ತುರುವೇಕೆರೆ: ತಾಲೂಕಿನ ಬಾಣಸಂದ್ರ ಸಮೀಪದಲ್ಲಿರುವ ಹಳ್ಳಿಕಾರ್ ತಳಿ ಸಂವರ್ಧನ ಕೇಂದ್ರಕ್ಕೆ ಸೇರಿದ ಜಮೀನಿನಲ್ಲಿ ಫಲವತ್ತಾದ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಾಣಸಂದ್ರ ಹಳ್ಳಿಕಾರ್ ತಳಿ ಸಂವರ್ಧನ ಕೇಂದ್ರದ ಕಾವಲ್ 926 ಎಕರೆ ವಿಸ್ತೀರ್ಣ ಹೊಂದಿದೆ. ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಹಳ್ಳಿಕಾರ್ ತಳಿ ಉಳಿಸಿ ಬೆಳೆಸುವುದೇ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಅಮೃತ್ ಸಿರಿ ಯೋಜನೆಯಲ್ಲಿ ಕೆಲವು ಉತ್ತಮ ಹಳ್ಳಿಕಾರ್ ರಾಸುಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ 260 ರಾಸುಗಳಿದ್ದು, ಮೇವಿಗಾಗಿ ಈ ಪ್ರದೇಶವನ್ನು ಮೀಸಲಿಡಲಾಗಿದೆ. ಸರ್ವೆ ನಂ.40ರ ದುಂಡ ಹೊರಮನೆ ಕಾವಲ್ ಹಾಗೂ 141 ರಸ್ತೆ ಆಚೆಯ ಕುಣಿಕೇನಹಳ್ಳಿ ಕಾವಲ್‌ನಲ್ಲಿ ಹಳ್ಳಿಕಾರ್ ರಾಸುಗಳ ಮೇವು ಬೆಳೆಯಲು ಮೀಸಲಿಟ್ಟಿರುವ ಭೂಮಿಯಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರಗಳನ್ನು ಬಳಸಿ ದೊಡ್ಡ ಕಂದಕ ಮಾಡಿ, ಬೇರೆ ಕಡೆಗೆ ಮಣ್ಣು ಸಾಗಾಟ ಮಾಡಲಾಗಿದೆ.
ಹಳ್ಳಿಕಾರ್ ಸಂವರ್ಧನ ಕೇಂದ್ರದ ಪ್ರದೇಶದಲ್ಲಿ ಗೋ ಕಟ್ಟೆ ಅಭಿವೃದ್ಧಿ ನೆಪದಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಬೇರೆಡೆಗೆ ಸಾಗಿಸಲಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ. ಆದರೆ, ಇದುವರೆಗೂ ಮಣ್ಣನ್ನು ಬೇರೆ ಕಡೆಗೆ ಸಾಗಾಟ ಮಾಡಿದ್ದಾರೆ ಎಂಬುದರ ಬಗ್ಗೆ ಲಿಖೀತವಾಗಿ ದೂರು ನೀಡಿಲ್ಲ. ದೂರು ನೀಡಿದರೆ ಸೂಕ್ತ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇನೆ.
●ವೈ.ಎಂ.ರೇಣುಕುಮಾರ್, ತಹಶೀಲ್ದಾರ್
ಈ ಹಿಂದಿನ ಸಹಾಯಕ ನಿರ್ದೇಶಕರು 2 ಗೋ ಕಟ್ಟೆ ಮಾಡಿದ್ದಾರೆ. ಅವರು ಇಲ್ಲಿನ ಮಣ್ಣನ್ನು ಕೇಂದ್ರದಲ್ಲಿನ ಅಭಿವೃದ್ಧಿಗೆ ಬಳಸಿದ್ದಾರೆ. ವರ್ಗಾವಣೆಯಾದ ನಂತರ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಹಳ್ಳಿಕಾರ್ ಸಂವರ್ಧನ ಕೇಂದ್ರಕ್ಕೆ ಪ್ರಭಾರ ಸಹಾಯಕ ನಿರ್ದೇಶಕರಾಗಿದ್ದಾರೆ. ಗೋ ಕಟ್ಟೆ ನಿರ್ಮಾಣದ ಹೆಸರಿನಲ್ಲಿ ಫಲವತ್ತಾದ ಮಣ್ಣನ್ನು ಅಭಿವೃದ್ಧಿಗೆ ಬಳಸದೆ ಹಣದ ಆಸೆಗೆ 1 ಸಾವಿರ ಲಾರಿ ಲೋಡ್ ಮಣ್ಣು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಪಶು ಸಚಿವರಿಗೂ, ಇಲಾಖಾ ಆಯುಕ್ತರಿಗೂ ಫೋಟೋ, ವಿಡಿಯೋ ಸಮೇತ ದಾಖಲೆಯೊಂದಿಗೆ ದೂರು ನೀಡಲಾಗಿದೆ. ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
● ಹರೀಶ್, ಸ್ಥಳೀಯ ರೈತ, ಹರಿದಾಸನಹಳ್ಳಿ
ಗ್ರಾಪಂನಿಂದ ನರೇಗಾ ಯೋಜನೆಯಲ್ಲಿ ಗೋಕಟ್ಟೆ ಮಾಡಲಾಗುತ್ತಿದೆ. ಗೋ ಕಟ್ಟೆ ನಿರ್ಮಾಣದ ಮಣ್ಣನ್ನು ಸ್ಥಳೀಯವಾಗಿ ಅಲ್ಲಿಯೇ ಬಳಸುವಂತೆ ಸೂಚಿಸಿದ್ದೇನೆ. ನಾನು ಮಣ್ಣು ಮಾರಾಟ ಮಾಡಿಲ್ಲ, ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಾಟ ಮಾಡಿರಬಹುದು ಎಂಬ ಅನುಮಾನ ಇದೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ●
ಸದಾಶಿವಮೂರ್ತಿ, ಪಶು ಇಲಾಖೆ ಸಹಾಯಕ ನಿರ್ದೇಶಕ, ಪ್ರಭಾರ ನಿರ್ದೇಶಕರು, ಹಳ್ಳಿಕಾರ್ ಸಂವರ್ಧನ ಕೇಂದ್ರ