Advertisement

ಪಟ್ಟಣ ಪಂಚಾಯಿತಿ ಸದಸ್ಯರಿಂದಲೇ ಅಕ್ರಮ ಮದ್ಯ ಸಾಗಾಣಿಕೆ: ಮೂವರ ವಿರುದ್ಧ ಪ್ರಕರಣ ದಾಖಲು

05:56 PM Jul 28, 2020 | keerthan |

ಹನೂರು(ಚಾಮರಾಜನಗರ): ಅಕ್ರಮ ಮದ್ಯ ಸಾಗಾಣಿಕೆ ಪ್ರಕರಣದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸೇರಿದಂತೆ 3 ಜನರ ಮೇಲೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಏನಿದು ಪ್ರಕರಣ?: ಹನೂರು ಪಟ್ಟಣ ಪಂಚಾಯಿತಿಯ 10ನೇ ವಾರ್ಡಿನ ಸದಸ್ಯ ಸೋಮಣ್ಣ ಎಂಬುವವರಿಗೆ ಸೇರಿದ ಪಟ್ಟಣದ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್‌ನಿಂದ ಸೋಮವಾರ ತಡರಾತ್ರಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಲಾಗುತಿತ್ತು ಎನ್ನಲಾಗಿದೆ. ಚಾಮರಾಜನರ ಜಿಲ್ಲಾ ಡಿಸಿಐಬಿ ವಿಭಾಗದ ಪೊಲೀಸರು ಗಸ್ತಿನಲ್ಲಿದ್ದ ವೇಳೆ ಉದ್ದನೂರು – ಬೆಳತ್ತೂರು ರಸ್ತೆಯಲ್ಲಿ ಗಿರೀಶ್‌ರವರ ಜಮೀನಿನ ಸಮೀಪ ನೋಂದಣಿಯಿಲ್ಲದ ಟಿವಿಎಸ್ ಮೊಪೆಡ್ ಒಂದರಲ್ಲಿ ವ್ಯಕ್ತಿಯೋರ್ವ ಬಣ್ಣದ ಚೀಲಗಳಲ್ಲಿ ಏನನ್ನೋ ತುಂಬಿಕೊಂಡು ತೆರಳುತ್ತಿದ್ದನು ಎನ್ನಲಾಗಿದೆ.

ಈ ವೇಳೆ ಅನುಮಾನಗೊಂಡ ಡಿಸಿಐಬಿ ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ 90ಮಿ.ಲೀನ 864 ಪೌಚುಗಳನ್ನು 9 ಬಾಕ್ಸ್ ಗ ಳಲ್ಲಿ ಯಾವುದೇ ರಹದಾರಿ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದುದು ಕಂಡು ಬಂದಿದೆ. ಈ ವೇಳೆ ಟಿವಿಎಸ್ ಮೊಪೆಡ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್‌ನ ಮಾಲೀಕ ಸೋಮಣ್ಣ ಮತ್ತು ಕ್ಯಾಷಿಯರ್ ಪುಟ್ಟಸ್ವಾಮಿಯ ಸೂಚನೆಯ ಮೇರೆಗೆ ಚೆನ್ನಾಲಿಂಗನಹಳ್ಳಿ, ಚಿಕ್ಕಮಾಲಾಪುರ ಸೇರಿದಂತೆ ಇತರೆ ಗ್ರಾಮಗಳಿಗೆ ಹೆಚ್ಚನ ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ.

ಕೂಡಲೇ ಡಿಸಿಐಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸುಮಾರು 30,352 ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಿ ಹನೂರು ಪೊಲೀಸ್ ಠಾಣೆಗೆ ಕರೆತಂದು ಯಾವುದೇ ಪರವಾನಗಿ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಆರೋಪಿ ಮಾದಪ್ಪ, ಬಾರ್‌ನ ಮಾಲೀಕ ಸೋಮಣ್ಣ ಮತ್ತು ಕ್ಯಾಷಿಯರ್ ಪುಟ್ಟಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿ ನೀಡಿ ಆರೋಪಿ ಮಾದಪ್ಪ ಮತ್ತು ಮದ್ಯವನ್ನು ಹನೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ದಾಳಿಯಲ್ಲಿ ಡಿಸಿಐಬಿ ವಿಭಾಗದ ಇನ್ಸ್ಪೆಕ್ಟರ್ ಮಹದೇವಶೆಟ್ಟಿ, ಎಎಸ್‌ಐ ಜಯಶೇಖರ್, ಪೇದೆ ಕುಮಾರ ಮತ್ತು ಜೀಪ್‌ ಚಾಲಕ ಮಹೇಶ್ ಭಾಗವಹಿಸಿದ್ದರು.

Advertisement

ಸಾರ್ವಜನಿಕರಿಂದ ವ್ಯಾಪಕ ಟೀಕೆ: ಜನಪರ ಕೆಲಸ ಕಾರ‍್ಯಗಳನ್ನು ಕೈಗೊಂಡು ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಹನೂರು ಪಟ್ಟಣ ಸುತ್ತಮುತ್ತಲ ಗ್ರಾಮಗಳಿಗೆ ಅಕ್ರಮವಾಗಿ ಮದ್ಯಸಾಗಾಟ ಮಾಡುತ್ತಿದ್ದು ಸಾರ್ವಜನಿಕರನ್ನು ಮದ್ಯದ ದಾಸರನ್ನಾಗಿಸುತ್ತಿದ್ದಾರೆ. ಹನೂರು ಪಟ್ಟಣದ ಕೆಲ ಬಾರ್ ಮಾಲೀಕರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದವರೆಗೂ ಯಾವುದೇ ಕಾನೂನಿನ ಅಳುಕಿಲ್ಲದೆ ನಿರ್ಭಯವಾಗಿ ಅಕ್ರಮ ಮದ್ಯ ಸಾಗಾಟದಲ್ಲಿ ತೊಡಗಿದ್ದಾರೆ. ಈ ಪ್ರಕರಣದಲ್ಲಿ ಡಿಸಿಐಬಿ ಪೊಲೀಸರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಈ ದಂಧೆಗೆ ಕಡಿವಾಣ ಹಾಕುವಲ್ಲಿ ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next