ದುಮ್ಕಾ (ಜಾರ್ಖಂಡ್): ಜಾರ್ಖಂಡ್ ಮತ್ತು ಬಿಹಾರದಲ್ಲಿ ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಶನಿವಾರ ಹೇಳಿದ್ದಾರೆ.
ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜಾರ್ಖಂಡ್ ಮತ್ತು ಬಿಹಾರದಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಪ್ರಕೃತಿಗೆ ಅಪಾಯವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಹಲವು ನಿರ್ದೇಶನಗಳ ಹೊರತಾಗಿಯೂ ಎರಡು ರಾಜ್ಯಗಳಲ್ಲಿ (ಜಾರ್ಖಂಡ್ ಮತ್ತು ಬಿಹಾರ) ಅಕ್ರಮ ಗಣಿಗಾರಿಕೆ ವ್ಯಾಪಕವಾಗಿದೆ ಎಂದು ಚೌಬೆ ಹೇಳಿದರು.
‘ಎರಡು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೊಲೆಗಳು, ಅತ್ಯಾಚಾರಗಳು ಮತ್ತು ಇತರ ಅಪರಾಧಗಳ ಹಿಂದಿನ ಪ್ರಮುಖ ಕಾರಣಗಳಲ್ಲಿ ಅಕ್ರಮ ಗಣಿಗಾರಿಕೆಯೂ ಒಂದು. ಅಕ್ರಮ ಗಣಿಗಾರಿಕೆಯಿಂದ ನಿಸರ್ಗಕ್ಕೂ ದೊಡ್ಡ ಅಪಾಯವಿದೆ’ ಎಂದರು.
ದೆಹಲಿ ಮಾಲಿನ್ಯದ ಕುರಿತು ಮಾತನಾಡಿದ ಚೌಬೆ, ಪಂಜಾಬ್‌ನ ಎಎಪಿ ಸರ್ಕಾರ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರೀಯ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯಲು ಕಾರಣ ಎಂದು ಆರೋಪಿಸಿದರು.
ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಕೇಂದ್ರವು ಹಲವಾರು ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ನಗರಗಳಲ್ಲಿ 1,000 ‘ನಾಗರ ವನ’ (ನಗರ ಅರಣ್ಯ) ಅಭಿವೃದ್ಧಿಪಡಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.