ಮುಳಬಾಗಿಲು: ಜಿಲ್ಲಾಡಳಿತ ಹಲವು ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಷೇಧಿಸಲಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ದಂಧೆಕೋರರು ಮಾತ್ರ ಕೃಷಿ ಜಮೀನಿನಲ್ಲಿಯೇ ಅಕ್ರಮವಾಗಿ ಮರಳು ಫಿಲ್ಟರ್ ಮಾಡುವ ಮೂಲಕ ಮರಳು ದಂಧೆಯ ಅವ್ಯಾಹತವಾಗಿ ನಡೆಯುತ್ತಿದೆ.
ತಾಲೂಕಿನಲ್ಲಿ ಮಳೆಗಾಲದಲ್ಲಿ ಬೀಳುವ ಮಳೆ ಪ್ರಮಾಣ ಕಡಿಮೆಯಾಗಿ ನಿರಂತರ ಬರಗಾಲ ಉಂಟಾಗಿದೆಯಲ್ಲದೇ, ಕೆರೆಗಳಲ್ಲಿ ಶೇಖರಣೆ ಯಾದ ಅಲ್ಪ ಸ್ವಲ್ಪ ನೀರು ಭೂಮಿಯಲ್ಲಿ ಇಂಗ ಲು ಅಗತ್ಯವಾದ ಮರಳು ಇಲ್ಲದೇ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ. ಆದ್ದರಿಂದ, 10 ವರ್ಷದ ಹಿಂದೆಯೇ ಜಿಲ್ಲಾಡಳಿತ ಸುಮಾರು 500ಕ್ಕೂ ಅಧಿಕ ಕೆರೆ ಒಳಗೊಂಡಿರುವ ಮುಳ ಬಾಗಿಲು ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ನಿರ್ಧರಿಸಿ ಯಾವುದೇ ಕೆರೆ, ಕುಂಟೆ, ಕೃಷಿ ಭೂಮಿಗಳಿಂದ ಮರಳನ್ನು ತೆಗೆಯದಂತೆ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿತ್ತು.
ನಗರದಲ್ಲಿ ಮಾರಾಟ: ಆದರೆ, ಮುಳಬಾಗಿಲು ನಗರದ ಕಸಭಾ ಹೋಬಳಿ ನೂಗಲಬಂಡೆಯ ಅಂಚಿನಲ್ಲಿರುವ ಮುಳಬಾಗಿಲು ರೂರಲ್ ಸ.ನಂ.329ರ ಪೈಕಿ ಕೆರೆಯ ಸಮೀಪದಲ್ಲಿರುವ ಬೀಡು ಗದ್ದೆಯೊಂದರಲ್ಲಿ ಮುಳಬಾಗಿಲು ಅಮ್ಜದ್ ಎಂಬಾತ ಇರುವ ನೀರಿನ ಹೊಂಡಗಳಲ್ಲಿ ಕೆರೆಯ ಮಣ್ಣನ್ನು ತಂದು ನೀರಿನಲ್ಲಿ ತೊಳೆಯುವ ಮೂಲಕ ಮರಳನ್ನು ಶೋಧಿಸಿ ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಕೊಂಡು ನಗರದಲ್ಲಿ ಮಾರಾಟ ಮಾಡುವ ಮೂಲಕ ಅಕ್ರಮ ಮರಳು ಪಿಲ್ಟರ್ ದಂಧೆ ಜೋರಾಗಿಯೇ ನಡೆಯುತ್ತಿದೆ.
ಮರಳು ದಂಧೆಗೆ ಕಡಿವಾಣ ಹಾಕಿ: ತಾಲೂಕು ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ಅಂಚಿನಲ್ಲಿರುವ ಕೃಷಿ ಭೂಮಿಯಲ್ಲಿ ಅಕ್ರಮ ಮರಳು ಪಿಲ್ಟರ್ ದಂಧೆ ಜೋರಾಗಿ ನಡೆಯುತ್ತಿದ್ದು, ಕೂಡಲೇ ಮರಳು ದಂಧೆಗೆ ಕಡಿವಾಣ ಹಾಕಬೇಕೆಂದು ರೈತ ಸಂಘದ ಮುಖಂಡ ರಂಜೀತ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿರುವುದರಿಂದ ಮಳೆ ನೀರು ಭೂಮಿಗೆ ಇಂಗಲು ಮರಳು ಅಗತ್ಯವಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಿಸಲು ಮರಳು ಗಣಿಗಾರಿಕೆಯನ್ನು ಈಗಾಗಲೇ ಜಿಲ್ಲಾಡಳಿತ ನಿಷೇ ಧಿಸಿ ಆದೇಶಿಸಲಾಗಿದೆ. ಅದನ್ನು ಮೀರಿ ಯಾರೇ ಆಗಲಿ ಅಕ್ರಮ ಮರಳು ದಂಧೆ ನಡೆಸಿದರೆ ಮತ್ತು ದಂಧೆಗೆ ಯಾವುದೇ ಅಧಿಕಾರಿಗಳು ಕುಮ್ಮಕ್ಕು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಎಂ.ನಾರಾಯಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
-ಎಂ.ನಾಗರಾಜಯ್ಯ