Advertisement

ಸಂತ್ರಸ್ತರ ಭೂ ಮಂಜೂರಾತಿಯಲ್ಲಿ ಅಕ್ರಮ

09:27 PM Oct 16, 2019 | Lakshmi GovindaRaju |

ಹಾಸನ: ಹೇಮಾವತಿ ಜಲಾಶಯ ಯೋಜನೆಯ (ಎಚ್‌ಆರ್‌ಪಿ) ಮುಳುಗಡೆ ಸಂತ್ರಸ್ತರಿಗೆ ಮೀಸಲಿರಿಸಿದ್ದ ಭೂ ಮಂಜೂರಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ತಪ್ಪಿಸ್ಥತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಮತ್ತು ಯಗಚಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಗಾಗಿ ಕಾಯ್ದಿರಿಸಿದ್ದ ಭೂಮಿಯ ಮಂಜೂರಾತಿಗೆ 2017ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಸಂತ್ರಸ್ತರಿಂದ ಹಾಸನದ ವಿಶೇಷ ಭೂ ಸ್ವಾಧೀನಾಧಿಕಾರಿಯವರ ಕಚೇರಿಗೆ 2,860 ಅರ್ಜಿಗಳು ಸಲ್ಲಿಕೆಯಾಗಿದ್ದವು. ಭೂಮಿಯನ್ನೂ ಮಂಜೂರು ಮಾಡಲಾಗಿತ್ತು.

ನಕಲಿ ಸಹಿ ಮಾಡಿ ಭೂಮಿ ಮಂಜೂರು: ಬಹುತೇಕ ಅರ್ಜಿಗಳಲ್ಲಿ ಸತ್ಯಾಂಶವಿಲ್ಲ, ನಿಯಮ ಮೀರಿ ಏಕ ಪಕ್ಷೀಯವಾಗಿ ಅನರ್ಹರಿಗೂ ಭೂಮಿ ಮಂಜೂರಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಹಾಸನ ಉಪ ವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ತನಿಖಾ ಸಮಿತಿ ರಚನೆ ಮಾಡಿತ್ತು. ಸಮಿತಿಯು ಪರಿಶೀಲನೆ ನಡೆಸಿ ಭೂಮಿ ಮಂಜೂರಾದ 979 ಪ್ರಕರಣಗಳ ಪೈಕಿ 414 ಪ್ರಕರಣಗಳಲ್ಲಿ ಅಧಿಕಾರಿಗಳ ಸಹಿ ನಕಲು ಮಾಡಿ 1,654 ಎಕರೆ ಭೂಮಿ ಮಂಜೂರಾಗಿದೆ ಎಂದು ತಿಳಿಸಿದ್ದರು.

ಈ ಕುರಿತು ಸಂಬಂಧಪಟ್ಟರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿ ಭೂಮಿ ಮಂಜೂರಾತಿ ರದ್ದುಪಡಿಸಬೇಕು. ಅಗತ್ಯವಿದ್ದರೆ ನಿವೃತ್ತ ನ್ಯಾಯಧೀಶರ ಅಧ್ಯಕ್ಷತೆಯಲ್ಲಿ ಸಮಿತಿಯಿಂದ ಉನ್ನತ ಮಟ್ಟದ ಸಮಿತಿ ರಚನೆ ಮಾಡಬಹುದು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ಹೇಳಿದರು.

ಕಾರ್ಯದರ್ಶಿಗೆ ಪತ್ರ: ಸಮಿತಿಯ ವರದಿ ಆಧರಿಸಿ ಜಿಲ್ಲಾಧಿಕಾರಿಯವರು 414 ಪ್ರಕರಣಗಳಲ್ಲಿ ಭೂಮಿ ಮಂಜೂರಾತಿಯನ್ನು ರದ್ದುಪಡಿಸಬೇಕು. ಜಮೀನು ಮಂಜೂರು ಮಾಡಿಸಿಕೊಂಡಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ವಿಶೇಷ ಭೂ ಸ್ವಾಧೀನಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ. ಉನ್ನತ ಮಟ್ಟದ ತನಿಖೆ ಅಗತ್ಯವಿದ್ದರೆ ತನಿಖೆಗೆ ಕ್ರಮ ಕೈಗೊಳ್ಳಬಹುದು ಹಾಗೂ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಒತ್ತಾಯಿಸಿದು.

Advertisement

ಪೂರ್ವಾನುಮತಿಯೇ ಇಲ್ಲ: ಸರ್ಕಾರ ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಲು ಸಹಕರಿಸಿರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಚ್‌.ಎಲ್‌.ನಾಗರಾಜ್‌ ಅವರ ಅಧ್ಯಕ್ಷತೆಯ ಸಮಿತಿಯು ನಡೆಸಿದ ತನಿಖೆಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ವಿಜಯಾ, ರವಿಚಂದ್ರ ನಾಯಕ್‌, ಬಿ.ಎ.ಜಗದೀಶ್‌ ಅವರ ಅಧಿಕಾರವಧಿಯಲ್ಲಿ ಅಕ್ರಮ ಭೂ ಮಂಜೂರಾತಿ ನಡೆದಿವೆ ಎಂದು ಉಲ್ಲೇಖೀಸಿದೆ.

ರವಿಚಂದ್ರ ನಾಯಕ್‌ ಅವರು ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ 300 ಪ್ರಕರಣಗಳಲ್ಲಿ ಪೂರ್ವಾನುಮತಿ ಪಡೆಯದೆ ಅಧಿಕೃತ ಜ್ಞಾಪನೆ ಹೊರಡಿಸಿದ್ದಾರೆ. ಬಿ.ಎ.ಜಗದೀಶ್‌ ಅವರು ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ನಕಲಿ ಸಹಿ ಮಾಡಿ ಭೂ ಮಂಜೂರು ಮಾಡಿದ 50 ಪ್ರಕರಣಗಳು ಪತ್ತೆಯಾಗಿವೆ ಎಂದು ತನಿಖಾ ಸಮಿತಿ ವರದಿಯಲ್ಲಿ ಉಲ್ಲೇಖೀಸಿದೆ. ಹೀಗಾಗಿ, ವಿಶೇಷ ಭೂ ಸ್ವಾಧೀನಾಧಿಕಾರಿಗಳಾಗಿ ಕಾರ್ಯ ನಿರ್ವಹಸಿದ ಅಧಿಕಾರಿಗಳು ಹಾಗೂ ಅಕ್ರಮಕ್ಕೆ ಸಹಕರಿಸಿ ನೌಕರರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಪಂ ಮಾಜಿ ಅಧ್ಯಕ್ಷ ಬಿ.ಆರ್‌.ಸತ್ಯನಾರಾಯಣ ಉಪಸ್ಥಿತರಿದ್ದರು.

ಎಚ್‌.ಎಲ್‌.ನಾಗರಾಜ್‌ ದಿಢೀರ್‌ ವರ್ಗಾವಣೆ
ಹಾಸನ: ಪ್ರಾಮಾಣಿಕ ಅಧಿಕಾರಿಯೆಂದೇ ಗುರ್ತಿಸಿದ್ದ ಹಾಸನ ಉಪ ವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರಿಗೆ ಸ್ಥಳ ತೋರಿಸದೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಂಗಳವಾರ ಹೊರಡಿಸಿದೆ. ನಾಗರಾಜ್‌ ಅವರ ಸ್ಥಾನಕ್ಕೆ ಐಎಎಸ್‌ ಪ್ರೊಬೆಷನರಿ ಅಧಿಕಾರಿ ವೈ. ನವೀನ್‌ಭಟ್‌ ವರ್ಗವಾಗಿದ್ದು, ಬುಧವಾರ ನವೀನ್‌ ಭಟ್‌ ಕಾರ್ಯಭಾರ ವಹಿಸಿಕೊಂಡರು.

ಹೇಮಾವತಿ ಜಲಾಶಯ ಯೋಜನೆಯ (ಎಚ್‌ಆರ್‌ಪಿ) ಮುಳುಗಡೆ ಸಂತ್ರಸ್ತರಿಗೆ ಮೀಸಲಿರಿಸಿದ್ದ ಭೂ ಮಂಜೂರಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ರಚನೆಯಾಗಿದ್ದ ತನಿಖಾ ಸಮಿತಿಯ ಅಧ್ಯಕ್ಷರಾಗಿ ಅಕ್ರಮ ಬಯಲಿಗೆಳೆದಿದ್ದ ನಾಗರಾಜ್‌ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಬೇಕು. ಅಕ್ರಮ ಮಂಜೂರಾತಿಯನ್ನು ರದ್ದುಪಡಿಸಿಬೇಕು ಎಂದು ಶಿಫಾರಸು ಮಾಡಿದ್ದರು. ಹಾಗಾಗಿ ಅವರ ವರ್ಗಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

2016 ರ ಜೂನ್‌ 27 ರಂದು ಹಾಸನ ಉಪ ವಿಭಾಗಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡಿದ್ದ ಎಚ್‌.ಎಲ್‌.ನಾಗರಾಜ್‌ ಅವರು ಯಾವುದೇ ವಿವಾದಗಳಿಗೆ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸಿದ್ದರು. ಕಳೆದ ಮೂರು ತಿಂಗಳಿನಿಂದ ಪ್ರಭಾರಿ ಅಪರ ಜಿಲ್ಲಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವರ್ಷ ಹಾಸನಾಂಬಾ ಜಾತ್ರಾ ಮಹೋತ್ಸವ ಆರಂಭವಾಗುವ ಮುನ್ನಾ ದಿನ ನಾಗರಾಜ್‌ ಅವರ ವರ್ಗಾವಣೆಯಾಗಿದ್ದು, ಜಾತ್ರಾ ಮಹೋತ್ಸವದ ಮೇಲೂ ದುಷ್ಪರಿಣಾಮ ಬೀರುವ ಸಾದ್ಯತೆಯಿದೆ.

ಅಧಿಕಾರಿ ವರ್ಗಾವಣೆ ರದ್ದತಿಗೆ ರೇವಣ್ಣ ಒತ್ತಾಯ: ಎಚ್‌.ಎಲ್‌.ನಾಗರಾಜ್‌ ಅವರು ಪ್ರಾಮಾಣಿಕ ಅಧಿಕಾರಿ. ಯಾರ ಒತ್ತಡಕ್ಕೂ ಮಣಿಯದೆ ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದ ಅವರನ್ನು ದಿಢೀರನೆ ವರ್ಗಾವಣೆ ಮಾಡಿರುವುದ ಹಿಂದೆ ಹೇಮಾವತಿ ಯೋಜನೆ ಅಕ್ರಮ ಭೂ ಮಂಜೂರಾತಿಯ ಮಾಫಿಯಾದ ಕೈವಾಡವಿದೆ. ಜೊತೆಗೆ ಹಾಸನಾಂಬ ಜಾತ್ರಾ ಮಹೋತ್ಸವದ ಉತ್ತುವಾರಿಯನ್ನೂ ನೀಡಿಕೊಳ್ಳುತ್ತಿದ್ದ ನಾಗಾರಾಜ್‌ ಅವರ ವರ್ಗಾವಣೆ ಮಾಡುವ ಅಗತ್ಯವೇನಿತ್ತು? ಸರ್ಕಾರ ಅವರ ವರ್ಗಾವಣೆಯನ್ನು ರದ್ದುಪಡಿಸಬೇಕು. ನಾಗರಾಜ್‌ ಅವರಂತಹ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾವಾಗಿ ಕಾರ್ಯ ನಿರ್ವಹಿಸುವ ಅಧಿಕಾರಿಯ ಅಗತ್ಯವಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next