ಮಂಗಳೂರು: ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಆಕ್ರಮಕ್ಕೆ ಸಂಬಂಧಿಸಿ ಇಲಾಖಾ ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು. ಅಕ್ರಮದ ಬಗ್ಗೆ ನ್ಯಾಯಾಂಗ ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ.
ಪರೀಕ್ಷೆಯನ್ನು ಇಲಾಖೆಯ ಉನ್ನತ ಅಧಿಕಾರಿಗಳು ನಡೆಸುತ್ತಾರೆ. ಅಕ್ರಮ ಅವರ ಗಮನಕ್ಕೆ ಬಾರದೆ ಇರಲು ಹೇಗೆ ಸಾಧ್ಯ? ಪೊಲೀಸ್ ಇಲಾಖೆಯ ನೇಮಕಾತಿಯ ಬಗ್ಗೆ ಇಲಾಖೆಯ ಇನ್ನೊಂದು ವಿಭಾಗ ಹೇಗೆ ತನಿಖೆ ನಡೆಸಲು ಸಾಧ್ಯ? ಇದರಿಂದ ನ್ಯಾಯ ಸಿಗುತ್ತದೆಯೇ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ರಾಜಕೀಯ ಪ್ರೇರಿತವಾಗಿದ್ದು, ಅಕ್ರಮಗಳ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಪ್ರಯತ್ನ. ಕಾಂಗ್ರೆಸ್ ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಪ್ರಿಯಾಂಕ್ ಖರ್ಗೆ ಸಾರ್ವಜನಿಕವಾಗಿ ಚರ್ಚೆಯಲ್ಲಿದ್ದ ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ. ಅಕ್ರಮದ ಬಗ್ಗೆ ಸರಕಾರಕ್ಕೆ ತಿಳಿದಿರಲಿಲ್ಲವೆ? ಗುಪ್ತಚಾರ ಇಲಾಖೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ ಖಾದರ್, ಇದು ಸರಕಾರದ ಸಂಪೂರ್ಣ ವೈಫಲ್ಯ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಯಾರೂ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಉದ್ಯಮಿಗಳು ಉದ್ಯೋಗ ಕಡಿತ ಮಾಡುತ್ತಿದ್ದಾರೆ. ಯುವ ಜನಾಂಗದ ಬಗ್ಗೆ, ಉದ್ಯೋಗ ಸೃಷ್ಟಿಯ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ ಎಂದವರು ಟೀಕಿಸಿದರು.
ಜೆಡಿಎಸ್, ಕಾಂಗ್ರೆಸ್‌ನಿಂದ ಬಿಜೆಪಿ ಶಾಸಕರ ವಲಸೆ ಕುರಿತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆ ಬಾಲಿಶವಾಗಿದೆ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಯಾರೆಲ್ಲ ಸೇರುತ್ತಾರೆ ಎಂಬುದು ಸೂಕ್ತ ಸಮಯದಲ್ಲಿ ಗೊತ್ತಾಗಲಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಈಶ್ವರ್ ಉಳ್ಳಾಲ್, ಸದಾಶಿವ ಉಳ್ಳಾಲ್, ಸುಧೀರ್ ಟಿ.ಕೆ., ಸುರೇಶ್ ಭಟ್ನಾಗರ್, ದೀಪಕ್, ನಾಗೇಶ್ ಶೆಟ್ಟಿ, ವಿನೋದ್ ಕುಂಪಲ ಉಪಸ್ಥಿತರಿದ್ದರು.