Advertisement

Mudhol: ಚೀಂಕಾರ ಅರಣ್ಯಕ್ಕೆ ಕಳ್ಳಬಟ್ಟಿ‌ ಕಳ್ಳರ ಕಾಟ… ಜೀವಸಂಕುಲಕ್ಕೆ ಅಪಾಯ‌

09:54 AM Aug 16, 2024 | Team Udayavani |

ಮುಧೋಳ: ನಾಡಿನ ಮುಕುಟ ಮಣಿಯಂತಿರುವ ಯಡಹಳ್ಳಿ‌ ಚೀಂಕಾರ ರಕ್ಷಿತಾರಣ್ಯದ ಮೇಲೆ ಕಳ್ಳಬಟ್ಟಿ‌ ಕಳ್ಳರ ಕಾಕದೃಷ್ಟಿ‌ ಬಿದ್ದಿದ್ದು ಅಮೂಲ್ಯ ಜೀವಸಂಕುಲಕ್ಕೆ ಅಪಾಯ‌ ತಂದೊಡ್ಡಿದೆ.

Advertisement

ಬಾಗಲಕೋಟೆ ಜಿಲ್ಲೆಯ ಬೀಳಗಿ‌ ಹಾಗೂ ಮುಧೋಳ ತಾಲೂಕಿನ ವ್ಯಾಪ್ತಿ‌ಯಲ್ಲಿ ಹರಡಿಕೊಂಡಿರುವ ಚೀಂಕಾರ ರಕ್ಷಿತಾರಣ್ಯದಲ್ಲಿ‌ ಕಳ್ಳಬಟ್ಟಿ ಸಾರಾಯಿ‌ ಮಾಡುವವರು ಮನಸೋ ಇಚ್ಛೆ ಕಟ್ಟಿಗೆ ಕಟಾವು‌ ಮಾಡಿ ಉರುವಲು ಮಾಡುತ್ತಿರುವುದರಿಂದ ಚೀಂಕಾರ ಹಾಗೂ ವಿವಿಧ ಪ್ರಾಣಿಸಂಕುಲ ವಾಸಕ್ಕೆ ಇನ್ನಿಲ್ಲದ ತೊಂದರೆಯುಂಟಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಕಳ್ಳಬಟ್ಟಿ ತಯಾರಿಸಲು ಅರಣ್ಯದಂಚಿನ ಕೆಲ ಗ್ರಾಮಸ್ಥರು ದಟ್ಟಾರಣ್ಯದ ಮಧ್ಯೆ ಕೆಲವೊಂದಿಷ್ಟು ಜಾಗ ನಿಗದಿ‌ ಮಾಡಿಕೊಂಡಿದ್ದಾರೆ. ಇಂತಹ ಜಾಗದಲ್ಲಿ‌ ಸಾರಾಯಿ‌ ತಯಾರಿಕೆಗೆ ಬೇಕಾದ ಪದಾರ್ಥಗಳನ್ನು ಸಂಗ್ರಹಿಸಿ ದಿನಂಪ್ರತಿ‌ ಅರಣ್ಯದೊಳಗೆ ಪ್ರವೇಶಿಸಿ ಕಳ್ಳಬಟ್ಟಿ ತಯಾರಿಸುವುದು ಅಕ್ರಮವಾಗಿ‌ ಸಾಗಣೆ ಮಾಡುವ ಕೆಲಸ‌ ಮಾಡುತ್ತಾರೆ. ಹೀಗೆ ಹೊತ್ತಲ್ಲದ ಹೊತ್ತಲ್ಲಿ ಅರಣ್ಯ ಪ್ರವೇಶ ಮಾಡುವುದರಿಂದ ನಾಜೂಕು‌ ಗುಣ ಹೊಂದಿರುವ ಚೀಂಕಾರಗಳ ನೆಮ್ಮದಿಗೆ ಭಂಗವುಂಟಾಗುತ್ತಿದೆ.

ವಿಶಾಲ ಭೂ ಪ್ರದೇಶ: ಮುಧೋಳ ಹಾಗೂ ಬೀಳಗಿ ಪ್ರದೇಶದಲ್ಲಿ ಹರಡಿಕೊಂಡಿರುವ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯವು ಸರಿಸುಮಾರು 9000 ಚದರ ಕಿ.ಮೀಗೂ ಹೆಚ್ಚಿನ ವಿಸ್ತಾರ ಹೊಂದಿದೆ. ಬೀಳಗಿ, ನಾಗರಾಳ, ಸಿದ್ದಾಪುರ, ನಾಗರಾಳ ತಾಂಡಾ, ತೆಗ್ಗಿ‌, ಬಿಸನಾಳ, ಅಮ್ಮಲಝರಿ ಹಾಗೂ ಮುಧೋಳದ ಹಲಗಲಿ‌ ಮೆಳ್ಳಿಗೇರಿ ಗ್ರಾಮಗಳು ರಕ್ಷತಾರಣ್ಯಕ್ಕೆ ಹೊಂದಿಕೊಂಡಿವೆ. ವಿಶಾಲವಾದ ಅರಣ್ಯ ಪ್ರದೇಶ ಹೊಂದಿರುವ ಚೀಂಕಾರ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ತಯಾರಿಸುವ ಕಳ್ಳಬಟ್ಟಿ ಸಾರಾಯಿ ಕೇಂದ್ರಗಳನ್ನು ಪತ್ತೆಹಚ್ಚುವುದು ಅಧಿಕಾರಿಗಳಿಗೆ ಕಷ್ಟಸಾಧ್ಯವಲ್ಲದಿದ್ದರೂ ಇಚ್ಛಾಶಕ್ತಿಯ ಕೊರೆತೆಯಿಂದ ಹಲವಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ‌ ಕಳ್ಳಬಟ್ಟಿ ತಾಯಾರಿಕೆ ಎಗ್ಗಿಲ್ಲದೆ ಸಾಗಿದೆ. ಪ್ರಮುಖವಾಗಿ ಬೀಳಗಿ ತಾಲೂಕಿನ ನಾಗರಾಳ ತಾಂಡಾ, ತೆಗ್ಗಿ ತಾಂಡಾ, ತೆಗ್ಗಿ, ಬಿಸನಾಳ ಹಾಗೂ ಮುಧೋಳ ತಾಲೂಕಿನ ಹಲಗಲಿ ಗ್ರಾಮಗಳಲ್ಲಿ‌ ಇನ್ನೂ ಕಳ್ಳಬಟ್ಟಿ ಮಾರಾಟ‌ ಜಾಲ ಹರಡಿಕೊಂಡಿದ್ದು, ಇದರಿಂದಾಗಿ ಅರಣ್ಯ ಸಂಪತ್ತು ವಿನಾಶದಂಚಿಗೆ ತಲುಪುತ್ತಿದೆ.

ಕಳ್ಳಬಟ್ಟಿಗೆ ಅಪಾರ‌ ಉರುವಲು ಕಟ್ಟಿಗೆ: ಇನ್ನು ಕಳ್ಳಬಟ್ಟಿ ತಯಾರಿಕೆಗೆ ವಾರಾನುಗಟ್ಟಲೆ‌ ಅವಧಿ ಬೇಕು ಪ್ರತಿನಿತ್ಯ ಕಳ್ಳಬಟ್ಟಿಗೆ ಬೇಕಾದ ವಸ್ತುಗಳನ್ನು ಉರುವಲಿಂದ ಕಾಯಿಸುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ ಅಪಾರ‌ ಪ್ರಮಾಣದ ಕಟ್ಟಿಗೆಯನ್ನು ಕಟಾವು ಮಾಡಲಾಗುತ್ತಿದೆ. ಇದರಿಂದ ಅರಣ್ಯ ಪ್ರದೇಶದಲ್ಲಿ‌ ಮರಗಿಡಗಳ ಸಂಖ್ಯೆ ಕ್ಷೀಣಿಸುತ್ತಿದೆ. ದಟ್ಟ ಕಾನನದ‌ ಮಧ್ಯೆ ಸಾರಾಯಿ ತಯಾರಿಸುತ್ತಿವುದರಿಂದ ಪ್ರತಿನಿತ್ಯ ಅರಣ್ಯದಲ್ಲಿ‌ ಮಾನವನ ಸಂಚಾರವಿರುತ್ತದೆ. ಇದರಿಂದ ಪ್ರಾಣಿಗಳ ಓಡಾಟಕ್ಕೂ ಹೆಚ್ಚಿನ ತೊಂದರೆಯುಂಟಾಗುತ್ತಿದೆ.

Advertisement

ಘರ್ಷಣೆಗೆ ಕಾರಣ : ಕೆಲವೊಂದು ಸಾರಿ ಕೆಳಹಂತದ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ‌ ಕಾವಲು ನಿಂತು ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡಿದರೆ ಕೇವಲ‌ ಒಣ ಕಟ್ಟಿಗೆಗಾಗಿ ತೆರಳುವ ಅಮಾಯಕ ಗ್ರಾಮಸ್ಥರು ಸಾರಾಯಿ‌ ಮಾರಾಟಗಾರರು ರಾತ್ರೋ‌ ರಾತ್ರಿ ತೆರಳಿ ಮನಸೋ ಇಚ್ಛೆ ಕಟ್ಟಿಗೆ ಕಟಾವು ಮಾಡುತ್ತಾರೆ ನಾವು ಕೇವಲ‌ ಹೊಟ್ಟೆಪಾಡಿಗಾಗಿ‌ ಒಣಕಟ್ಟಿಗೆ ತರಲು ತೆರಳುತ್ತಿದ್ದರೆ ನಮ್ಮನ್ನು ಬಿಡುವುದಿಲ್ಲ ಎಂಬ ವಾದವನ್ನು‌ ಮುಂದಿಡುತ್ತಾರೆ. ಇದರಿಂದ ಎಷ್ಟೋ ಬಾರಿ ಅರಣ್ಯ ಇಲಾಖೆ‌ ಸಿಬ್ಬಂದಿ ಹಾಗೂ ಅರಣ್ಯದಂಚಿನ ಗ್ರಾಮಸ್ಥರ ಮಧ್ಯ ವಾಗ್ವಾದವಾಗಿರುವ ಉದಾಹರಣೆಗಳೂ ಉಂಟು.

ಕಣ್ತೆರೆಯಬೇಕಿದೆ ಅಧಿಕಾರಿಗಳು : ಅಧಿಕಾರಿಗಳು‌ ಮನಸು ಮಾಡಿದರೆ ಅರಣ್ಯದೊಳಗಿನ ಕಳ್ಳಬಟ್ಟಿ‌ ಸಾರಾಯಿ‌ ತಯಾರಿಕೆ‌ ಜಾಲವನ್ನು ಭೇದಿಸುವುದು ದೊಡ್ಡ ಕೆಲಸವಲ್ಲ. ಪೊಲೀಸ್, ಅಬಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಹಲವಾರು ದಶಕಗಳಿಂದ ಈ ಭಾಗದಲ್ಲಿ ಕಳ್ಳಬಟ್ಟಿ ಸಾರಾಯಿ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಇನ್ನಾದರೂ ಅಧಿಕಾರಿಗಳು‌ ಕಣ್ತೆರೆದು ಕಳ್ಳಬಟ್ಟಿ ಸಾರಾಯಿ ತಯಾರಿಕೆ ತಡೆಗೆ ಮುಂದಾಗಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.

ರಾಶಿಗಟ್ಟಲೆ ಕೊಡಗಳು : ಕಳ್ಳಬಟ್ಟಿ ಸಾರಾಯಿ ತಯಾರಿಕೆ ಸುದ್ದಿ ಬೆನ್ನತ್ತಿದ ಉದಯವಾಣಿಗೆ ಅರಣ್ಯದ ಮಧ್ಯೆದಲ್ಲಿ ರಾಶಿಗಟ್ಟಲೆ ಕೊಡಗಳು ಕಂಡುಬಂದಿವೆ. ಕಳ್ಳಬಟ್ಟಿ‌ ಸಾರಾಯಿ‌ ತಯಾರಿಕೆ‌ ಜಾಗಗಳನ್ನು ಗುರುತು ಸಿಗದ ಹಾಗೆ ಮುಳ್ಳುಕಂಟಿಗಳಿಂದ ಮುಚ್ಚಿದ್ದು, ಅದರೊಳಗೆ ಖಾಲಿ‌ ಕೊಡಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಮತ್ತೊಂದೆಡೆ ಅಪಾರ ಪ್ರಮಾಣದಲ್ಲಿ‌ ಕಟ್ಟಿಗೆ ಉರುವಲು‌ ಮಾಡಿದ್ದು ಅದರ ಬೂದಿ ಹಾಗೇ ಬಿದ್ದಿದೆ. ಇದೇರೀತಿ ಅರಣ್ಯ ಪ್ರದೇಶದ ಹಲವಾರು ಕಡೆಗಳಲ್ಲಿ‌ ಮಾಡಿರುವುದರಿಂದ ಸೂಕ್ಷ್ಮಾತಿಸೂಕ್ಷ್ಮ‌ ಪ್ರಾಣಿಗಳ ಸಂಕುಲಕ್ಕೆ‌ ಅಪಾಯ ಬಂದೊದಗಿದೆ. ಅಧಿಕಾರಿಗಳು ಇಂತಹ ಕಳ್ಳಬಟ್ಟಿ ಸಾರಾಯಿ ತಯಾರಿಕೆ‌ ಜಾಗಗಳನ್ನು ಗುರುತಿಸಿ ಅವುಗಳನ್ನು ನಾಶಪಡಿಸುವುದರೊಂದಿಗೆ ಮಾನವನ ಆರೋಗ್ಯ ಹಾಗೂ‌ ಪರಿಸರಕ್ಕೆ‌ ಆಪತ್ತು ತಂದೊಡ್ಡುವ ಕಳ್ಳಬಟ್ಟಿಯನ್ನು‌ ಮಟ್ಟಹಾಕಬೇಕು‌ ಎಂಬುದು ನಾಗರೀಕರ ಒತ್ತಾಯವಾಗಿದೆ.

ಯಡಹಳದಳಿ ಚೀಂಕಾರ ರಕ್ಷಿರಾಎಣ್ಯದಲ್ಲಿ‌ ಕಳ್ಳಬಟ್ಟಿ ತಯಾರಿಕೆ‌ ನಗ್ಗೆ ನಮ್ಮ ಗಮನಕ್ಕೆ ಇಲ್ಲ. ಈ ಬಗ್ಗೆ ಕೂಡಲೇ ಕ್ರಮಕ್ಕೆ ನಮ್ಮ ಅಧಿಕಾರಿಗಳಿಗೆ ಸೂಚಿಸುತ್ತೇನೆ.
– ಸಿ.ಜೆ.ಮಿರ್ಜಿ ಡಿಎಫ್ಒ ಬಾಗಲಕೋಟೆ

– ಗೋವಿಂದಪ್ಪ ತಳವಾರ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next