ಬಂಟ್ವಾಳ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ 407 ಟೆಂಪೋವನ್ನು ನರಿಕೊಂಬು ಗ್ರಾಮದ ಮಾಣಿಮಜಲಿನಲ್ಲಿ ಅ. 2ರಂದು ಮಧ್ಯಾಹ್ನ ತಡೆದ ಸ್ಥಳೀಯರು ಬಳಿಕ ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು ಆಹಾರ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ವಶಕ್ಕೆ ಪಡೆದಿದ್ದಾರೆ.
ಶಂಭೂರು ಪಡಿತರ ಕೇಂದ್ರದಿಂದ ಗೂಡಿನಬಳಿ ಸಗಟು ವ್ಯಾಪಾರಿಯ ಅಂಗಡಿಗೆ ಸಾಗಿಸುತ್ತಿದ್ದ ಸಂದರ್ಭ ಘಟನೆ ಸಂಭವಿಸಿತ್ತು.
ವಾಹನದಲ್ಲಿದ್ದ 50 ಕೆ.ಜಿ. ತೂಕದ 14 ಗೋಣಿ ಅಕ್ಕಿಯ ಮೌಲ್ಯ 10,455 ರೂ. ಎಂದು ಲೆಕ್ಕಹಾಕಲಾಗಿದ್ದು, ವಾಹನದ ಮೌಲ್ಯ 2 ಲಕ್ಷ ರೂ. ಎನ್ನಲಾಗಿದ್ದು ಅವೆರಡನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ವಾಹನದ ಮಾಲಕ ಅಬ್ದುಲ್ ಹಕೀಂ ಗೂಡಿನಬಳಿ ಮತ್ತು ಚಾಲಕ ಹನೀಫ್ ಗೂಡಿನಬಳಿ ಅವರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಶಂಭೂರು ಪಡಿತರ ಕೇಂದ್ರದಿಂದ ಅಕ್ಕಿಯನ್ನು ಲೋಡ್ ಮಾಡಿ ತರಲಾಗಿತ್ತು. ಪಡಿತರ ಕೇಂದ್ರಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಪಡಿತರ ಕೇಂದ್ರ ನಿರ್ವಾಹಕರನ್ನು ಕರೆಸಿ ವಿಚಾರಿಸಿದ್ದು, ಗ್ರಾಮೀಣ ಪ್ರದೇಶದ ಜನರು ಅನೇಕ ಸಂದರ್ಭಗಳಲ್ಲಿ ಪಡಿತರ ಕೇಂದ್ರದಿಂದ ವಿತರಿಸುವ ಅಕ್ಕಿಯನ್ನು ನಿರ್ದಿಷ್ಟ ಹಣ ಪಡೆದು ಬಿಟ್ಟುಹೋಗುತ್ತಾರೆ. ಅದನ್ನು ಅನಂತರ ಸಗಟು ವ್ಯಾಪಾರಿಗಳು ವ್ಯತ್ಯಾಸ ಮೌಲ್ಯ ಪಾವತಿಸಿ ಕೊಂಡು ಹೋಗುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋದರ ಕರ್ಬೆಟ್ಟು, ಸದಸ್ಯ ಮಾದವ ಕರ್ಬೆಟ್ಟು , ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಪ್ರಮುಖರಾದ ಕೇಶವ ಪಲ್ಲತಿಲ, ಮೋಹನ ದರ್ಖಾಸು ಹಾಗೂ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.
ನಗರ ಠಾಣಾಧಿಕಾರಿ ರಕ್ಷಿತ್ ಮತ್ತು ಸಿಬಂದಿ, ಆಹಾರ ನಿರೀಕ್ಷಕ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ಕಂದಾಯ ಇಲಾಖೆ ಸಿಬಂದಿ ಸದಾಶಿವ ಕೈಕಂಬ, ಶೀತಲ್, ಶಿವಪ್ರಸಾದ್, ಸುಂದರ ಹಾಗೂ ಲಕ್ಷ್ಮಣ ಮಹಜರು ಸ್ಥಳದಲ್ಲಿ ಉಪಸ್ಥಿತರಿದ್ದರು.