Advertisement

ನಾನು ಮರಾಠ ಸೇನಾನಿಯಾದೆ !

12:30 AM Mar 01, 2019 | Team Udayavani |

ಧರ್ಮಸ್ಥಳದ ಭಗವಾನ್‌ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಮೆರವಣಿಗೆಯಲ್ಲಿ ನಾನು ಮರಾಠಾ ಸೇನಾನಿಯಾಗಿ ಪಾಲ್ಗೊಂಡಿದ್ದೆ. ಸುಮಾರು ಮೂರು ಸಾವಿರ ಮಂದಿ ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಹಲವು ಕಲಾ ಪ್ರಕಾರಗಳ ಪ್ರದರ್ಶನವಾಯಿತು. ಹನ್ನೆರಡು ವರ್ಷಕ್ಕೊಮ್ಮೆ ಬರುವ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ವಿವಿಧ ರಾಜ್ಯಗಳಿಂದ ಜನರು ಬರುತ್ತಾರೆ.  ಇಂತಹ ಒಂದು ವೈಭವದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲು ಸಿಕ್ಕ ಅವಕಾಶವು ಅಭೂತಪೂರ್ವವಾದದ್ದು. ನೋಡುಗರಾಗಿ ನೋಡುವ ಅವಕಾಶ ಇನ್ನು ಮುಂದೆಯೂ ಸಿಗಬಹುದು. ಆದರೆ, ವಿದ್ಯಾರ್ಥಿ ಜೀವನದಲ್ಲಿ ಕಲಾವಿದರಾಗಿ ಭಾಗವಹಿಸುವ ಅವಕಾಶ ಈಗ ಮಾತ್ರ ಸಿಗಲು ಸಾಧ್ಯ. ಆ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡ ನೆಮ್ಮದಿ ನನಗಿದೆ. ನಿಜಜೀವನದಲ್ಲಿ ಸೇನಾನಿಯಾಗಿರದಿದ್ದರೂ ಮೆರವಣಿಗೆಯಲ್ಲಿ ಸೇನಾನಿಯಾಗಿ ಭಾಗವಹಿಸಿದ್ದು ಖುಷಿಯ ವಿಚಾರವೇ ಸರಿ. ಒಂದು ದಿನದ ಮಟ್ಟಿಗೆ ಸೇನಾನಿಗಳಾಗಿ ಭಾಗವಹಿಸಿದ್ದ ನಾವೆಲ್ಲರೂ ಸೆಲೆಬ್ರಿಟಿಗಳಾಗಿ ಮಿಂಚಿದೆವು. ಹಲವರು ನಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡರು. ದಿನವಿಡೀ  ಸುತ್ತಾಡಿ ಸುಸ್ತಾಗಿದ್ದರೂ ಸೆಲ್ಫಿಗಾಗಿ ಆಗಾಗ ಸ್ಮೈಲ್‌ ಮಾಡುವ ಸರದಿ ನಮ್ಮದಾಗಿತ್ತು. ಜನರ ಸೆಲ್ಫಿಗಾಗಿ ನಾವು ಸ್ಮೈಲ್‌ ಮಾಡಿದೆವು. ಆದರೆ, ನಮ್ಮ ಸೆಲ್ಫಿ ನಮಗೆ ತೆಗೆದುಕೊಳ್ಳಲು ಸಮಯವಿರಲಿಲ್ಲ ಎಂಬುದು ಬೇಸರದ ಸಂಗತಿ. ಮೆರವಣಿಗೆಯ ಫೊಟೋ ತೆಗೆಯಲು ಬೈಕಿನ ಹಿಂದಿನಿಂದ ಸರ್ಕಸ್‌ ಮಾಡಿ ಪ್ರಯತ್ನಿಸುತ್ತಿದ್ದರು.

Advertisement

ಮಹಿಳೆಯರೂ ದೇಶಕ್ಕೆ ಆಪತ್ತು ಬಂದಾಗ ಸೈನಿಕರಾಗಿ ಹೋರಾಡಲು ಸಿದ್ಧ ಎಂಬಂತಿದ್ದ ನಮ್ಮ ಮಹಿಳಾ ಸೇನೆಯು ನೆರೆದಿದ್ದವರೆಲ್ಲರ ಗಮನ ಸೆಳೆಯಿತು. ನಾವು ಭರತ ಚಕ್ರವರ್ತಿ ಹಾಗೂ ಭಗವಾನ್‌ ಬಾಹುಬಲಿಗೆ ಜಯಘೋಷವನ್ನು ಹಾಕುತ್ತಿದ್ದಾಗ ಎಲ್ಲರೂ ಭಾವಪರವಶರಾಗಿ ನೋಡುತ್ತಿದ್ದುದು ಎಲ್ಲೆಡೆ ಕಂಡು ಬಂದಿತು.

ಬಿಸಿಲ ತಾಪಕ್ಕೆ ತುಂಬಾ ಬಾಯಾರಿಕೆಯಾಗುತ್ತಿತ್ತು. ನೀರಡಿಕೆಯನ್ನು ನೀಗಿಸಲು ಮೆರವಣಿಗೆಯಲ್ಲಿ ಭಾಗವಹಿಸಿದ  ಕಲಾವಿದರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ನಮ್ಮ ಸೇನಾ ಗುಂಪಿಗೆ ನಿರ್ದೇಶಕರಾಗಿದ್ದವರು ಆಗಾಗ ನಿರ್ದೇಶನವನ್ನು ನೀಡುತ್ತ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಕಾಲಿಗೆ ಪೆಟ್ಟಾಗಿದ್ದರೂ ಸಹ ನೋವನ್ನು ಲೆಕ್ಕಿಸದೇ ಚಕ್ರವರ್ತಿಯ ದಿಗ್ವಿಜಯದ ಬೆಳಗ್ಗಿನ ಹಾಗೂ ಸಂಜೆಯ ಮೆರವಣಿಗೆಯಲ್ಲಿ ಭಾಗವಹಿಸಿದ ಸಾರ್ಥಕತೆ ನನ್ನಲ್ಲಿದೆ. ನಮ್ಮಲ್ಲಿ ಏನಾದರೊಂದು ಅಂದುಕೊಂಡ ಕೆಲಸವನ್ನು ಮಾಡಬೇಕೆನ್ನುವ ಛಲ, ಹಠವೊಂದಿದ್ದರೆ ಏನನ್ನು ಬೇಕಾದರೂ ಮಾಡಲು ಸಾಧ್ಯ. ಒಟ್ಟಿನಲ್ಲಿ ಈ ಮಹಾಮಸ್ತಕಾಭಿಷೇಕವು ನನ್ನ ಜೀವನದಲ್ಲಿ ಮರೆಯಲಾಗದ ಅಮೂಲ್ಯ ಕ್ಷಣಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. 

ಕಲ್ಪನಾ ಕೆ.
ತೃತೀಯ ಬಿ.ಎ., ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next