Advertisement

ನಾನೂ ಒಬ್ಬ ಇಂಡಿವಿಜ್ಯುವಲ್‌

06:00 AM May 04, 2018 | |

ಹುಟ್ಟು-ಸಾವು ಪ್ರತಿಯೊಂದು ಆಕಸ್ಮಿಕ ಅನ್ನೋದು ಎಲ್ಲರಿಗೂ ಗೊತ್ತಿರೋ ಮಾತು. ಆದರೆ, ಇವೆರಡರ ಮಧ್ಯ ಇರೋ ಬದುಕು ಕೂಡ ಆಕಸ್ಮಿಕನಾ? ಈ ಬಾಳಿಗೊಂದು ಸಾರ್ಥಕತೆ ಯಾವಾಗ ಬರುತ್ತೆ? ಮನಸಲ್ಲಿ ಅದೆಷ್ಟು ಪ್ರಶ್ನೆ ಇದೆ ಅಲ್ವಾ? ಹುಟ್ಟಿದ ಮಗು ಮೊದಲು “ಅಮ್ಮಾ’ ಅನ್ನುತ್ತೆ. ಅಪ್ಪಾ ಅನ್ನುತ್ತೆ. ಹೀಗೆ ಕಾಲ ಕಳೆದ ಹಾಗೆ ಹೊರ ಪ್ರಪಂಚದ ಕಡೆಗೆ ತೆರೆದುಕೊಳ್ಳುತ್ತೆ. ದಿನದಿಂದ ದಿನಕ್ಕೆ ಹೊಸದನ್ನು ಕಲಿಯುತ್ತೆ. ಆ ಮಗುವಿಗೆ ದಿನ ಕಳೆದಂತೆ ತನ್ನದೇ ಆದ ಆಸೆ ಕನಸುಗಳು ಹುಟ್ಟುತ್ತವೆ. ಒಂದು ಪ್ರಾಯದವರೆಗೆ ತಂದೆತಾಯಿಯರನ್ನು ಅನುಕರಿಸುತ್ತಿದ್ದ ಮಗುವಿಗೆ ತಾನೂ ಒಬ್ಬ “ಇಂಡಿವಿಜ್ಯುವಲ್‌’ ಅನ್ನೋ ಭಾವನೆ ಬೆಳೆಯುತ್ತ ಹೋಗುತ್ತದೆ.

Advertisement

ಮಕ್ಕಳ ಒಳಿತನ್ನು ಬಯಸುವವರು ತಂದೆತಾಯಿಯಲ್ಲವೆ? ಅಂದ ಮೇಲೆ ಅವರ ಆಸೆ, ಕನಸುಗಳಿಗೆ ಸ್ಪಂದಿಸಬೇಕಾದವರೂ ಅವರೇ ತಾನೇ. ಒಬ್ಬ ಸಾಧಕನನ್ನು ಪ್ರಶ್ನಿಸಿದಾಗ ಅವನು ಹೇಳುವ ಮಾತು ಎಂದರೆ, “”ನನ್ನ ತಂದೆತಾಯಿಯ ಆಶೀರ್ವಾದ ಮತ್ತು ಅವರ ಬೆಂಬಲವೇ ನಾನು ಇವತ್ತು ಈ ಮಟ್ಟದ ಸಾಧನೆ ಮಾಡಲು ಸಾಧ್ಯ ಮಾಡಿದೆ” ಎನ್ನುತ್ತಾರೆ. ಇನ್ನು ತಂದೆತಾಯಿ ತಮ್ಮ ಮಕ್ಕಳಿಗೆ ಯಾವತ್ತೂ ಒಂದು ಹೇಳುವ ಮಾತಿದೆ, “”ನಾನಂತೂ ಡಾಕ್ಟರ್‌ ಇಂಜಿನಿಯರಿಂಗ್‌ ಮಾಡಕ್ಕೆ ಆಗ್ಲಿಲ್ಲ. ನೀನಾದ್ರೂ ಮಾಡು” ಎಂದು. ಆಗ ಕೆಲವು ಮಕ್ಕಳ ಉತ್ತರ, “”ಅಯ್ಯೋ ಬಿಡಿ, ನೀವೇ ಮಾಡ್ಲಿಕ್ಕೆ ಆಗ್ಲಿಲ್ಲ ಇನ್ನು ನಾನ್‌ ಹೇಗೆ ಮಾಡ್ಲಿ?” ಎನ್ನುವವರೂ ಇದ್ದಾರೆ. ಇದರಲ್ಲಿ ತಂದೆತಾಯಿಯ ಯಾವ ತಪ್ಪೂ ಇಲ್ಲ. ಮಕ್ಕಳ ತಪ್ಪೂ ಇಲ್ಲ. ಅವರ ಆಸೆ ತಪ್ಪಲ್ಲ. ಆದರೆ ನಾವು ಬಯಸಿದ್ದನ್ನು ಓದಲು ಆಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ನಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರಿ, ವೈಯಕ್ತಿಕ ಆಕಾಂಕ್ಷೆಗಳನ್ನು ಒಡೆದು ಹಾಕಬಹುದೆ? ಜಗತ್ತಿನ ವಿಭಿನ್ನ ಪ್ರತಿಭೆಗಳಾಗಿ ಉಜ್ವಲಿಸುವುದನ್ನು ನೀವುಗಳು ತಡೆಯುತ್ತೀರಾ? 

ಮಕ್ಕಳು ಬಗ್ಗೆ “”ನಾನು ನನ್ನ ಕನಸನ್ನು ನನಸಾಗಿಸಿಕೊಳ್ಳಲು ಆಗಲಿಲ್ಲ. ನನ್ನ ಮಕ್ಕಳಾದರೂ ಅವರ ಕನಸಿನ ದಾರಿಯಲ್ಲಿ ಸಾಗಲಿ” ಎಂದೂ ಯೋಚಿಸಬಹುದು. ಒಂದು ವೇಳೆ ಪ್ರತಿಯೊಬ್ಬ ತಂದೆತಾಯಿ ತಮ್ಮ ಮಕ್ಕಳು ಡಾಕ್ಟರ್‌ಗಳು, ಇಂಜಿನಿಯರ್‌ಗಳೇ ಆಗಬೇಕು ಎಂದಿದ್ದರೆ ಇಂದು ನಾವು ಯಾವ ಕಲೆಯನ್ನೂ ಕಾಣುತ್ತಿರಲಿಲ್ಲ. ಯಕ್ಷಗಾನ, ರಂಗಭೂಮಿ, ಸಾಹಿತ್ಯ, ಸಂಗೀತ, ಚಿತ್ರಕಾರರಂಥ ಕಲಾವಿದರೂ ನಮ್ಮಲ್ಲಿ ಇರುತ್ತಿರಲಿಲ್ಲ. ಅದೆಷ್ಟು ಜನ ಈಗಾಗಲೇ ತಮ್ಮ ವಿಭಿನ್ನ ಕಲೆಯಿಂದ ಜಗತ್ತಿಗೆ ಕೀರ್ತಿಯನ್ನು ತಂದುಕೊಟ್ಟಿಲ್ಲ !

ಹಾಗೆ ನೋಡಿದರೆ ಈಗ ಬರುವ ಆತ್ಮಹತ್ಯೆಯ ಪ್ರಕರಣಗಳನ್ನು ಒಮ್ಮೆ ಗಮನಿಸಿ. ಅದರಲ್ಲಿ ಹೆಚ್ಚು ದಾಖಲಾದ ಪ್ರಕರಣಗಳು ಎಂದರೆ ಇಂಜಿನಿಯರ್‌ಗಳದ್ದೇ ಆಗಿವೆ. ಅವರಿಗೇನು? ಕೈತುಂಬ ಸಂಬಳ ಬರುತ್ತದೆ, ಯಾವ ಸಮಸ್ಯೆಯೂ ಇಲ್ಲ, ಮತಾöಕೆ ಹೀಗೆ ಮಾಡಿಕೊಳ್ಳುತ್ತಾರೆ ಎನಿಸುತ್ತದೆ ಅಲ್ಲವೆ? ಕಾರಣ ಇಷ್ಟೇ, ಮಾನಸಿಕ ಖನ್ನತೆ. ಖನ್ನತೆ ಉಂಟಾಗುವುದು ತಾವು ಮಾಡುವ ಕೆಲಸದ ಮೇಲೆ ಪ್ರೀತಿ ಇಲ್ಲದೆ ನೆಮ್ಮದಿ ಇಲ್ಲದೆ ಮನಸ್ಸಿನ ಒತ್ತಡ ಹೆಚ್ಚಾದಾಗ ಮಾತ್ರ. ಇಲ್ಲಿ ನನ್ನ ಉದ್ದೇಶ ಯಾವುದೇ ಹುದ್ದೆಯನ್ನು ದೂಷಿಸುವುದಲ್ಲ. ಅರ್ಥಮಾಡಿಕೊಳ್ಳಿ. ಒಬ್ಬರ ಒತ್ತಾಯಕ್ಕೆ ಬಿದ್ದು ಇಷ್ಟ ಇಲ್ಲದ್ದನ್ನು ಸಾಯುವವರೆಗೂ ಮಾಡಬಹುದು. ಆದರೆ, ಅದು ನೆಮ್ಮದಿ ಕೊಡುತ್ತದೆಯೆ? ಒಂದಲ್ಲ ಒಂದು ದಿನ ಖನ್ನತೆ ಖಂಡಿತ ಕಾಡುತ್ತದೆ.

ಒಂದಲ್ಲ ಒಂದು ರೀತಿ ನಾವೆಲ್ಲ ಮಾಡುವುದು ಹೊಟ್ಟೆಗಾಗಿ ಅಂದ ಮೇಲೆ ಇಷ್ಟಪಟ್ಟಿದ್ದನ್ನು ಮಾಡುವುದರಿಂದ ಯಶಸ್ಸು ದೊರೆಯುವುದಿಲ್ಲವೆ? ಅದರಲ್ಲೇ ಪರಿಣಿತ ಹೊಂದಿ ಅತ್ಯುತ್ತಮ ಸಾಧನೆ ಮಾಡಬಹುದಲ್ಲವೆ? ಬದುಕಿನುದ್ದಕ್ಕೂ ನೆಮ್ಮದಿಯಿಂದ, ಖುಷಿಯಿಂದ ಬಾಳಬಹುದಲ್ಲವೆ? ರಾಷ್ಟ್ರಕವಿ ಕುವೆಂಪು, ಹೆಸರಾಂತ ಕ್ರಿಕೆಟ್‌ ಆಟಗಾರ ಸಚಿನ್‌ ತೆಂಡೂಲ್ಕರ್‌, ನಟಿ ದೀಪಿಕಾ ಪಡುಕೋಣೆ ಹೀಗೆ ಅನೇಕ ಸಾಧಕರ ಗುಟ್ಟು ಇದೇ ಆಗಿರಬಹುದಲ್ಲವೆ? ಇದಕ್ಕಿಂತ ದೊಡ್ಡದೊಂದು ಸಾರ್ಥಕತೆ ಬೇಕೆ ಬಾಳಿನಲ್ಲಿ!

Advertisement

 ಸ್ವಾತಿ ಪ್ರಥ‌ಮ ಬಿ.ಎಸ್ಸಿ . ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next