Advertisement

ಪ್ರಿಯಕರ ಸೇರಿ 9 ಜನರಿಂದ ಪ್ರೇಯಸಿಯ ಪತಿ ಹತ್ಯೆ

09:47 AM May 04, 2022 | Team Udayavani |

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ಪತಿಯನ್ನು ಕೊಲೆಗೈದಿದ್ದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರು ಸೇರಿ 9 ಮಂದಿಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಚಂದ್ರಾಲೇಔಟ್‌ ನಿವಾಸಿಗಳಾದ ನದೀಂ ಅಹಮದ್‌ (23), ಶಬ್ಬೀರ್‌ ಹುಸೇನ್‌ (23), ಮೊಹಮ್ಮದ್‌ ಶಫೀ (23), ತಬ್ರೇಜ್‌ ಪಾಷಾ (23), ತನ್ವೀರ್‌ ಪಾಷಾ (21), ಹನನ್‌ ಪಾಷಾ (20), ಮೊಹಮ್ಮದ್‌ ಮುಬಾರಕ್‌ (21) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಲಾಗಿದೆ.

ಆರೋಪಿಗಳು ಮೇ 2ರಂದು ಜೋಹೆಬ್‌ ಅಬ್ರಾಹಂ ಎಂಬಾತನನ್ನು ಅಪಹರಿಸಿ, ಮುಖಕ್ಕೆ ಟೇಪ್‌ ಸುತ್ತಿ ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಕೊಲೆಯಾದ ಜೋಹೆಬ್‌ ಅಬ್ರಾಹಂ ಐದು ವರ್ಷಗಳ ಹಿಂದೆ ಶಬ್ರೀನ್‌ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಶಬ್ರೀನ್‌ ಹಾಗೂ ಆರೋಪಿಗಳ ಪೈಕಿ ನದೀಂ ಅಹಮದ್‌ ಕಾಲೇಜು ದಿನಗಳಿಂದ ಸ್ನೇಹಿತರಾಗಿದ್ದಾರೆ. ಆಗಾಗ್ಗೆ ಫೋನ್‌ನಲ್ಲಿ ಮತ್ತು ನೇರವಾಗಿ ಭೇಟಿಯಾಗಿ ಮಾತನಾಡುತ್ತಿದ್ದರು. ಅದನ್ನು ಗಮನಿಸಿದ ಅಬ್ರಾಹಂ, ನದೀಂಗೆ ಎರಡ್ಮೂರು ಬಾರಿ ಎಚ್ಚರಿಕೆ ನೀಡಿದ್ದರು. ಅದರಿಂದ ಆಕ್ರೋಶಗೊಂಡ ನದೀಂ ತನಗೆ ಅಡ್ಡಿಯಾಗಿರುವ ಅಬ್ರಾಹಂಗೆ ಬುದ್ಧಿ ಕಲಿಸಬೇಕೆಂದು ತನ್ನ ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಹೇಳಿಕೊಂಡಿದ್ದ ಎಂದು ಪೊಲೀಸರು ಹೇಳಿದರು.

ಅಪಹರಿಸಿ ಕೊಂದ ಹಂತಕರು!

Advertisement

ಏಪ್ರಿಲ್‌ 30ರಂದು ರಾತ್ರಿ 10 ಗಂಟೆ ಸುಮಾರಿಗೆ ಅಬ್ರಾಹಂ ಮನೆಯಿಂದ ಹೊರಗಡೆ ಬಂದಿದ್ದಾರೆ. ಅದೇ ವೇಳೆ ಆರೋಪಿಗಳು ಕಾರೊಂದರಲ್ಲಿ ಬಂದು ಅಬ್ರಾಹಂನನ್ನು ಅಪಹರಿಸಿದ್ದಾರೆ. ಬಳಿಕ ಮುಖಕ್ಕೆ ಟೇಪ್‌ ಸುತ್ತಿದ್ದು, ಆರ್‌.ಆರ್‌. ನಗರ, ಬಾಪೂಜಿನಗರ ಸೇರಿ ಎಲ್ಲೆಡೆ ಮುಂಜಾನೆ ನಾಲ್ಕು ಗಂಟೆವರೆಗೆ ಸುತ್ತಾಡಿದ್ದಾರೆ. ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಅಬ್ರಾಹಂ ಉಸಿರುಗಟ್ಟಿ ಮೃತ ಪಟ್ಟಿದ್ದಾರೆ.

ಅದನ್ನು ಗಮನಿಸಿದ ಆರೋಪಿಗಳು ಗಾಬರಿಗೊಂಡು ಟಾಟಾಏಸ್‌ ವಾಹನದಲ್ಲಿ ಮೃತದೇಹ ವನ್ನು ಹಾಕಿಕೊಂಡು ಗಂಗೊಂಡಹಳ್ಳಿ ಮುಖ್ಯರಸ್ತೆಯಲ್ಲಿ ಮಲಗಿಸಿ ಪರಾರಿಯಾಗಿದ್ದರು. ಮತ್ತೊಂದೆಡೆ ಪತಿ ನಾಪತ್ತೆ ಬಗ್ಗೆ ಪತ್ನಿ ಮೇ 1ರಂದು ಚಂದ್ರಾಲೇಔಟ್‌ ಠಾಣೆಯಲ್ಲಿ ದೂರು ನೀಡಿದ್ದರು.

ಮರುದಿನ ಮೇ 2ರಂದು ಮೃತನ ತಾಯಿ, ಪುತ್ರನ ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮತ್ತೊಂದು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಚಂದ್ರಾಲೇಔಟ್‌ ಠಾಣೆಯ ಇನ್‌ಸ್ಪೆಕ್ಟರ್‌ ಮನೋಜ್‌ ಮತ್ತು ತಂಡ ಸಿಸಿ ಕ್ಯಾಮೆರಾ ಹಾಗೂ ಇತರೆ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪತ್ನಿ ಮೇಲೆ ಅನುಮಾನ

ಅಬ್ರಾಹಂ ಪತ್ನಿ ಶಬ್ರೀನ್‌ ಮೇಲೆ ಅನುಮಾನಗಳಿದ್ದು, ಒಂದೆರಡು ದಿನಗಳಲ್ಲಿ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next