ಬೆಂಗಳೂರು: ನಿಷೇಧಿತ ಇ-ಸಿಗರೆಟ್ ಬೆಂಗಳೂರಿನ ಎಲ್ಲೆಡೆ ಚಿಲ್ಲರೆ ಅಂಗಡಿ, ಆನ್‌ಲೈನ್‌ನಲ್ಲಿ ಸಲೀಸಾಗಿ ಸಿಗುತ್ತಿದ್ದು, ಬೆಂಗಳೂರು ಪೊಲೀಸರು ಇ-ಸಿಗರೆಟ್ ಮಾರಾಟಗಾರರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ.
ಇ-ಸಿಗರೆಟ್ ಚಟಕ್ಕೆ ಒಳಗಾಗುವವರ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಈ ಸಂಬಂಧ 2021ರಲ್ಲಿ ದಾಖಲಾಗಿದ್ದ 1 ಪ್ರಕರಣವು 2023ರಲ್ಲಿ 48ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತು ಕೊಂಡಿರುವ ಬೆಂಗಳೂರು ಪೊಲೀಸರು ಸರ್ಕಾರದ ಸೂಚನೆ ಮೇರೆಗೆ ಅಕ್ರಮವಾಗಿ ಇ-ಸಿಗರೆಟ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇ-ಸಿಗರೆಟ್ ಮಾರಾಟ ಕಂಡುಬಂದಲ್ಲಿ ತಕ್ಷಣ ದಾಳಿ ಮಾಡಿ ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯಾದ್ಯಂತ ಇ-ಸಿಗರೆಟ್ ಜಾಲ: ಇ-ಸಿಗರೆಟ್ ಆನ್‌ಲೈನ್ ಮಾರಾಟ ಜಾಲವು ದೊಡ್ಡದಿದ್ದು, ವಿವಿಧ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್ ಮೂಲಕ ಇ-ಸಿಗರೆಟ್ ಖರೀದಿ ಭರಾಟೆಯೂ ಜೋರಾಗಿದೆ. ಚಿಲ್ಲರೆ, ತಂಬಾಕು ಅಂಗಡಿಗಳು, ಗಿಫ್ಟ್ ಸೆಂಟರ್‌ಗಳಲ್ಲೂ ಅಕ್ರಮವಾಗಿ ಮಾರಾಟ ನಡೆಯುತ್ತಿದೆ. ಟೆಕ್ಕಿಗಳು, ಉನ್ನತ ಹುದ್ದೆಯಲ್ಲಿರುವವರು, ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಇ-ಸಿಗರೆಟ್ ಚಟಕ್ಕೆ ಬಿದ್ದಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
400ಕ್ಕೂ ಹೆಚ್ಚಿನ ಬಗೆಯ ಇ-ಸಿಗರೆಟ್‌ಗಳು ವಿವಿಧ ಬ್ರ್ಯಾಂಡ್‌ಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಎಂಜಿ ರಸ್ತೆ, ಬ್ರಿಗೆಡ್ ರಸ್ತೆ, ಚರ್ಚ್‌ಸ್ಟ್ರೀಟ್, ಕೋರಮಂಗಲ, ವೈಟ್ ಫೀಲ್ಡ್, ಕೊತ್ತನೂರು, ಹೆಣ್ಣೂರು, ಸರ್ಜಾಪುರ ರಸ್ತೆಯ ವಿವಿಧೆಡೆ ಇ-ಸಿಗರೆಟ್ ಮಾರಾಟ ಹೆಚ್ಚಿದೆ ಎಂಬ ಆರೋಪ ಕೇಳಿ ಬಂದಿದೆ.
ಇ-ಸಿಗರೆಟ್ ಸೇವನೆ ಏಕೆ ಅಪಾಯ?: ಇ-ಸಿಗರೆಟ್‌ನ ರಾಸಾಯನಿಕಗಳು ಕ್ಯಾನ್ಸರ್ ಕಾರಕ ಎಂಬುದು ದೃಢಪಟ್ಟಿದೆ. ಇದರ ಸೇವನೆಯಿಂದ ಶ್ವಾಸಕೋಶದ ತೊಂದರೆಗಳು, ಹೃದಯ ಸಂಬಂಧಿ ಖಾಯಿಲೆಗಳು, ನರ ದೌರ್ಬಲ್ಯ, ಉಸಿರಾಟದ ಸಮಸ್ಯೆ, ರೋಗ ನಿರೋಧಕ ಶಕ್ತಿ ಕುಂಟಿತ ಸೇರಿದಂತೆ ದೀರ್ಘಕಾಲದ ಕಾಯಿಲೆಗಳು ಉಂಟಾಗುತ್ತವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ವಿವಿಧ ರಾಸಾಯನಿಕ ಬಳಕೆ: ಇ-ಸಿಗರೆಟ್ ದ್ರವ್ಯದಲ್ಲಿ ತಂಬಾಕಿನಿಂದ ಉತ್ಪತ್ತಿಯಾಗುವ ನಿಕೋಟಿನ್ ಅಂಶ, ಪ್ರೊಪಿಲೀನ್, ಗ್ಲಿಸರೀನ್ ವಸ್ತುಗಳಿರುತ್ತವೆ. ಇದನ್ನು ಬಿಸಿ ಮಾಡುವಾಗ ಏರಸಾಲ್ ಉತ್ಪತ್ತಿಯಾಗುತ್ತದೆ. ಸಾಮಾನ್ಯ ಸಿಗರೆಟ್‌ಗಳಲ್ಲಿ ತಂಬಾಕು ಸುಡುವುದರಿಂದ ಹಾನಿಕಾರ ಅಂಶಗಳು ಕಡಿಮೆ ಇರುತ್ತವೆ. ಇ-ಸಿಗರೆಟ್‌ಗಳನ್ನು ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್ ಎಂದೂ ಕರೆಯುತ್ತಾರೆ.
ಖಾಕಿ ಬಲೆಗೆ ಬಿದ್ದಿದ್ದ ಇ-ಸಿಗರೆಟ್ ಮಾರಾಟಗಾರರು : ಕೊತ್ತನೂರು ಠಾಣಾ ವ್ಯಾಪ್ತಿ ಗಿಫ್ಟ್ ಸೆಂಟರ್‌ನಲ್ಲಿ ಇ-ಸಿಗರೆಟ್ ಮಾರಾಟ ಮಾಡಿದ್ದ ಕೇರಳ ಮೂಲದ ಐವರು ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಪ್ರಕರಣದ ಕಿಂಗ್‌ಪಿನ್ ಮುಜಾಮಿಲ್ ಎಂಬಾತ ವಿದೇಶದಲ್ಲಿರುವ ತನ್ನ ಸ್ನೇಹಿತರ ಮೂಲಕ ಅಕ್ರಮವಾಗಿ ಇ-ಸಿಗರೇಟ್ ಹಾಗೂ ವಿದೇಶಿ ಸಿಗರೆಟ್‌ಗಳನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದ. ಕೋರಮಂಗಲದಲ್ಲಿರುವ ತನ್ನ ಗೋದಾಮಿನಲ್ಲಿ ಅದನ್ನು ಸಂಗ್ರಹಿಸಿಟ್ಟಿದ್ದ. ಆತನ ಸೂಚನೆ ಮೇರೆಗೆ ಇತರೆ ನಾಲ್ವರು ಆರೋಪಿಗಳು ಕೊತ್ತನೂರಿನಲ್ಲಿ ಎರಡು ಗಿಫ್ಟ್ ಸೆಂಟರ್ ತೆರೆದು, ಇ-ಸಿಗರೆಟ್ ಗಳನ್ನು ಸಲೀಸಾಗಿ ಗ್ರಾಹಕರಿಗೆ ಸುಮಾರು 300-400 ರೂ.ಗೆ ಮಾರಾಟ ಮಾಡುತ್ತಿದ್ದರು. ಗೋದಾಮಿನಲ್ಲಿ 23.67 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೆಟ್‌ಗಳನ್ನು ಜಪ್ತಿ ಮಾಡಲಾಗಿತ್ತು.