Advertisement

ಯೋಗಿಗಿಂತ ನಾನು ಯೋಗ್ಯ ಹಿಂದೂ: ಸಿದ್ದು 

06:00 AM Jan 09, 2018 | Harsha Rao |

ಕಾಪು: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗಿಂತ ನಾನು ಉತ್ತಮ ಮತ್ತು ಯೋಗ್ಯ ಹಿಂದೂ. ನನಗೆ ಮನುಷ್ಯತ್ವವಿದೆ. ಮನುಷ್ಯತ್ವ ಪ್ರಕಟಿಸಲು ಹೋದ ಕಾರಣ ನಾನು ಹಿಂದೂ ವಿರೋಧಿಯಾಗಿ ಗುರು ತಿಸಲ್ಪಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

ನೈಜ ಹಿಂದೂವಾಗಿದ್ದರೆ ಸಿದ್ದರಾಮಯ್ಯ ಗೋಹತ್ಯೆ ನಿಷೇಧಿಸಲಿ ಎಂಬ ಯೋಗಿ ಆದಿತ್ಯನಾಥ್‌ ಹೇಳಿಕೆಗೆ ಕಾಪು ವಿನಲ್ಲಿ ತಿರುಗೇಟು ನೀಡಿದ ಅವರು, ಕರ್ನಾಟಕದಲ್ಲಿ ಈಗಾಗಲೇ ಗೋಹತ್ಯಾ ನಿಷೇಧ ಕಾನೂನು ಜಾರಿ ಯಲ್ಲಿದೆ. ಆದರೆ ಕೆಲವೊಂದು ಷರತ್ತುಗಳಿವೆ. ಆ ಕಾರಣದಿಂದ ಬಿಜೆಪಿ ಮತ್ತು ಅದರ ಸಂಘಟನೆಗಳಿಗೆ ಇದು ರುಚಿಸುತ್ತಿಲ್ಲ ಎಂದರು.

ಯೋಗಿ ಆದಿತ್ಯನಾಥ್‌ ಕಾವಿ ಉಟ್ಟು ತಾನೊಬ್ಬ ನೈಜ ಹಿಂದೂ ಎಂದು ಹೇಳುತ್ತಾರೆ. ಆದರೆ ಆತ ಕಾವಿ ಉಟ್ಟ ಸಾಧುವೊ ಅಥವಾ ಇನ್ನಾರೋ ಎಂದು ಪರಾಮರ್ಶಿಸಿ ಕೊಳ್ಳುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಗೋಹತ್ಯೆ ಬಗ್ಗೆ ಮಾತನಾಡುವ ಯೋಗಿ, ಬಿಜೆಪಿ ಯವರಿಗೆ ಗೋವುಗಳನ್ನು ಸಾಕಿ ಅಭ್ಯಾಸವಿದೆಯೇ, ಅದರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಕೃಷಿಕನ ಮಗನಾದ ನಾನು ಹಸು, ಎತ್ತು, ಎಮ್ಮೆ ಹೀಗೆ ಎಲ್ಲವುಗಳ ಸೇವೆ ಮಾಡಿದ್ದೇನೆ. ಗೊಬ್ಬರ ಹೊತ್ತಿದ್ದೇನೆ, ಸೆಗಣಿ ಎತ್ತಿದ್ದೇನೆ, ಹಾಲು ಹಿಂಡಿದ್ದೇನೆ. ಯೋಗಿ ಆದಿತ್ಯನಾಥ್‌ ಎಂದಾದರೂ ಈ ಕೆಲಸ ಮಾಡಿದ್ದಾರೆಯೇ ಎಂದರು.

ಗೋವುಗಳನ್ನು ಕೇವಲ ಹೇಳಿಕೆ, ಪ್ರಚಾರ, ಮತ ಯಂತ್ರಕ್ಕಾಗಿ ಮಾತ್ರ ಬಳಸದಿರಿ. ಬದಲಾಗಿ ಅವುಗಳ ಬಗ್ಗೆ ಪ್ರೀತಿ ತೋರಿಸಿ. ಗೋಹತ್ಯೆ, ಹಿಂದೂ ರಕ್ಷಣೆಯ ನೆಪದಲ್ಲಿ ಅಮಾಯಕರ ಬಲಿಗೆ ಇನ್ನಾದರೂ ಮುಕ್ತಿ ನೀಡಿ ಎಂದು ಕೇಳಿಕೊಂಡ ಅವರು, ಢೋಂಗಿ ಬಿಜೆಪಿ ಯವರಿಗೆ ಎಂದಿಗೂ ಅಧಿಕಾರ ನೀಡಬೇಡಿ. ಅವರನ್ನು ಅಧಿಕಾರದಿಂದ ದೂರವಿರಿಸಿ ಎಂದು ವಿನಂತಿಸಿದರು.

Advertisement

ಮತೀಯ ಸಂಘಟನೆಗಳ ಮೇಲೆ ನಿಗಾ: ಮನುಷ್ಯರೇ ಅಲ್ಲದ ಬಿಜೆಪಿ ಮುಖಂಡರಿಂದ ಹಿಂದುತ್ವದ ಪಾಠ ಕಲಿಯಬೇಕಾದ ಅಗತ್ಯ ಕಾಂಗ್ರೆಸಿಗಿಲ್ಲ. ನಾವು ಹಿಂದೂ ಗಳು; ಅದರಲ್ಲೂ ಮನುಷ್ಯತ್ವವಿರುವ ಹಿಂದೂಗಳು. ಗೋಡ್ಸೆ ಆರಾಧಕರು ನಮಗೆ ಹಿಂದುತ್ವದ ಪಾಠ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೈಂದೂರು ಅರೆಶಿರೂರಿನ ಹೆಲಿಪ್ಯಾಡ್‌ಗೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. 

ಕೋಮು ಗಲಭೆಗಳಿಗೆ ಸಂಘ ಪರಿವಾರದ ಸಂಘ ಟನೆಗಳೇ ಕಾರಣ. ಶ್ರೀರಾಮ ಸೇನೆ, ಪಿಎಫ್‌ಐ, ಬಜರಂಗದಳ, ಆರೆಸ್ಸೆಸ್‌ ಸಂಘಟನೆಗಳ ಮೇಲೆ ನಿಗಾ ಇಡಲು ಸೂಚನೆ ನೀಡಿದ್ದೇನೆ ಎಂದವರು ಹೇಳಿದರು. 

ಯೋಗಿ ನಮ್ಮಲ್ಲಿಗೆ ಬಂದು ಪಾಠ ಮಾಡುವ ಅಗತ್ಯವಿಲ್ಲ. ನಮ್ಮ ರಾಜ್ಯ ನೇರ ತೆರಿಗೆಯಲ್ಲಿ ನಂ.1, ಬಂಡವಾಳ ಹೂಡಿಕೆಯಲ್ಲಿ 3ನೇ ಸ್ಥಾನದಲ್ಲಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next