Advertisement

ವಿರೂಪಾಪುರಗಡ್ಡಿ: ಅಕ್ರಮ ರೆಸಾರ್ಟ್ ಮತ್ತು ಹೋಟೆಲ್ ಗಳ ತೆರವು ಸಾಧ್ಯತೆ

09:56 AM Feb 12, 2020 | sudhir |

ಕೊಪ್ಪಳ: ತಾಲ್ಲೂಕಿನ ವಿರೂಪಾಪುರಗಡ್ಡಿಯಲ್ಲಿರುವ ರೆಸಾರ್ಟ್ ಮತ್ತು ಹೊಟೇಲುಗಳ ತೆರವು ಪ್ರಶ್ನಿಸಿ ರೆಸಾರ್ಟ್ ಮಾಲೀಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿ ಹಾಕಿದ್ದು ಅಕ್ರಮ ರೆಸಾರ್ಟ್ ಮತ್ತು ಹೊಟೆಲ್ ತೆರವಿಗೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.

Advertisement

ಹಂಪಿ ಸುತ್ತಲಿನ ಪ್ರದೇಶದಲ್ಲಿ ನಿರ್ಮಿಸಿರುವ ಅಕ್ರಮ ರೆಸಾರ್ಟ್ ಹೊಟೆಲ್ ಹಾಗು ವಾಣಿಜ್ಯ ಸಂಕೀರ್ಣಗಳನ್ನು ಕಳೆದ 10ವರ್ಷಗಳ ಹಿಂದೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ತೆರವುಗೊಳಿಸಲು ಎಲ್ಲಾ ರೆಸಾರ್ಟ್ ಮಾಲೀಕರಿಗೆ ನೋಟಿಸ್ ಕೊಟ್ಟಿತ್ತು. ಹಂಪಿ ಅಭಿವೃದ್ದಿ ಪ್ರಾಧಿಕಾರ ರಚನೆಗೂ ಮುಂಚೆ ವಿರೂಪಾಪುರಗಡ್ಡಿಯ ಕೆಲ ರೆಸಾರ್ಟ್ ಮಾಲೀಕರು ತಮ್ಮ ಭೂಮಿಯನ್ನು ಎನ್ ಎ ಮಾಡಿಸಿಕೊಂಡಿದ್ದರಿಂದ 1988ರ ರಾಜ್ಯ ಸರಕಾರದ ಸುತ್ತೊಲೆ ಅನ್ವಯ ಪ್ರಾಧಿಕಾರದ ನೋಟಿಸ್ ಪ್ರಶ್ನಿಸಿ ರೆಸಾರ್ಟ್ ಮಾಲೀಕರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಪುನಹ ರೆಸಾರ್ಟ್ ಮಾಲೀಕರು ಹಂಪಿ ಅಭಿವೃದ್ದಿ ಪ್ರಾಧಿಕಾರ ಮತ್ತು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕಳೆದ 4ವರೆ ವರ್ಷಗಳಿಂದ ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ಮಂಗಳವಾರ ಅಂತಿಮವಾಗಿ ರಂದು ರೆಸಾರ್ಟ್ ಮಾಲೀಕರು ಸಲ್ಲಿಸಿದ ಮೇಲ್ಮನವಿಯನ್ನು ತಳ್ಳಿ ಹಾಕಿದೆ. ಹಂಪಿಅಭಿವೃದ್ದಿ ಪ್ರಾಧಿಕಾರ ಪ್ರತಿ ಭಾರಿ ಆನೆಗೊಂದಿ ಸಾಣಾಪೂರ ಭಾಗದಲ್ಲಿ ಅಕ್ರಮ ಹೊಟೆಲ್ ತೆರವುಗೊಳಿಸಿದ ಸಂದರ್ಭದಲ್ಲಿ ಪ್ರಕರಣ ಕೋರ್ಟನಲ್ಲಿದ್ದ ಕಾರಣಕ್ಕಾಗಿ ವಿರೂಪಾಪುರಗಡ್ಡಿ ರೆಸಾರ್ಟ್ ಗಳನ್ನು ತೆರವುಗೊಳಿಸುತ್ತಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ರೆಸಾರ್ಟ್ ಮಾಲೀಕರ ಅರ್ಜಿ ತಳ್ಳಿ ಹಾಕಿದ್ದರಿಂದ ಶೀಘ್ರವಾಗಿ ಅಕ್ರಮ ರೆಸಾರ್ಟ್ ತೆರವು ಕಾರ್ಯ ಮಾಡುವ ಸಂಭವವಿದೆ.

ಶೀಘ್ರಸಭೆ: ವಿರೂಪಾಪುರಗಡ್ಡಿ ರೆಸಾರ್ಟ್ ಮಾಲೀಕರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಅಲ್ಲಿ ಅಕ್ರಮ ವಾಣಿಜ್ಯ ವ್ಯವಹಾರ ಮತ್ತು ವಿಶ್ವಪರಂಪರಾ ಪಟ್ಟಿ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮ ಉಲ್ಲಂಘನೆಯ ಕುರಿತು ಹಲವು ಭಾರಿ ಸರಕಾರ ಮತ್ತು ನ್ಯಾಯಾಲಯದ ಗಮನಕ್ಕೆ ದಾಖಲೆ ಸಮೇತ ಸಾಬಿತುಪಡಿಸಲಾಗಿತ್ತು. ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಸಿಕ್ಕ ಕೂಡಲೇ ಅಧಿಕಾರಿ ಸಭೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next