ಹಾಕಿದರು.

Advertisement

ಹೊನ್ನಾಳಿ ತಾಲ್ಲೂಕಿನಲ್ಲಿ ಸರ್ಕಾರಿ ಕಾಮಗಾರಿಗಳಿಗೇ ಮರಳು ಸಿಗುತ್ತಿಲ್ಲ. ಇನ್ನು ಸಣ್ಣ ನೌಕರರು, ಮಧ್ಯಮ ವರ್ಗದವರಿಗೆ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ನಮ್ಮ ಬೇಡಿಕೆ  ಈಡೇರಿಸಿದರೆ ನಾನು ಹೋರಾಟ ಹಿಂಪಡೆವೆ. ಸೋಮವಾರದೊಳಗೆ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ, ಅಗತ್ಯ ಇರುವ ಸಾಮಾನ್ಯ ಜನರಿಗೆ ಮರಳು ದೊರೆಯುವಂತಾಲು ಕ್ರಮ, ಬರಗಾಲ ಪಟ್ಟಿಗೆ ಹೊನ್ನಾಳಿ ತಾಲೂಕು ಸೇರ್ಪಡೆ ಹಾಗೂ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಮೆಕ್ಕೆಜೋಳ-ಭತ್ತ ಖರೀದಿಸಲು ಭರವಸೆ ನೀಡಬೇಕು. ಈ ಬಗ್ಗೆ ಗುರುವಾರ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿಯಾಗಿ, ಮನವಿ ಸಲ್ಲಿಸುವೆ ಎಂದು ಹೇಳಿದರು.

ಹೊನ್ನಾಳಿ ಕಸಬಾ ಸೊಸೈಟಿ ಅಧ್ಯಕ್ಷ ಎಚ್‌.ಬಿ.ಮೋಹನ್‌, ಉಪಾಧ್ಯಕ್ಷ ಬಿದರಗಡ್ಡೆ ನೀಲಕಂಠಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಬಡಾವಣೆ ರಂಗಪ್ಪ, ಕೆ.ವಿ.ಶ್ರೀಧರ, ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ನಿಮಗಿಂತ ಮೊದಲೇ ಸಚಿವನಾದವ ನಾನು..
ದಾವಣಗೆರೆ: ನಿಮಗಿಂತ ಮೊದಲೇ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದವನು. ನನಗೂ ಸಹ ಕಾನೂನಿನ ಅರಿವಿದೆ. ಯಾವ ವೇದಿಕೆಯಲ್ಲಿ ಏನನ್ನು ಪ್ರಸ್ತಾಪಿಸಬೇಕೆಂಬ
ಪ್ರಜ್ಞೆ ಇದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌.ಶ್ರೀನಿವಾಸ್‌ (ವಾಸು)ಗೆ ಟಾಂಗ್‌ ನೀಡಿದ್ದಾರೆ.

ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ತಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಪೊಲೀಸರಿಗೆ ಸೂಚಿಸಿದ್ದಾರೆ. ಸಚಿವರು
ಜಿಲ್ಲೆಯಲ್ಲಿ ಪ್ರವಾಸ ಮಾಡಿ ಗಂಭೀರ ಸಮಸ್ಯೆಗಳ ಬಗ್ಗೆ ಅರಿತಿಲ್ಲ. ಹಾಗಾಗಿ ಸಾಮಾನ್ಯ ಜನರ ಸ್ಥಿತಿಗತಿ ಗೊತ್ತಿಲ್ಲ. ನಾವು ಪ್ರತಿಭಟನೆ ಮಾಡುತ್ತೇವೆ ಎಂಬುದಾಗಿ ಹೇಳಿದಾಗ ಸೌಜನ್ಯಕ್ಕಾದರೂ ಕರೆದು ಮಾತನಾಡಬೇಕಿತ್ತು. ಅದನ್ನು ಬಿಟ್ಟು ಕಾನೂನು ಕ್ರಮದ ಬಗ್ಗೆ ಮಾತನಾಡಿರುವುದು
ದುರಂತ ಎಂದರು. ಸರ್ಕಾರಿ ಕಾರ್ಯಕ್ರಮ, ಜಯಂತಿ ಆಚರಣೆಗೆ ಬಂದು ಹೋದರೆ ಸಾಲದು. ಜಿಲ್ಲೆಯ ಜನರ ಸಮಸ್ಯೆ ಪರಿಹರಿಸುವ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರು
ಕಾರ್ಯೋನ್ಮುಖರಾಗಬೇಕು. ತುಮಕೂರಿನಿಂದ ದಾವಣಗೆರೆಗೆ ಬರಲು 2 ಗಂಟೆ ಸಾಕು. ಸಚಿವರಿಗೆ ಇಚ್ಛಾಶಕ್ತಿ ಇಲ್ಲ. ಹಾಗಾಗಿ ನಮ್ಮ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಮುಖ್ಯಮಂತ್ರಿಗಳೇ ರಾಜ್ಯ ಪ್ರವಾಸ ಮಾಡುತ್ತಿಲ್ಲ. ಇನ್ನು ಜಿಲ್ಲಾ ಸಚಿವರು ಮಾಡುವುದೆಲ್ಲಿಂದ ಬಂತು?. ಯಥಾ ರಾಜ,
ತಥಾ ಪ್ರಜೆ ಎಂಬಂತಿದ್ದಾರೆ. ಈ ಸರ್ಕಾರವೇ ಇನ್ನೂ ಟೇಕಾಫ್‌ ಆಗಿಲ್ಲ ಎಂದು ಟೀಕಿಸಿದರು.

ನಿಮ್ಮ ಗುಬ್ಬಿ ಕ್ಷೇತ್ರ ನಿಮಗೆ ಎಷ್ಟು ಮುಖ್ಯವೋ ಹಾಗೆಯೇ ನನಗೂ ಹೊನ್ನಾಳಿ ಕ್ಷೇತ್ರ ಅಷ್ಟೇ ಮುಖ್ಯ. ನನ್ನ ಮೇಲೆ ನಂಬಿಕೆಯಿಂದ ಗೆಲ್ಲಿಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳಲು ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ನಾನು ಬಡವರ ಧ್ವನಿಯಾಗಿ ಮಾತನಾಡುತ್ತಿದ್ದೇನೆ. ಹೊನ್ನಾಳಿ ತಾಲೂಕಿನ ಸಮಸ್ಯೆ ಏನೆಂಬುದು ನನಗೆ ಗೊತ್ತು. ಪ್ರಸ್ತುತ ಹಣ ಕೊಟ್ಟರೂ ಮರಳು ಸಿಗುತ್ತಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಬೈಕ್‌ನಲ್ಲಿ ತರುವ ಮರಳಿನ ಜತೆ ವಾಹನವನ್ನೂ ವಶಕ್ಕೆ ಪಡೆಯಲಾಗುತ್ತಿದೆ. ಮರಳು ಮಾಫಿಯಾ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಎದುರಾಗಿದೆ. ವಾಸ್ತವ ವರದಿ ತರಿಸಿಕೊಂಡು ಎರಡೂ ತಾಲೂಕನ್ನು ಬರಪೀಡಿತ ಪಟ್ಟಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರ ಬೆಂಬಲ ಬೆಲೆ ಘೋಷಿಸಿದ್ದು, ತಕ್ಷಣ ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಪೊಲೀಸರಿಗೆ ಹೆದರಲ್ಲ, ಜೈಲಿಗೆ ಹೋಗಲು ಸಿದ್ಧ ಸಾವಿರ ಮಂದಿ ಪೊಲೀಸರು ಬಂದರೂ ನಾನು ಹೆದರುವುದಿಲ್ಲ. ಈ ರೇಣುಕಾಚಾರ್ಯ ಈಗಾಗಲೇ ಎರಡು ಬಾರಿ ಜೈಲಿಗೆ ಹೋಗಿ ಬಂದವನು. ಈಗ 50 ಕೇಸ್‌ ನನ್ನ ಮೇಲಿದೆ. ಸೋಮವಾರ ಮರಳು ತುಂಬಿಸಲು ಹೊಳೆಗೆ ಹೋಗುವುದು ಖಚಿತ. ಬೇಕಿದ್ದರೆ ಪೊಲೀಸರು ನನ್ನ ವಿರುದ್ಧ ಕೇಸ್‌ ಹಾಕಲಿ.

ಮತ್ತೆ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಆದರೆ, ಅಮಾಯಕ ಜನರಿಗೇನಾದರೂ ತೊಂದರೆ ಕೊಟ್ಟಲ್ಲಿ ಸುಮ್ಮನಿರುವುದಿಲ್ಲ.
ಕಳೆದ ಭಾನುವಾರ ಪೊಲೀಸರು ಹೊನ್ನಾಳಿ ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ಯಾರೂ ಸಹ ಪ್ರತಿಭಟನೆಯಲ್ಲಿ
ಭಾಗವಹಿಸಕೂಡದೆಂದು ಮೈಕ್‌ನಲ್ಲಿ ಅನೌನ್ಸ್‌ ಮಾಡಿ, ಬೆದರಿಸಿದ್ದಾರೆ. ಏನೇ ಆದರೂ ನನ್ನ ಜನಪರ ಹೋರಾಟ ನಿಲ್ಲದು. 
 ಎಂ.ಪಿ. ರೇಣುಕಾಚಾರ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next