Advertisement
ಹೇಳ್ಳೋರು ಕೇಳ್ಳೋರು ಇಲ್ಲ: ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ಅಕ್ರಮ ಮರಳು ದಂಧೆ ಜೋರಾಗಿದ್ದು ಅದರಲ್ಲೂ ಮಳೆಗಾಲ ಶುರುವಾದ ನಂತರ ಮರಳು ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಕೂಗಳತೆಯ ದೂರದಲ್ಲಿರುವ ಕಂದವಾರ ಕೆರೆಯಲ್ಲಿ ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದರೂ ಹೇಳ್ಳೋರು ಕೇಳ್ಳೋರು ಇಲ್ಲವಾಗಿದೆ.
Related Articles
Advertisement
ಈಗಾಗಲೇ ಕಂದವಾರ ಕೆರೆಯಲ್ಲಿ ಮರಳು ತೆಗೆಯಲು ಸಾಕಷ್ಟು ಗುಂಡಿಗಳನ್ನು ತೋಡಿರುವ ದಂಧೆಕೋರರು ವ್ಯಾಪಕ ಪ್ರಮಾಣದಲ್ಲಿ ಮರಳು ಸಾಗಾಟ ಮಾಡುತ್ತಿದ್ದಾರೆ. ಕಂದವಾರ ಕೆರೆಯ ಮಧ್ಯ ಭಾಗಕ್ಕೆ ಹೋಗಲು ಎತ್ತಿನಬಂಡಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ದೊಡ್ಡ ದಾರಿಯನ್ನೇ ಮಾಡಿಕೊಂಡಿದ್ದಾರೆ.
ಕಡಿವಾಣ ಹಾಕಬೇಕಿದೆ: ಒಟ್ಟಿನಲ್ಲಿ ಮೊದಲೇ ಒತ್ತುವರಿದಾರರಿಂದ ವರ್ಷದಿಂದ ವರ್ಷಕ್ಕೆ ತನ್ನ ಸ್ವರೂಪ ಕಳೆದುಕೊಳ್ಳುತ್ತಿರುವ ಕಂದವಾರ ಕೆರೆಯಲ್ಲಿ ಈಗ ಎಗ್ಗಿಲ್ಲದೇ ಮರಳು ದಂಧೆ ರಾಜಾರೋಷವಾಗಿ ಹಾಡಹಗಲೇ ಹಾಗೂ ರಾತ್ರೋರಾತ್ರಿ ನಡೆಯುತ್ತಿದ್ದರೂ ಯಾರು ಕೋಳ್ಳೋರು ಇಲ್ಲದಂತಾಗಿದೆ. ಜಿಲ್ಲಾಡಳಿತ ಇತ್ತಕಡೆ ಗಮನ ಹರಿಸಿ ಮರಳು ದಂಧೆಕೋರರಿಗೆ ಕಡಿವಾಣ ಹಾಕಬೇಕಿದೆ.
ಬೆಳಗ್ಗೆ ಎತ್ತಿನಬಂಡಿ.. ರಾತ್ರಿ ಟ್ರ್ಯಾಕ್ಟರ್‌ನಲ್ಲಿ ಸಾಗಾಟ: ಕಂದವಾರ ಕೆರೆಗೆ ಅಂಟಿಕೊಂಡಿರುವ ಚಿಕ್ಕಬಳ್ಳಾಪುರದ ಗಂಗನಮಿದ್ದೆ ಪ್ರದೇಶದ ನಿವಾಸಿಗಳು ಹೇಳುವ ಪ್ರಕಾರ ಹಗಲಲ್ಲಿ ಎತ್ತಿನಬಂಡಿಗಳ ಮೂಲಕ ಮರಳು ಸಾಗಾಟ ನಡೆಯುತ್ತದೆ. ರಾತ್ರಿ ವೇಳೆಯಲ್ಲೂ ಟ್ರ್ಯಾಕ್ಟರ್‌ಗಳಲ್ಲಿ ಸಾಗಾಟ ಮಾಡಲಾಗುತ್ತಿದೆ. ಈ ಬಗ್ಗೆ ಯಾರು ಕೇಳ್ಳೋರು ಇಲ್ಲ. ಈ ಬಗ್ಗೆ ಯಾರಿಗೆ ದೂರು ನೀಡಬೇಕೋ ನಮಗೆ ಗೊತ್ತಿಲ್ಲ ಎಂದು ಗಂಗನಮಿದ್ದೆಯ ನಿವಾಸಿ ರಮೇಶ್ ಉದಯವಾಣಿಗೆ ತಿಳಿಸಿದರು.
ಕೆರೆ ನಮ್ಮ ವ್ಯಾಪ್ತಿಗೆ ಬರಲ್ಲ ಎಂದ ಆಯುಕ್ತರು: ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿರುವ ಕಂದವಾರ ಕೆರೆಯಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆ ನಗರಸಭೆ ಆಯುಕ್ತ ಉಮಾಕಾಂತ್‌ರನ್ನು ಉದಯವಾಣಿ ಸಂಪರ್ಕಿಸಿದರೆ ಕಂದವಾರ ಕೆರೆ ವ್ಯಾಪ್ತಿ ನಮಗೆ ಬರಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರು ಸ್ವೀಕರಿಸಲೇ ಇಲ್ಲ.
* ಕಾಗತಿ ನಾಗರಾಜಪ್ಪ