ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಗೆ ನವೆಂಬರ್ 23ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಶನಿವಾರ(ನವೆಂಬರ್ 20, 2020) ಸಮನ್ಸ್ ಜಾರಿಗೊಳಿಸಿದೆ.
ನಾನು ನವೆಂಬರ್ 25ರಂದು ಸಿಬಿಐ ವಿಚಾರಣೆಗೆ ಹಾಜರಾಗುವುದಾಗಿ ಡಿಕೆ ಶಿವಕುಮಾರ್ ಈ ಸಂದರ್ಭದಲ್ಲಿ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಅಕ್ರಮ ಸಂಪತ್ತು ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಅಕ್ಟೋಬರ್ 5ರಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ಇ.ಡಿ ಹಾಗೂ ಆದಾಯ ತೆರಿಗೆ ಇಲಾಖೆ ಸಿಬಿಐಗೆ ಮನವಿ ಮಾಡಿಕೊಂಡಿತ್ತು. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪ ಡಿಕೆಶಿ ಅವರ ಮೇಲಿದೆ.
ಡಿಕೆ ಶಿವಕುಮಾರ್ ಮತ್ತು ಸಹೋದರ ಡಿಕೆ ಸಹೋದರ ಸುರೇಶ್ ಅವರ ನಿವಾಸದ ಮೇಲೂ ದಾಳಿ ನಡೆದಿತ್ತು. ಈಗಾಗಲೇ ಆದಾಯ ತೆರಿಗೆ ಇಲಾಖೆ ಮತ್ತು ಇ.ಡಿ ಎರಡೂ ತನಿಖಾ ಸಂಸ್ಥೆಗಳು ಡಿಕೆಶಿ ವಿಚಾರಣೆ ನಡೆಸಿತ್ತು. ಇದೀಗ ಸಿಬಿಐ ವಿಚಾರಣೆಯಿಂದ ಡಿಕೆಶಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.