Advertisement

ಅನಕ್ಷರತೆ-ಬಡತನ-ನಿರುದ್ಯೋಗ ತೊಲಗಿಸಿ

03:39 PM Jan 27, 2018 | |

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಿಧ್ವಂಸಕಾರಿ ಚಟುವಟಿಕೆಗಳು, ಭಯೋತ್ಪಾದಕ ಕೃತ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತೊಡೆದು ಹಾಕುವಲ್ಲಿ ನಾವೆಲ್ಲರೂ ಭೇದಭಾವ ಮರೆತು ಒಂದಾಗಿ ಹೋರಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 69ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶಕ್ಕೆ ಇಂದು ಒಗ್ಗಟ್ಟಿನ ಅಗತ್ಯವಿದೆ. ಒದಗಿಬರುವ ಹೊಸ ಹೊಸ ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಅನಕ್ಷರತೆ, ಅಜ್ಞಾನ, ಅನಾರೋಗ್ಯ, ಬಡತನ, ನಿರುದ್ಯೋಗವೆಂಬ ಶತ್ರುಗಳನ್ನು ಹೋಗಲಾಡಿಸಲು ನಾವೆಲ್ಲರೂ ಪಣ ತೊಡೋಣ ಎಂದು ಕರೆ ನೀಡಿದರು.

ಭಾರತವನ್ನು ಜಗತ್ತಿನ ಅತ್ಯಂತ ಪ್ರಬುದ್ಧ, ಪ್ರಗತಿಪರ, ಭದ್ರ, ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ನಾವೆಲ್ಲಾ ಒಂದಾಗಿ
ಪ್ರಯತ್ನಿಸೋಣ. ಪ್ರಜಾಪ್ರಭುತ್ವ ಪದ್ಧತಿ ಎನ್ನುವುದು ಸರ್ಕಾರದ ಒಂದು ವಿಧಾನ ಮಾತ್ರವಲ್ಲ, ಅದು ಜೀವನದ ಒಂದು ವಿಧಾನವೂ ಹೌದು ಹಾಗೂ ವ್ಯಕ್ತಿ ಸ್ವಾತಂತ್ರ ಮತ್ತು ಗೌರವಗಳಲ್ಲಿ ಇಟ್ಟ ನಂಬಿಕೆಯೂ ಆಗಿದೆ ಎಂದರು. 

ಪ್ರಪಂಚದಲ್ಲಿಯೇ ಅತ್ಯಂತ ಜೀವಂತವೆನಿಸಿದ, ಅತಿ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ನಮ್ಮದಾಗಿದೆ. ಈ ಪ್ರಜಾಪ್ರಭುತ್ವಕ್ಕೆ ಅನೇಕ ಸವಾಲುಗಳು ಎದುರಾದರೂ ಅಲುಗಾಡದೆ ಗಟ್ಟಿಯಾಗಿ ನಿಂತಿದೆ ಎಂದರು. ಗಣರಾಜ್ಯೋತ್ಸವ ಭಾರತದ ಒಂದು ರಾಷ್ಟ್ರೀಯ ಹಬ್ಬ. ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ಧತಿ ಅಳವಡಿಸಿಕೊಂಡ ಸಂಭ್ರಮದ ದಿನ ಇದಾಗಿದೆ. ಸ್ವತಂತ್ರ
ಭಾರತವು ಗಣರಾಜ್ಯವಾಗಿ 68 ವರ್ಷ ಪೂರ್ಣಗೊಂಡಿದ್ದು, 69 ನೇ ಗಣರಾಜ್ಯೋತ್ಸವವನ್ನು ನಾವು ಇಂದು ಆಚರಿಸುತ್ತಿದ್ದೇವೆ. ಈ ಶುಭ ಸದಾವಕಾಶ ನನಗೆ ಲಭಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದು ತಿಳಿಸಿದರು.

ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶ, ಅನೇಕ ಭಾಷೆ ಮಾತನಾಡುವ ಜನರನ್ನು ಹಾಗೂ ವಿವಿಧ ಸಾಂಸ್ಕೃತಿಕ
ಹಿನ್ನಲೆ ಹೊಂದಿದೆ. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ನಮ್ಮ ದೇಶದ ಜನಜೀವನದ ಆಶೋತ್ತರಗಳು ಹುದುಗಿವೆ. ಅವುಗಳನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ನಾವು ತೊಡಗಿದ್ದೇವೆ. ಭಾರತ ಸಂವಿಧಾನದ ಯಶಸ್ವಿ ಅನುಷ್ಠಾನದ ಫಲ ಜನತೆಗೆ ಸಿಗುತ್ತದೆ ಎಂದರು.

Advertisement

ಸ್ವಾತಂತ್ರ ಬಂದ ನಂತರ ನಮ್ಮ ದೇಶ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಕೃಷಿಯಲ್ಲಿ ಸ್ವಾವಲಂಬನೆ,
ಕೈಗಾರಿಕೆ ಉದ್ಯಮದಲ್ಲಿ ಸಫಲತೆ, ತಲಾ ಆದಾಯದಲ್ಲಿ ಏರಿಕೆ, ಶಿಕ್ಷಣ ಪ್ರಗತಿ, ಸಾರಿಗೆ, ಸಂಪರ್ಕ, ತಂತ್ರಜ್ಞಾನ ಮಾಹಿತಿ
ತಂತ್ರಜ್ಞಾನ ಹೀಗೆ ನಮ್ಮಲ್ಲಿ ಬಹುಮುಖ ಪ್ರಗತಿ ಸಾಧಿಸಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ತನ್ನ ಹಿರಿಮೆ
ಮೆರೆಯುತ್ತಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯ 70 ಸಾವಿರ ರೈತರ 350 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಜಿಲ್ಲೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ 1.32 ಲಕ್ಷ ಜನರಿಗೆ ಅನಿಲಭಾಗ್ಯ ಯೋಜನೆ ಮೂಲಕ ಗ್ಯಾಸ್‌ ಸಿಲಿಂಡರ್‌ ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಡಾ| ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎನ್‌.ವೈ.ಗೋಪಾಲಕೃಷ್ಣ, ಮೇಯರ್‌ ಜಿ.ವೆಂಕಟರಮಣ, ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌, ಜಿಪಂ ಸಿಇಒ ಡಾ|
ಕೆ.ವಿ.ರಾಜೇಂದ್ರ, ಐಜಿಪಿ ಶಿವಪ್ರಸಾದ್‌, ಎಸ್ಪಿ ಆರ್‌.ಚೇತನ್‌, ಪಾಲಿಕೆ ಆಯುಕ್ತೆ ದಿವ್ಯ ಪ್ರಭು, ಎಡಿಸಿ ಎಸ್‌.ಜೆ.ಸೋಮಶೇಖರ್‌,
ಎಸಿ ಬಿ.ಟಿ.ಕುಮಾರಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು, ನಾಗರಿಕರು, ಗಣ್ಯರು ಇದ್ದರು.

ನಮ್ಮ ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನಗಳು. ಇವು ರಾಷ್ಟ್ರದ ಅಸ್ತಿತ್ವ, ಸಾರ್ವಭೌಮತ್ವ ಸಾರುತ್ತಿವೆ. ಇವುಗಳಿಗೆ ಗೌರವ ತೋರುವುದು, ಗೌರವ ದೊರಕಿಸಿಕೊಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.  
ಸಂತೋಷ್‌ ಲಾಡ್‌, ಜಿಲ್ಲಾ ಉಸ್ತುವಾರಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next