ಮಂಡ್ಯ: ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಪಡಿತರ ಅಕ್ಕಿ ತುಂಬಿದ್ದ ಲಾರಿಯನ್ನು ಪೊಲೀಸರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಸುಮಾರು 160ಕ್ಕೂ ಹೆಚ್ಚು ಅಕ್ಕಿ ಮೂಟೆ ಲಾರಿಯಲ್ಲಿತ್ತು ಎಂದು ಹೇಳಲಾಗಿದ್ದು, ಹನಕೆರೆಯಿಂದ ಕಲ್ಲಹಳ್ಳಿ ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಎಚ್ಚೆತ್ತ ಪೊಲೀಸರು ಜೆ.ಸಿ.ವೃತ್ತದಲ್ಲಿ ಲಾರಿಯನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ;- “ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ
ಆಂಧ್ರದ ಪಡಿತರ ಅಕ್ಕಿಯನ್ನು ಮಂಡ್ಯಕ್ಕೆ ತಂದು ನಗರದ ಬಾಲಾಜಿ ರೈಸ್ ಮಿಲ್‌ನಲ್ಲಿ ಪಾಲೀಶ್ ಮಾಡಿ ವಿದೇಶಕ್ಕೆ ರಫ್ತು ಮಾಡುತ್ತಿದ್ದ ಜಾಲವನ್ನು ಇತ್ತೀಚೆಗೆ ತಹಶೀಲ್ದಾರ್ ಚಂದ್ರಶೇಖರ ಶಂ.ಗಾಳಿ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದರು. ಇಂತಹುದ್ದೇ ಜಾಲ ಅಕ್ರವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದುದು ಪತ್ತೆಯಾಗಿದೆ.
ಆದರೆ ಈ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದು, ಘಟನೆಗೆ ಸಂಬಂ ಧಿಸಿದಂತೆ ಪ್ರಕರಣ ದಾಖಲಾಗಿದೆ. ಇಂಥ ಹಲವಾರು ಪ್ರಕರಣಗಳು ಪತ್ತೆಯಾಗಿದ್ದರೂ, ಮುಂದಿನ ಕ್ರಮದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಅಲ್ಲದೇ, ಇದರ ಮೂಲ ಪತ್ತೆ ಹಚ್ಚಿ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.