Advertisement
ನಿಮ್ಮೊಳಗೆ, ನಿಮಗೆ ಗೊತ್ತಿಲ್ಲದ ಹಾಗೆ ಬದಲಾವಣೆಗಳಾಗುತ್ತವೆ. ಧ್ವನಿಯಿಂದ ಹಿಡಿದು ಭಾವನೆಗಳವರೆಗೂ ಬದಲಾಗುತ್ತೀರಿ. ಅಪ್ಪನೇ ನನ್ನ ಹೀರೋ ಅಂದುಕೊಂಡಿದ್ದ ನೀವೇ, ಅಪ್ಪನೆಂದರೆ ಒಂದು ಸವಾಲಿನ ರೀತಿ ನೋಡುತ್ತೀರಿ. ಅಮ್ಮನ ಹತ್ತಾರು ಪ್ರಶ್ನೆಗಳು ಕೋಪ ತರಿಸುತ್ತವೆ. ಅಷ್ಟೂ ದಿನ ಒಗ್ಗಿದ್ದ ಅಮ್ಮನ ಕೈರುಚಿ, ಅಂದಿನಿಂದ ಯಾಕೋ “ಟೇಸ್ಟ್‌ಲೆಸ್’ ಅನ್ನಿಸಿಬಿಡುತ್ತದೆ. ಮುನಿಸು ಹೆಗಲೇರಿ, ಅಮ್ಮನ ಕೈರುಚಿಗಿಂತ ಹೋಟೆಲ್ ರುಚಿಯೇ ಅದ್ಭುತವೆಂದು ಹೊಗಳಲು ಶುರುಮಾಡಿರುತ್ತೀರಿ. ಮನೆಯ ಎಲ್ಲರಿಂದಲೂ ದೂರವಿದ್ದುಬಿಡಬೇಕು, ಅವರೆಲ್ಲ ನನ್ನ ಪಾಲಿಗೆ ದುಶ್ಮನ್ ಅಂತ ನಿಮ್ಮೊಳಗೆ ಅನ್ನಿಸಲು ಶುರುವಾಗಿದೆ.
ನೆನಪಿಡಿ, ನಿಮ್ಮ ಅಪ್ಪ- ಅಮ್ಮ ನಿಮ್ಮ ಹಂತವನ್ನೇ ದಾಟಿ ಬಂದಂಥವರು. ಅವರಿಗೆ ನಿಮ್ಮ ವಯಸ್ಸಿನ ತಳಮಳ ಬಗ್ಗೆ ಸಂಪೂರ್ಣ ಅರಿವಿದೆ. ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲರು. ಹುಚ್ಚೆದ್ದು ಓಡುವ ಮನಸ್ಸಿಗೆ ಎಲ್ಲಿ, ಹೇಗೆ ಕಡಿವಾಣ ಹಾಕಬೇಕು? ಮುಂದಿನ ದಿನಗಳು ಚೆನ್ನಾಗಿರಬೇಕಾದರೆ ಈ ಹಂತದಲ್ಲಿ ತಿದ್ದದಿದ್ದರೆ ನಂತರದ ಪರಿಸ್ಥಿತಿ ಕೈಗೆ ಸಿಗುವುದಿಲ್ಲ ಎಂಬುದೂ ಅವರಿಗೆ ಅರಿವಿದೆ. ನಿಮ್ಮ ಭವಿಷ್ಯದ ಬಗ್ಗೆ ಅವರಿಗೆ ಭಯವಿದೆ, ಕಾಳಜಿ ಇದೆ. ತಡವಾಗಿ ಮನೆಗೆ ಬರುವ ಮಗಳಿಗೆ ಗದರದೇ ಹೋದರೆ, ನಾಳೆ ಇನ್ನೂ ತಡವಾಗಿ ಬರುವುದಿಲ್ಲವೇ? ಓದದೇ ಬೀದಿ ಬೀದಿ ಅಲೆಯುವ ಮಗನಿಗೆ ಭಯಪಡಿಸದಿದ್ದರೆ ನಾಳಿನ ಅವನ ಭವಿಷ್ಯವೇನು? ಆ ಭಯ ಅವರಿಗಿರುತ್ತದೆ. ಆ ಕಾರಣಕ್ಕಾಗಿಯೇ ನಿಮ್ಮನ್ನು ಒಂದು ಹಿಡಿತದಲ್ಲಿಡಲು ಬಯಸುತ್ತಾರೆ.
“ನಂಗೆ ಅಷ್ಟೂ ಗೊತ್ತಾಗಲ್ವಾ? ನಾನೇನು ಚಿಕ್ಕ ಮಗುನಾ?’ ಅಂತಿರೇನು!!? ಬೀಸುವ ಬಿರುಗಾಳಿ, ಜೋರಾದ ಅಲೆಗಳ ವಯಸ್ಸದು. ಯಾವುದಕ್ಕೂ ಯೋಚಿಸದೇ ಧುಮುಕಿ ಬಿಡುತ್ತದೆ. ಎಲ್ಲಾ ವಿಷಯದಲ್ಲೂ ಪೋಷಕರೇ ಸರಿಯೆಂದು ವಾದಿಸಲಾಗದು! ನೀವು ಎಂಎಸ್ಸಿ ಮಾಡಬೇಕೆಂದು ಕನಸು ಕಂಡಿದ್ದರೆ, “ಇಲ್ಲ ಇಲ್ಲ… ನೀನು ಎಂಜಿನಿಯರಿಂಗೆ ಮಾಡಬೇಕು’ ಎಂದು ಹೆತ್ತವರು ಹಠವಿಡಿದರೆ ಅದು ಅವರ ತಪ್ಪು. ಮಕ್ಕಳು ಬಯಸುವುದನ್ನು ಓದಿಸಬೇಕು. ಅವರ ಗುರಿಗೆ ಕಾವಲಾಗಬೇಕು. ಹಾಗಾದರೆ ನೀವೇನು ಮಾಡಬಹುದು? ಮುಷ್ಕರಕ್ಕೆ ಧಿಕ್ಕಾರ ಕೂಗಿದ್ದಂತೆ ನಿಲ್ಲುವುದಲ್ಲ. ನಿಮ್ಮ ಇಷ್ಟದ ಬಗ್ಗೆ, ಕನಸಿನ ಬಗ್ಗೆ, ಗುರಿಯ ಬಗ್ಗೆ ಸ್ಪಷ್ಟವಾಗಿ ಅವರಿಗೆ ಅರ್ಥಮಾಡಿಸಬೇಕು. ನೀವು ಪ್ರೀತಿಸಿದ ಹುಡುಗನನ್ನು ಮದುವೆಯಾಗುವುದು ನಿಮ್ಮ ಹಕ್ಕೇ! ಅವರು ನಿಮ್ಮನ್ನು ಹೆತ್ತವರು ಅದರಲ್ಲೂ ಅವರ ಪಾಲಿದೆ. ನೀವು ಹಾಳಾಗಲಿ ಎಂದು ಯಾರೂ ಬಯಸುವುದಿಲ್ಲ. ನಿಮ್ಮ ಪ್ರೀತಿ ನಿಮ್ಮನ್ನು ಚಂದವಾಗಿಡುತ್ತದೆ ಎಂದು ಗೊತ್ತಾದರೆ, ಅವರೇ ನಿಂತು ನಿಮಗೆ ಆ ಮದುವೆ ಮಾಡಿಬಿಡುತ್ತಾರೆ.
ಯಾವ ಹೆತ್ತವರೂ ಮಕ್ಕಳಿಗೆ ನೋವಾಗಲಿ ಎಂದು ನಿಯಂತ್ರಣಕ್ಕೆ ನಿಲ್ಲುವುದಿಲ್ಲ. ಭೂಮಿಯ ಮೇಲಿನ ಪ್ರತಿಜೀವಿಯೂ ತನ್ನ ಸಂತಾನದ ಚಂದದ ಬಾಳಿಗೆ ಶ್ರಮಿಸುತ್ತದೆ. ಅಂತೆಯೇ ಪೋಷಕರು ಕೂಡ. ಎಲ್ಲವನ್ನೂ ಅರ್ಥಮಾಡಿಕೊಂಡರೆ ತಿರುಗಿ ಬೀಳುವ ಯೋಚನೆಯನ್ನು ನೀವು ಮಾಡುವುದಿಲ್ಲ.
—
ಬಾಕ್ಸ್
ಪೋಷಕರಿಗೆ ಎದುರಾಡುವ ಮುನ್ನ…
– ನಿಮ್ಮನ್ನು ಹೊತ್ತು ಹೆತ್ತು, ಸಾಕಲು ಪೋಷಕರು ಎಷ್ಟು ಶ್ರಮವಹಿಸಿದ್ದಾರೆಂಬುದು ತಿಳಿದಿರಲಿ.
– ಪೋಷಕರ್ಯಾರೂ ಮಕ್ಕಳಿಗೆ ನೋವಾಗಲಿ ಎಂದು ಬಯಸುವುದಿಲ್ಲ. ಅವರ ಮಾತಿನಲ್ಲಿ ಒಳಿತೇ ಇರುತ್ತೆ ಎಂಬುದನ್ನು ನೆನಪಿಟ್ಟುಕೊಳ್ಳಿ.
– ನಿಮ್ಮ ಯೋಗ್ಯ ಆಸಕ್ತಿಗೆ ಪೋಷಕರು ಅಡ್ಡಿಯಾಗುತ್ತಿದ್ದಾರೆ ಎಂದರಷ್ಟೇ, ಅವರ ನಿರ್ಧಾರಗಳನ್ನು ಪರಿಷ್ಕರಿಸಿ.
– ಯವ್ವನದಲ್ಲಿ ಸಿಟ್ಟು ಜಾಸ್ತಿ, ಅನೇಕರಿಗೆ ಆತುರವೇ ಆಸ್ತಿ. ಅದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.
– ನಿಮ್ಮೊಳಗಿನ ತಳಮಳವನ್ನು ಪೋಷಕರಲ್ಲಿ ಒಮ್ಮೆ ಚರ್ಚಿಸಿ.