ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಯೋಜನೆ ಜಾರಿ ಯಲ್ಲಿದ್ದ ಇಬ್ಬರು ಹಿರಿಯ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿರುವುದು ಕುತೂಹಲ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿಗಳು (ಉತ್ತರ ವಲಯ, ಬೆಳಗಾವಿ) ಮುಖ್ಯ ಅಭಿಯಂತರ ಮನ್ಮಥಯ್ಯ ಸ್ವಾಮಿ ಹಾಗೂ ದಕ್ಷಿಣ ವಲಯದ (ಬೆಂಗಳೂರು) ಮುಖ್ಯ ಅಭಿಯಂತರ ಕೆ.ಜಿ.ಜಗದೀಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ವಲಯವು 2 ವೃತ್ತಗಳನ್ನು ಹಾಗೂ 7 ವಿಭಾಗ ಗಳನ್ನು ಹೊಂದಿದೆ. ಈ ಎರಡೂ ವೃತ್ತಗಳ ಮುಖ್ಯ ಎಂಜಿನಿಯರ್ ಸೇವೆಯಿಂದ ಅಮಾನತುಗೊಂಡಿದ್ದಾರೆ. ಸಹಜವಾಗಿಯೇ ಈ 2 ಹುದ್ದೆಗಳಿಗೆ ಈಗ ಸರ್ಕಾರಿ ಮಟ್ಟದಲ್ಲಿ ಭಾರಿ ಲಾಬಿ ಪ್ರಾರಂಭವಾಗಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ, 1957ರ ನಿಯಮದಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಜಗದೀಶ್ ಹಾಗೂ ಮನ್ಮಥಸ್ವಾಮಿ ವಿರುದ್ಧ ಆದಾಯಕ್ಕೆ ಮೀರಿದ ಆಸ್ತಿ ಸಂಗ್ರಹಣೆ ಆರೋಪ ಸಂಬಂಧ ಇಲಾಖಾ ವಿಚಾರಣೆ ಬಾಕಿ ಇಟ್ಟು ಅಮಾನತು ಮಾಡಲಾಗಿದೆ.
ಜಗದೀಶ್ ಅವರು ತಮ್ಮ ಸರ್ಕಾರಿ ಸೇವಾವಧಿಯಲ್ಲಿ ಆದಾಯಕ್ಕೆ ಮೀರಿದ ಆಸ್ತಿ ಗಳಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಪ್ರಾಥಮಿಕ ತನಿಖೆ ನಡೆಸಿದ್ದ ಲೋಕಾಯುಕ್ತ ದಾಖಲೆ ಸಂಗ್ರಹಿಸಿತ್ತು. ಅವರು ಆದಾಯಕ್ಕಿಂತ 6.85 ಕೋಟಿ ರೂ.ನಷ್ಟು (ಶೇ.370.80) ಹೆಚ್ಚು ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ಆರೋಪಿತ ನೌಕರ ವಾಸವಿರುವ ಮನೆ ಮತ್ತು ಆರೋಪಿಯ ತಾಯಿಯ ಹೆಸರಿನಲ್ಲಿರುವ, ತಂಗಿಯರ ಹೆಸರಿನಲ್ಲಿರುವ ಮನೆಗಳನ್ನು, ಆರೋಪಿಯ ಬಾಡಿಗೆ ಮನೆ ಶೋಧ ಮಾಡಲಾಗಿತ್ತು.
ಮನ್ಮಥಯ್ಯ ಸ್ವಾಮಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಷಯವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ವರದಿ ನೀಡಿದ್ದರು.