ಜಮಖಂಡಿ: ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಚೇತನಾ ಪಾಟೀಲ ನಿರ್ದೇಶನದಂತೆ ತಾಲೂಕುಮಟ್ಟದ ಅಧಿಕಾರಿಗಳ ತಂಡ ರಚಿಸಿ ತನಿಖೆ ಮಾಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ (ಜಾರಿ ದಳ) ಬಸವರಾಜ ಮಾಳೇದ ಹೇಳಿದರು.
ನಗರದಲ್ಲಿ ಶುಕ್ರವಾರ ವಿವಿಧ ರಸಗೂಬ್ಬರ ಮಾರಾಟ ಕೇಂದ್ರ, ರೈತ ಸಂಪರ್ಕ ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಳಿಕ ಮಾತನಾಡಿದ ಅವರು, ರೈತ ಸಂಪರ್ಕ ಕೇಂದ್ರ, ಸಾವಳಗಿ, ತೇರದಾಳ ಸಹಿತ ಜಮಖಂಡಿ ಮತಕ್ಷೇತ್ರದ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳ ಮೇಲೆ ಅನಿರೀಕ್ಷಿತವಾಗಿ ದಾಳಿ ಸಂದರ್ಭದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ ಎಂದರು.
ಹಿರೇಪಡಸಲಗಿ ಗ್ರಾಮದ ಶಾಖೆ ರೈತ ಸಂಪರ್ಕ ಟಕ್ಕಳಕಿಯಲ್ಲಿ ಹತ್ತು ಎಕರೆ ಹೊಂದಿರುವ ರೈತನಿಗೆ 764 ಯೂರಿಯಾ ಚೀಲ ವಿತರಿಸಿದ್ದು, ಪರಿಶೀಲಿಸಿದಾಗ ಗೊಬ್ಬರ ರೈತನಿಗೆ ತಲುಪಿಲ್ಲ. ರೈತರಿಗೆ ತಲುಪಿದೆಯೋ ಅಥವಾ ಬೇರೆ ಉದ್ದೇಶಕ್ಕೆ ಮಾರಾಟ ಮಾಡಲಾಗಿದೆ ಎಂಬುದನ್ನು ತನಿಖೆ ಮಾಡಲಾಗಿದೆ. ಮುಂದಿನ ಆದೇಶ ಬರುವರೆಗೂ ಗೊಬ್ಬರ ಮಾರಾಟ ಪರವಾನಗಿ ರದ್ದು ಮಾಡುವ ಮೂಲಕ ಮಾರಾಟಗಾರರಿಗೆ ನೋಟಿಸ್ ನೀಡಲಾಗಿದೆ ಎಂದರು.
ನಗರದ ಪಡಸಾಲಿ ಟ್ರೇಡಿಂಗ್ ಕಂಪನಿ ತಾಲೂಕಿನ ಸಿದ್ದಾಪುರ ಹಾಗೂ ಜಮಖಂಡಿ ಶಹರದ ರೈತರಿಗೆ 952 ಹಾಗೂ 930 ಯೂರಿಯಾ ಚೀಲಗಳನ್ನು ವಿತರಣೆ ಮಾಡಿದೆ. ತನಿಖೆಯಲ್ಲಿ ಸಿದ್ದಾಪುರ ಗ್ರಾಮದ ರೈತರ ಜಮೀನಿನಲ್ಲಿರುವುದಿಲ್ಲ. ಆ ವ್ಯಕ್ತಿಯ ಜಮೀನು 25 ಎಕರೆ ಇದೆ. ಅಕ್ರಮ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಾರಾಟ ಪರವಾನಗಿ ಅಮಾನತ್ತಿನಲ್ಲಿಡಲಾಗಿದೆ. ಚಿಕ್ಕಪಡಸಲಗಿಯಲ್ಲಿ ರೈತನಿಗೆ 738 ಯೂರಿಯಾ, ಶೂರ್ಪಾಲಿ ರೈತನಿಗೆ 845 ಯೂರಿಯಾ ಚೀಲ ವಿತರಿಸಲಾಗಿದೆ. ಹಿರೇಪಡಸಲಗಿಯಲ್ಲಿ ರೈತನಿಗೆ 671 ಯೂರಿಯಾಚೀಲಗಳನ್ನು ಮಾರಾಟ ಮಾಡಿದ್ದು ಕಂಡು ಬಂದಿದೆ. ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಮುಂದಿನ ಆದೇಶದವರೆಗೆ ಮಾರಾಟಗಾರರ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.