Advertisement

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

02:20 AM Oct 23, 2021 | Team Udayavani |

ಶಿರ್ವ: ಶಿರ್ವ ಕಲ್ಲೊಟ್ಟು ತೆಂಕಬೆಟ್ಟು ಸೇತುವೆಯ ಸಮೀಪ ಕೇರಳ ಮೂಲದ ಕೋಶಿ ಎಂಬಾತನ ತೋಟದ ಬಳಿಯ ಜಾಗದಲ್ಲಿ ಪಾಪನಾಶಿನಿ ನದಿಯಿಂದ ದೋಣಿ ಹಾಗೂ ಹಿಟಾಚಿ ಯಂತ್ರ ಬಳಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌. ಪಾಟ್ಕರ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್‌ ಮತ್ತು ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Advertisement

ಅಕ್ರಮ ದಂಧೆಕೋರರು ಮರಳುಗಾರಿಕೆ ನಡೆಸುತ್ತಿದ್ದು ನಾಗರಿಕರಿಂದ ಗ್ರಾ.ಪಂ.ಗೆ ದೂರು ಬಂದಿತ್ತು. ಪರಿಶೀಲನೆ ವೇಳೆ ಸ್ಥಳದಲ್ಲಿ 2 ಹಿಟಾಚಿ, 1 ಲಾರಿ ಮತ್ತು 1 ದೋಣಿ ಇದ್ದು ನದಿಗೆ ಪೈಪ್‌ ಅಳವಡಿಸಿ ಯಂತ್ರದಿಂದ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ಜಾಗದ ಮಾಲಕ ಕೋಶಿ ಪರಾರಿಯಾಗಿದ್ದಾನೆ. ಈ ಬಗ್ಗೆ ಗ್ರಾ.ಪಂ.ನಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಅಧಿಕಾರಿಗಳಿಂದ ಉಡಾಫೆಯ ಉತ್ತರ
ಅಕ್ರಮ ಮರಳುಗಾರಿಕೆ ಬಗ್ಗೆ ಗಣಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲು ಕರೆ ಮಾಡಿದರೆ ಕರೆ ಸ್ವೀಕರಿ ಸುತ್ತಿಲ್ಲ. ಹಲವು ಬಾರಿ ಕರೆ ಮಾಡಿದ ಬಳಿಕ ಸ್ವೀಕರಿಸಿದ ಅಧಿಕಾರಿಯೋರ್ವರು ಸ್ಥಳೀಯ ಅಧಿಕಾರಿಗಳಿಗೆ ಮರಳುಗಾರಿಕೆಯ ಬಗ್ಗೆ ಮಾಹಿತಿ ಸಿಗದೇ ಇರುವಾಗ ಮಣಿಪಾಲದಲ್ಲಿರುವ ಗಣಿ ಇಲಾಖೆಯ ಅಧಿಕಾರಿಗಳಿಗೆ ಹೇಗೆ ಮಾಹಿತಿ ಸಿಗುತ್ತದೆ ಎಂಬ ಉಡಾಫೆಯ ಉತ್ತರ ನೀಡಿದ್ದರು. ಕಳೆದ ಜುಲೈನಲ್ಲಿ ಕಾಪು ತಹಶೀಲ್ದಾರ್‌ ಪ್ರತಿಭಾ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಶಿರ್ವ ಪೊಲೀಸರ ಸಮಕ್ಷಮ ಇದೇ ಪ್ರದೇಶದಲ್ಲಿ ದಾಳಿ ನಡೆಸಿ 3 ಲಾರಿ ಮತ್ತು ಒಂದು ಜೆಸಿಬಿಯನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ:ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಕುಂದಾಪುರ: 6 ಲಾರಿ ವಶ
ಕುಂದಾಪುರ: ಇಲ್ಲಿನ ಗಣಿ ಮತ್ತು ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ಎರಡು ಕಡೆ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ್ದು ಆರು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಬಂಟ್ವಾಡಿ ಸಮೀಪದ ಸೌಪರ್ಣಿಕಾ ನದಿ ತೀರದ ಮರಳು ಅಡ್ಡೆ ಮೇಲೆ ಗಣಿ ಮತ್ತು ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, 2 ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿದ್ದ ನಾಲ್ಕು ಲಾರಿಗಳು ಪರಾರಿಯಾಗಿವೆ. ವಶಕ್ಕೆ ಪಡೆದ ಎರಡು ಲಾರಿಗಳನ್ನು ಮುಂದಿನ ಕ್ರಮಕ್ಕೆ ಗಂಗೊಳ್ಳಿ ಠಾಣೆಗೆ ಒಪ್ಪಿಸಲಾಗಿದೆ.

ಇದೇ ವೇಳೆ ಅಂಪಾರು ಗ್ರಾಮದ ಗುಡಿಬೆಟ್ಟು ಎಂಬಲ್ಲಿ ರಾಮದಾಸ್‌ ಶೆಟ್ಟಿ ನಡೆಸುತ್ತಿದ್ದ ಅನಧಿಕೃತ ಮರಳು ಗಣಿಗಾರಿಕೆ ಸ್ಥಳಕ್ಕೆ ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ 4 ಮರಳು ಸಾಗಾಣಿಕೆ ಟಿಪ್ಪರ್‌ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಇದೇ ವೇಳೆ ಸ್ಥಳದಲ್ಲಿದ್ದ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಟ್ವಾಡಿ ಮರಳು ಧಕ್ಕೆ ಮೇಲೆ ಬೆಳಗ್ಗೆ ಗಣಿ ಇಲಾಖೆ ಬೈಂದೂರು ವಿಭಾಗದ ಅಧಿಕಾರಿ ಸಂಧ್ಯಾ ಕುಮಾರಿ ದಾಳಿ ನಡೆಸಿ ಜಿಪಿಎಸ್‌, ಟ್ರಿಪ್‌ ಶೀಟ್‌ ಇಲ್ಲದ ಎರಡು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next