ಬೆಂಗಳೂರು: ಕೃಷ್ಣ ರಾಜೇಂದ್ರ ಮಾರುಕಟ್ಟೆ ಪ್ರದೇಶದ (ಕೆ.ಆರ್. ಮಾರ್ಕೆಟ್) ಮಾರುಕಟ್ಟೆ ಸಂಕೀರ್ಣದಲ್ಲಿ ಅಕ್ರಮವಾಗಿ ಮಳಿಗೆಗಳನ್ನು ಕಟ್ಟಿದ ಹಾಗೂ ಅಗ್ನಿ ಅವಘಡಗಳು ತಡೆಯಲು ಸುರಕ್ಷಾ ಕ್ರಮಗಳನ್ನು ಕೈಗೊಳ್ಳದಿರುವ ಬಿಬಿಎಂಪಿ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ವಿವರಣೆ ನೀಡಲು ಪಾಲಿಕೆ ಆಯುಕ್ತರಿಗೆ ಬುಲಾವ್ ನೀಡಿದೆ.
ಈ ಕುರಿತು ಬೆಂಗಳೂರು ಹೂವು ವ್ಯಾಪಾರಿಗಳ ಸಂಘ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ವಿಚಾರವಾಗಿ ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಈ ಬಗ್ಗೆ ವಿವರಣೆ ನೀಡಲು ಬುಧವಾರ (ಮಾ.27) ಖುದ್ದು ಹಾಜರಾಗುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ತಾಕೀತು ಮಾಡಿದೆ.
ಮಾರುಕಟ್ಟೆ ಪ್ರದೇಶದಲ್ಲಿ ಮಳಿಗೆಗಳನ್ನು ನಿರ್ಮಿಸಲು ಮಂಜೂರಾತಿ ಯೋಜನೆ (ಸ್ಯಾಂಕ್ಷನ್ ಪ್ಲಾನ್) ಎಷ್ಟು, ಅಕ್ರಮವಾಗಿ ಕಟ್ಟಿದ ಮಳಿಗೆಗಳು ಎಷ್ಟು, ಅದಕ್ಕೆ ಅನುಮತಿ ಕೊಟ್ಟಿದ್ದು ಯಾರು, ಅವರ ವಿರುದ್ಧ ಕೈಗೊಂಡ ಕ್ರಮಗಳೇನು, ಅಕ್ರಮ ಮಳಿಗೆಗಳನ್ನು ನೆಲಸಮಗೊಳಿಸಲು ಕೈಗೊಂಡ ಕ್ರಮವೇನು, ಅಲ್ಲದೇ ಈ ಮಾರುಕಟ್ಟೆ ಪ್ರದೇಶದಲ್ಲಿ ಅಗ್ನಿ ಅನಾಹುತಗಳನ್ನು ತಡೆಯಲು ಅಗ್ನಿಶಾಮಕ ಇಲಾಖೆ ಸೂಚಿಸಿದ ಮಾರ್ಗಸೂಚಿಗಳನ್ನು ಇಲ್ಲಿವರೆಗೆ ಯಾಕೆ ಅಳವಡಿಸಿಕೊಂಡಿಲ್ಲ ಬಗ್ಗೆ ಖುದ್ದು ಹಾಜರಾಗಿ ವಿವರಣೆ ನೀಡಲು ಪಾಲಿಕೆ ಆಯುಕ್ತರಿಗೆ ನ್ಯಾಯಪೀಠ ನಿರ್ದೇಶನ ನೀಡಿತು.
ಅಲ್ಲದೇ ನಗರದ ರಸೆಲ್ ಮಾರ್ಕೆಟ್, ಮಡಿವಾಳ ಮಾರ್ಕೆಟ್ ಸೇರಿದಂತೆ ಬಿಬಿಎಂಪಿ ನಿರ್ವಹಿಸುತ್ತಿರುವ ಇತರೆ ಮಾರುಕಟ್ಟೆಗಳ ನಿರ್ವಹಣೆಯ ಬಗ್ಗೆಯೂ ವಿವರಣೆ ನೀಡುವಂತೆಯೂ ಇದೇ ವೇಳೆ ನ್ಯಾಯಪೀಠ ಸೂಚನೆ ನೀಡಿತು. ಅಲ್ಲದೇ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಎಲ್ಲ ಮಳಿಗೆಗಳನ್ನು ನೆಲಸಮಗೊಳಿಸಬೇಕು ಎಂದು ತಾಕೀತು ಮಾಡಿದೆ.
ಮಾರುಕಟ್ಟೆ ಸಂಪೂರ್ಣ ಮುಚ್ಚಬೇಕಾದೀತು?: ವಿಚಾರಣೆ ವೇಳೆ ಪಾಲಿಕೆ ನಿರ್ಲಕ್ಷ್ಯಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅಕ್ರಮ ಮಳಿಗೆಗಳನ್ನು ತೆರವುಗೊಳಿಸಿ, ಉಳಿದ ಮಳಿಗೆಗಳನ್ನು ಕ್ರಮಬದ್ಧಗೊಳಿಸಬೇಕು. ಈ ಪ್ರದೇಶ ದೇಶದ ಮಾದರಿ ಮಾರುಕಟ್ಟೆ ಪ್ರದೇಶ ಆಗಬೇಕು. ಅಗ್ನಿಶಾಮಕ ಇಲಾಖೆ ಸೂಚಿಸಿದ 19 ಅಂಶಗಳಲ್ಲಿ ಒಂದೂ ಬಿಡದಂತೆ ಕಾರ್ಯಾಗತಗೊಳಿಸಬೇಕು. ಅಲ್ಲಿ ವರೆಗೂ ಮಾರುಕಟ್ಟೆ ಸಂಪೂರ್ಣ ಮುಚ್ಚಬೇಕಾದೀತು? ವಹಿವಾಟು ಸ್ಥಗಿತಗೊಳಿಸಬೇಕಾದೀತು ಎಂದು ಮೌಖೀಕ ಎಚ್ಚರಿಕೆ ನೀಡಿತು.