ಕೊಟ್ಟೂರು: ಪಟ್ಟಣದ ಕೊಟ್ಟೂರು ಕೆರೆಯಲ್ಲಿ ಪ್ರತಿದಿನ ಹಗಲು ರಾತ್ರಿ ಎನ್ನದೇ ಅಕ್ರಮ ಮರಳು ಹಾಗೂ ಗ್ರಾವಲ್ (ಕೆಂಪು ಮಣ್ಣು)(ಮರಂ) ಸಾಗಣೆ ದಂಧೆ ನಡೆಯುತ್ತಿದೆ.
ಪಟ್ಟಣದ ಬಿಕ್ಕಿಮರಡಿ ದುರ್ಗಾಂಬ ದೇವಾಲಯದ ಹಿಂಭಾಗ ಹತ್ತರಿಂದ ಹದಿನೈದು ಟ್ರ್ಯಾಕ್ಟರ್‌ಗಳು ನಂಬರ್ ಪ್ಲೇಟ್ ಇಲ್ಲದೆ ರಾಜಾರೋಷವಾಗಿ ಪ್ರತಿದಿನ ಮರಳು ಸಾಗಿಸುತ್ತಿವೆ. ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಒಳಪಡುವುದು. ಇದುವರೆಗೂ ಯಾವ ಅಧಿಕಾರಿಯು ಇತ್ತ ಕಡೆ ಗಮನ ಹರಿಸಿಲ್ಲ. ನಂತರ ಇಲ್ಲಿನ ಅಧಿಕಾರಿಗಳು ಸಹ ಈ ಕಡೆ ಹೋಗಲು ಭಯಭೀತರಾಗುತ್ತಾರೆ. ಇಲ್ಲಿನ ರೈತರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ.
ಮರಳಿನಿಂದ ಕೆರೆ ರಸ್ತೆಗಳು ದೊಡ್ಡ ದೊಡ್ಡ ಕಂದಕಗಳಾಗಿ ಮಾರ್ಪಟ್ಟಿವೆ. ಕೆಲವು ದಿನಗಳ ಹಿಂದೆ ಅಧಿಕಾರಿಗಳಿಗೆ ಮರಳು ಮತ್ತು ಗ್ರಾವಲ್ ದಂಧೆ ಬಗ್ಗೆ ತಿಳಿದಾಗ ಸ್ಥಳಕ್ಕೆ ಬಂದು ಗ್ರಾವಲ್ ಮತ್ತು ಮರಳು ಅಗೆಯುವರಿಗೆ ಎಚ್ಚರಿಕೆ ನೀಡಿದ್ದರು. ಕೆಲ ದಿನಗಳ ನಂತರ ಮತ್ತೆ ಆರಂಭಗೊಂಡಿದೆ. ಚಿರಬಿ, ಚಪ್ಪರದಹಳ್ಳಿ, ಹ್ಯಾಳಾ, ಮರೂರು, ರಾಂಪುರ ಮಾರ್ಗದಲ್ಲಿನ ಹಳ್ಳ ಹೊಲಗಳಿಂದ ರಾತ್ರಿಯಿಂದ ಬೆಳಗಾಗುವ ತನಕ ಮರಳು ಕಳ್ಳಸಾಗಾಣಿಕೆ ಮಾಡುವ ಅನೇಕ ಮರಳು ಟ್ರ್ಯಾಕ್ಟರ್ ಗಳನ್ನು ಸೀಜ್ ಮಾಡಿದ್ದರು.ಈಗ ಮತ್ತೆ ಇದು ತಲೆ ಎತ್ತಿದೆ. ನಂಬರ್‌ಪ್ಲೇಟ್ ಇಲ್ಲದ ಟ್ರ್ಯಾಕ್ಟರ್‌ಗಳು ಹೆಚ್ಚಾಗಿ ಮರಳು ಸಾಗಾಣಿಕೆ ಮಾಡುತ್ತವೆ. ಆರ್ ಟಿಒ ಅಧಿಕಾರಿಗಳು ಕಣ್ಣಿಗೆ ಕಂಡರು ಕಾಣದಂತೆ ವರ್ತಿಸುತ್ತಾರೆ ಎಂದು ಜನ ಆರೋಪಿಸಿದ್ದಾರೆ.
ಪಟ್ಟಣದಿಂದ ಹೊಲಕ್ಕೆ ಮೂರು ಕಿಮೀ ಆಗುವುದು. ಶೇಂಗಾ ಮತ್ತು ಜೋಳದ ಫಸಲನ್ನು ಉಳಿಸಿಕೊಳ್ಳಲು ಒಂದು ಕಡೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ. ಇನ್ನೊಂದೆಡೆ ಟ್ರ್ಯಾಕ್ಟರ್‌ಗಳು ಕೆರೆ ರಸ್ತೆಯಲ್ಲಿ ಮರಂ, ಮರಳು ಸಾಗಿಸಿ ದಾರಿಯನ್ನು ಸಂಪೂರ್ಣ ಹದಗೆಡಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಫಸಲು ಸಾಗಿಸಲು ಸರಿಯಾದ ದಾರಿ ಮಾಡಿಕೊಡಿ.
-ನೊಂದ ರೈತರು
ಅಕ್ರಮ ಮರಳು ಮತ್ತು ಗ್ರಾವಲ್(ಮರಂ) ಅಗೆಯುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತೇನೆ. ನಂತರ ಕೆರೆಯ ಸುತ್ತಮುತ್ತಲಿನ ರೈತರು ಬೆಳೆ ಸಾಗಿಸಲು ರಸ್ತೆ ಸರಿಪಡಿಸುವಂತೆ ಸೂಚಿಸಿ, ಬೆಳೆ ನಷ್ಟ ಉಂಟಾಗದಂತೆ ಅನುಕೂಲ ಮಾಡಿಕೊಡುತ್ತೇನೆ.
ಜಿ.ಅನಿಲ್‌ಕುಮಾರ್, ತಹಶೀಲ್ದಾರ್, ಕೊಟ್ಟೂರು.
ರವಿಕುಮಾರ್.ಎಂ