ಚಿಂತಾಮಣಿ: ಟ್ಯಾಂಕರ್‌ಗಳಿಂದ ನೀರು ಸರಬರಾಜಿನಲ್ಲಿ ಅಕ್ರಮ ನಡೆದು ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವುಂಟಾಗಿ ದಿನೇ ದಿನೆ ಬೊಕ್ಕಸದಲ್ಲಿನ ಹಣ ಕರಗುವಂತಾಗಿದ್ದು, ಇನ್ನಾದರೂ ಟ್ಯಾಂಕರ್‌ಗಳ ಸರಬರಾಜಿಗೆ ಕಡಿವಾಣ ಹಾಕಿ ಅಗತ್ಯ ಮಾರ್ಗೊಪಾಯಗಳಿಗೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಜಿಪಂ ಸಿಇಒ ಫೌಜಿಯಾ ತರನ್ನುಮ್ ತಾಕೀತು ಮಾಡಿದ್ದಾರೆ.
ಕಾಗತಿ ಜಿಲ್ಲಾ ಕೃಷಿ ತರಭೇತಿ ಕೇಂದ್ರದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 75 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಖರೀದಿ ಮಾಡಲಾಗುತ್ತಿದೆ. 55 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೊರೆದಿರುವ 146 ಕೊಳವೆಬಾವಿಗಳಲ್ಲಿ ಶೇ.70 ರಷ್ಟು ವಿಫಲವಾಗಿವೆ ಎಂಬ ಮಾಹಿತಿ ತಾಪಂ ನೀಡಿರುವ ವರದಿಯಲ್ಲಿ ಇದೆ ಎಂದರು.
ಜಿಯಲಾಜಿಸ್ಟ್ ಕೊರತೆಯಿದೆ ಎನ್ನುತ್ತೀರಲ್ಲಾ, ಚಿಂತಾಮಣಿ ತಾಲೂಕಿಗೇನೇ ಓರ್ವ ಜಿಯಾಲಜಿಸ್ಟ್‌ನ್ನು ನೇಮಕ ಮಾಡುತ್ತೇನೆ, ನೀರು ಲಭ್ಯವಾಗುವ ಕಡೆ ಕೊಳವೆಬಾವಿ ಕೊರೆಸುವ ಮೂಲಕ ಖಾಸಗಿ ಕೊಳವೆಬಾವಿ/ಟ್ಯಾಂಕರ್‌ಗಳ ಹಾವಳಿಗೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಪಂ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯ ಮೇಲೆ ಈಗಾಗಲೇ ಲಿಖೀತ, ಮೊಬೈಲ್ ಮೂಲಕ ದೂರುಗಳು ಬಂದಿದ್ದು, ಈ ಇಲಾಖೆಯ ಹಿಂದಿನ ಅಧಿಕಾರಿ ಶಂಕರಾಚಾರಿ ಮಾಡಿರುವ ಅಕ್ರಮಗಳ ಬಗ್ಗೆ ಸರ್ಕಾರಿ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಈಗಿನ ಎಇಇ ವೆಂಕಟರವಣಪ್ಪ ಆದ ನೀವೂ ಶಂಕರಾಚಾರಿಯಂತೆ ಮನೆಯಲ್ಲಿ ಕುಳಿತುಕೊಳ್ಳಬೇಕೇ ಎಂದು ಪ್ರಶ್ನಿಸಿ, ನಿಮ್ಮ ಇಲಾಖೆಯಿಂದ ವ್ಯಯವಾಗುವ ಒಂದೊಂದು ರೂಪಾಯಿಗೂ ದಾಖಲೆ ನೀಡಬೇಕೆಂದರು.
ಜಿಪಂಗೆ ಮಾಹಿತಿ ಇಲ್ಲ: ನಿಮ್ಮ ಇಲಾಖೆಗೆ ಶಾಸಕರ ನಿಧಿ, ಟಾಸ್ಕ್ಫೋರ್ಸ್, ಜಿಪಂ, ಜಿಲ್ಲಾಧಿಕಾರಿ ಇತ್ಯಾದಿ ನಿಧಿಗಳಿಂದ ನೀರಾವರಿಗೆಂದೇ ಅನುದಾನ ಬರುತ್ತಿದ್ದು, ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕುಗಳನ್ನು ಕಂಡಾಗ ಚಿಂತಾಮಣಿ ತಾಲೂಕಿನ ಈ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಜಿಪಂಗೆ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸಿಬ್ಬಂದಿ ಭರ್ತಿ ಮಾಡಿ: ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ಮಾತನಾಡಿ, ನಗರ ಮತ್ತು ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ನೀರಿಗೆ ಹಾಹಾಕಾರ ಕಂಡು ಬರುತ್ತಿದೆ. ಡಿ ಗ್ರೂಪ್‌ನಿಂದ ವೈದ್ಯರವರೆಗಿನ ಸಿಬ್ಬಂದಿ ಕೊರತೆಯಿದ್ದು, ಸರಿಪಡಿಸಲು ಮನವಿ ಮಾಡಿದರು. ಅಪೌಷ್ಟಿಕ ಮಕ್ಕಳನ್ನು ಸಂರಕ್ಷಿಸುವ ಸಲುವಾಗಿಯೇ 2 ಹಾಸಿಗೆಗಳ ಘಟಕವನ್ನು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೆ.25 ರಂದು ಪ್ರಾರಂಭಿಸಲಾಗುವುದು ಎಂದರು.
ತಾಪಂ ಇಒ ಮಂಜುನಾಥ್, ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ನಾರಾಯಣಸ್ವಾಮಿ, ಜಿಪಂ ಸದಸ್ಯರುಗಳಾದ ಸ್ಕೂಲ್ ಸುಬ್ಟಾರೆಡ್ಡಿ, ಕಾಪಲ್ಲಿ ಶ್ರೀನಿವಾಸ್, ಸುನಂದಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.