ಹದಿನೈದಿಪ್ಪತ್ತು ವರ್ಷಗಳ ನಮ್ಮೂರಲ್ಲಿ ಇದ್ದಿದ್ದು ಒಂದೇ ಇಂಗ್ಲೀಷ್ ಶಾಲೆ. ತಮ್ಮ ಮಕ್ಕಳು ಆ ಶಾಲೆಯಲ್ಲಿ ಓದುತ್ತಿದ್ದಾರೆಂದು ಹೇಳಿಕೊಳ್ಳುವುದೇ ಹೆಮ್ಮೆ ಹೆತ್ತವರಿಗೆ. ಫೀಸು ಹೆಚ್ಚಿದ್ದರೂ ಎಲ್ಲಾ ವರ್ಗಗಳ ಮಂದಿ ಕಷ್ಟ ಪಟ್ಟಾದರೂ ತಮ್ಮ ಮಕ್ಕಳನ್ನು ಆ ಶಾಲೆಗೆ ಸೇರಿಸುತ್ತಿದ್ದರು. ನಾನೂ ಆ ಶಾಲೆಯಲ್ಲಿ ಓದಿದವನು. ಊರಲ್ಲಿದ್ದ ಏಕೈಕ ಇಂಗ್ಲೀಷ್ ಶಾಲೆ ಅದಾಗಿದ್ದರಿಂದ ಇಂಟರ್‌ನ್ಯಾಷನಲ್ ಶಾಲೆಯ ಗತ್ತಿತ್ತು ಆ ಶಾಲೆಗೆ. ಶಾಲೆಯ ಆವರಣದೊಳಗೆ ಕನ್ನಡದಲ್ಲಿ ಮಾತಾಡುವ ಹಾಗಿರಲಿಲ್ಲ. ಓನ್ಲಿ ಇಂಗ್ಲೀಷ್. ಹಾಗಿದ್ದೂ ನಾವು ವಿದ್ಯಾರ್ಥಿಗಳು ಕದ್ದುಮುಚ್ಚಿ ಕನ್ನಡದಲ್ಲಿ ಮಾತಾಡುತ್ತಿದ್ದೆವು ಎನ್ನಿ.
ಆಮೇಲೆ ಶಾಲೆಯವರು ಒಂದು ಉಪಾಯ ಮಾಡಿದರು. ಪ್ರತಿ ಕ್ಲಾಸಿನಿಂದ ಒಬ್ಬರಂತೆ ಲೀಡರ್‌ನನ್ನು ನೇಮಿಸಿದರು. ಅವರ ಕೆಲಸ ಯಾರಾದರೂ ಕನ್ನಡದಲ್ಲಿ ಮಾತಾಡುತ್ತಿರೋದು ಕಂಡರೆ ಯಾರಿಗೂ ತಿಳಿಯದಂತೆ ಹೆಸರು ಬರೆದಿಟ್ಟುಕೊಳ್ಳೋದು. ಆಮೇಲೆ ದಿನದ ಕೊನೆಯಲ್ಲಿ ಮುಖ್ಯೋಪಾಧ್ಯಾಯಿನಿಗೆ ಆ ಹೆಸರುಗಳನ್ನು ತಲುಪಿಸುವುದು. ನಾವೆಲ್ಲರೂ ಎಷ್ಟೇ ಚೆನ್ನಾಗಿ, ನಿರರ್ಗಳ ಇಂಗ್ಲೀಷಿನಲ್ಲಿ ಮಾತನಾಡಿದರೂ ಮಧ್ಯ ಮಧ್ಯದಲ್ಲಿ ತಾಯ್ನುಡಿ ಕನ್ನಡ ನುಸುಳಿಬಿಡುತ್ತಿತ್ತು. ಗೊತ್ತೇ ಆಗುತ್ತಿರಲಿಲ್ಲ. ಕನ್ನಡ ನಾಲಗೆ ಮೇಲೆ ಬಂದ ನಂತರವೇ ಅಯ್ಯೋ ಎಂದು ನಾಲಗೆ ಕಚ್ಚುತ್ತಿದ್ದೆವು.
ಆ ಲೀಡರುಗಳು ಎಷ್ಟು ನಿಷ್ಕರುಣಿಗಳಾಗಿರುತ್ತಿದ್ದರೆಂದರೆ ಕನ್ನಡ ಪದ ಕೇಳಿ ಬಂದರೂ ವಿನಾಯಿತಿ ನೀಡುತ್ತಿರಲಿಲ್ಲ. ದಿನವೂ ಅವರ ಪಟ್ಟಿಯಲ್ಲಿ ನಮ್ಮ ಹೆಸರಿದೆಯಾ ಎಂದು ಊಹಿಸುವುದೊಂದು ಕೆಲಸವಾಯ್ತು. ಇಲ್ಲದಿದ್ದರೆ ಉಸ್ಸಪ್ಪಾ ಎಂದು ಉಸಿರು ಬಿಡುತ್ತಿದ್ದೆವು. ಇವೆಲ್ಲದರ ಪರಿಣಾಮ ಏನಾಯ್ತು ಅಂದರೆ… ಅತ್ತ ಪೂರ್ತಿ ಇಂಗ್ಲೀಷೂ ಅಲ್ಲದ, ಇತ್ತ ಪೂರ್ತಿ ಕನ್ನಡವೂ ಅಲ್ಲದ “ಬಟ್ಲರ್ ಇಂಗ್ಲೀಷ್’ ಹುಟ್ಟಿಕೊಂಡಿತು.
ಇದ್ಯಾವುದಪ್ಪಾ ಬಟ್ಲರ್ ಇಂಗ್ಲೀಷು ಅಂತ ಅಚ್ಚರಿ ಪಡಬೇಡಿ. ರೀತಿ, ನಿಯಮ, ವ್ಯಾಕರಣಗಳಿಂದ ಸ್ವತಂತ್ರವಾಗಿದ್ದ ಇಂಗ್ಲೀಷ್ ಅದು. ಬಟ್ಲರ್ ಇಂಗ್ಲೀಷಿಗೆ ಲಿಪಿ ಒಂದಿರಲಿಲ್ಲ. ಏಕೆಂದರೆ ಮಾತಾಡಿದಷ್ಟು ಸುಲಭವಾಗಿ ಬರೆಯಲು ಆಗುತ್ತಿರಲಿಲ್ಲ. ಅದು ಬಿಟ್ಟರೆ ಬಟ್ಲರ್ ಇಂಗ್ಲೀಷ್ ತುಂಬಾ ಸಿಂಪಲ್. “ವಾಟ್ ಮಾಡಿಂಗ್?’, “ಸಿಕ್ಕಿ ಬಿದ್ªಡ್’, “ಮಿಸ್ ಕಮ್‌ಡ್’, “ಟುಮಾರೋ ಹೋಗಿಂಗ್’, “ಸರ್ ಪೆಟ್ಟು ಕೊಟ್ಟಿಂಗ್’, ಇವೆಲ್ಲಾ ನಮ್ಮ ಬಟ್ಲರ್ ಇಂಗ್ಲೀಷ್ ಸ್ಯಾಂಪಲ್ಲುಗಳು. ಕನ್ನಡ ಇಂಗ್ಲೀಷ್ ಮಿಕ್ಸ್ ಮಾಡಿ ವಾಕ್ಯದ ಅಂತ್ಯದಲ್ಲಿ “ಇಂಗ್’ ಮತ್ತು “ಡ್’ ಬರುವ ಹಾಗೆ ನೋಡಿಕೊಂಡರೆ ಮುಗಿಯಿತು. ಯಾರು ಬೇಕಾದರೂ ಬಟ್ಲರ್ ಇಂಗ್ಲೀಷ್ ಪದವೀಧರರಾಗಬಹುದು!
ಹವನ, ಸುಳ್ಯ