Advertisement

Karnataka: ಅಕ್ರಮ ಆಸ್ತಿ- ಭ್ರಷ್ಟ ಸರಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌

11:25 PM Jun 28, 2023 | Team Udayavani |

ರಾಜ್ಯದ ವಿವಿಧೆಡೆ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಭ್ರಷ್ಟ ಸರಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಗಳಿಕೆಯನ್ನು ಬಯಲಿಗೆಳೆದಿದ್ದಾರೆ. ಈ ವೇಳೆ ಕೆಲವು ಅಧಿಕಾರಿಗಳ ಕೋಟ್ಯಂತರ ರೂ. ಮೌಲ್ಯದ ಆಸ್ತಿ, ಚಿನ್ನಾಭರಣ, ನಗದು, ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಂಡು ಲೋಕಾಯುಕ್ತ ಪೊಲೀಸರು ಶಾಕ್‌ ಆಗಿದ್ದಾರೆ. ಒಟ್ಟು 15 ಮಂದಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ, ಸಂಬಂಧಿಕರ ಮನೆಗಳು, ಫಾರ್ಮ್ಹೌಸ್‌ ಸೇರಿ 62 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

Advertisement

ತಹಶೀಲ್ದಾರ್‌ ಅಜಿತ್‌ ರೈ ಪುತ್ತೂರಿನ ಮನೆಗೆ ದಾಳಿ

ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಸಾಗು ನಿವಾಸಿ ಬೆಂಗಳೂರಿನ ಕೆ.ಆರ್‌. ಪುರಂ ತಹಶೀಲ್ದಾರ್‌ ಆಗಿರುವ ಅಜಿತ್‌ ಕುಮಾರ್‌ ರೈ ಅವರ ಕಚೇರಿ, ಆಪ್ತರ ಮನೆಗಳಿಗೆ ಲೋಕಾಯುಕ್ತ ದಾಳಿ ನಡೆದಿದ್ದು ಹುಟ್ಟೂರಿನ ಮನೆಯ ಮೇಲೂ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿದೆ.

ಹುಟ್ಟೂರಿನ ಮನೆಯಲ್ಲಿ ನಗದು ಸಹಿತ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಚೆಲುವರಾಜ್‌ ನೇತೃತ್ವದ ತಂಡ ಮುಂಜಾನೆ 5.45 ಕ್ಕೆ ಮನೆಗೆ ದಾಳಿ ನಡೆಸಿದ್ದು ಮಧ್ಯಾಹ್ನದ ತನಕ ಪರಿಶೀಲನೆ ನಡೆಸಿತು. ಮನೆಯಲ್ಲಿ ಅಜಿತ್‌ ಅವರ ತಾಯಿ ಮಾತ್ರ ಇದ್ದರು ಎನ್ನುವ ಮಾಹಿತಿ ಲಭಿಸಿದೆ.

ಸರಕಾರಿ ನೌಕರರಾಗಿದ್ದ ತಂದೆ ಆನಂದ್‌ ಕರ್ತವ್ಯದ ಅವಧಿಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಅಜಿತ್‌ಗೆ ಸರಕಾರಿ ಕೆಲಸ ಸಿಕ್ಕಿತ್ತು. ಕಂದಾಯ ನಿರೀಕ್ಷಕರಾಗಿ ಆಗಿ ಬೆಂಗಳೂರಿನಲ್ಲಿ ಕೆಲಸಕ್ಕೆ ನೇಮಕವಾಗಿದ್ದ ಈತ ಅಲ್ಲಿಂದ ಭಡ್ತಿ ಪಡೆದು ಉಪ ತಹಶೀಲ್ದಾರ್‌ ಬಳಿಕ ತಹಶೀಲ್ದಾರ್‌ ಹುದ್ದೆಗೆ ನೇಮಕವಾಗಿದ್ದರು. ಬಿಬಿಎಂಪಿ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸಿದ ಅರೋಪದಡಿ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್‌. ಪುರ) ತಹಶೀಲ್ದಾರ್‌ ಆಗಿದ್ದ ಅಜಿತ್‌ ಕುಮಾರ್‌ ರೈಯನ್ನು ಕಳೆದ ನವೆಂಬರ್‌ನಲ್ಲಿ ಅಮಾನತು ಮಾಡಲಾಗಿತ್ತು. ಆದರೆ ಅಮಾನತು ಆದೇಶದ ವಿರುದ್ಧ ಕೆಎಟಿಯಲ್ಲಿ ಪ್ರಶ್ನಿಸಿ ತಡೆ ತೆರವು ಮಾಡಿದ್ದ ಅಜಿತ್‌ ರೈ ಮತ್ತೆ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್‌.ಪುರ) ತಹಶೀಲ್ದಾರ್‌ ಆಗಿ ನೇಮಕಗೊಂಡಿದ್ದರು.

Advertisement

ಕುಶಾಲನಗರ: ಲೋಕಾಯುಕ್ತ ದಾಳಿ

ಮಡಿಕೇರಿ : ಕುಶಾಲನಗರದ ನಿವಾಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಲೆಕ್ಕ ವಿಭಾಗದ ಪ್ರಥಮ ದರ್ಜೆ ಸಹಾಯಕ ಅಬ್ದುಲ್‌ ಬಷೀರ್‌ ನಿವಾಸದ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಆದಾಯ ಮೀರಿದ ಆಸ್ತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್‌ ಕುಮಾರ್‌ ನೇತೃತ್ವದ ತಂಡ ಕುಶಾಲನಗರದ ಗೊಂದಿಬಸವನಹಳ್ಳಿಯಲ್ಲಿರುವ ಅಬ್ದುಲ್‌ ಬಷೀರ್‌ ನಿವಾಸದ ಮೇಲೆ ಮುಂಜಾನೆ ವೇಳೆ ದಾಳಿ ಮಾಡಿ ದಾಖಲೆ ಹಾಗೂ ಆಸ್ತಿಯನ್ನು ಪರಿಶೀಲಿಸಿತು. ಈ ಸಂದರ್ಭ ಮನೆಯಲ್ಲಿ 14 ಲಕ್ಷ ರೂ. ನಗದು, 250 ಗ್ರಾಂ ಚಿನ್ನ, ಎರಡು ಮನೆ, ಮೂರು ವಾಹನಗಳು, ಬ್ಯಾಂಕಿನಲ್ಲಿ 40 ಲಕ್ಷ ಠೇವಣಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ ಎಂದು ಹೇಳಲಾಗಿದೆ.

ಕೃಷಿ ಅಧಿಕಾರಿ ಮನೆಯಲ್ಲಿ ಆಮೆ ಪತ್ತೆ
ಬಾಗಲಕೋಟೆ: ಬಾಗಲಕೋಟೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಬೀಳಗಿ ಸಹಾಯಕ ಕೃಷಿ ಅಧಿಕಾರಿ ಕೃಷ್ಣಾ ಶಿರೂರ ನಿವಾಸದ ಮೇಲೆ ವಿಜಯಪುರದ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ, ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ನೇತೃತ್ವದಲ್ಲಿ ವಿಜಯಪುರ, ಬಾಗಲಕೋಟೆ ಹಾಗೂ ಹಾವೇರಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಅಕ್ರಮ ಆಸ್ತಿಯ ದಾಖಲೆ ವಶಪಡಿಸಿಕೊಂಡಿದ್ದಾರೆ.

ಶಿರೂರ ಮನೇಲಿ ಬೆಳ್ಳಿ ಕೊಡ ಪತ್ತೆ
ಕೃಷಿ ಇಲಾಖೆಯ ಬೀಳಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರ ಅವರ ವಿದ್ಯಾಗಿರಿಯ 18ನೇ ಕ್ರಾಸ್‌ನ ಮನೆಯ ಮೇಲೆ ದಾಳಿ ನಡೆಸಿ 3.50 ಲಕ್ಷ ರೂ. ನಗದು, ಚಿನ್ನದ ಬಣ್ಣ ಹೋಲುವ ಒಂದು ಕೈ ಗಡಿಯಾರ, ಬೆಳ್ಳಿಯ ದೀಪದ ಸಮೆಗಳು ಹಾಗೂ ಒಂದು ಬೆಳ್ಳಿಯ ಕೊಡ ಪತ್ತೆಯಾಗಿದೆ. ತಡರಾತ್ರಿವರೆಗೂ ಇಬ್ಬರೂ ಅಧಿಕಾರಿ ಗಳ ಕಚೇರಿ, ನಿವಾಸ ಹಾಗೂ ವಿವಿಧೆಡೆ ಆಸ್ತಿ ಹೊಂದಿದ್ದಾರೆನ್ನಲಾದ ಸ್ಥಳಗಳ ಪರಿಶೀಲನೆ ನಡೆಸಿದರು.

ದಂಗು ಬಡಿಸಿದ ಐಷಾರಾಮಿ ಬದುಕು
ರಾಯಚೂರು: ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ.ಎನ್‌. ಪ್ರಕಾಶ್‌ ಅವರ ಆಶಾಪುರ ರಸ್ತೆಯಲ್ಲಿನ ಮನೆ ಹಾಗೂ ಕಚೇರಿ ಸಮೀಪದ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಶೋಧ ಕಾರ್ಯ ನಡೆಸಲಾಗಿದೆ. ಮಾನ್ವಿ, ರಾಯಚೂರಿನಲ್ಲಿ ಪಿಡಬ್ಲುಡಿ ಎಇಇ ಆಗಿ ಕಾರ್ಯನಿರ್ವಹಿಸಿದ ಇವರು ಆಶಾಪುರ ರಸ್ತೆಯಲ್ಲಿ ಮೂರು ಅಂತಸ್ತಿನ ಬಂಗಲೆ ಹೊಂದಿದ್ದಾರೆ. ಬಂಗಲೆ ಶೋಧ ಕಾರ್ಯ ಆರಂಭಿಸಿದ ಪೊಲೀಸರಿಗೆ ಪ್ರತಿ ಅಂತಸ್ತಿನಲ್ಲೂ ದುಬಾರಿ ಬೆಲೆ ಬಾಳುವ ಟಿವಿಗಳು, ಫ್ರಿಡ್ಜ್ಗಳು, ಸೋಫಾಗಳು ಕಂಡು ಗಾಬರಿಗೊಂಡಿದ್ದಾರೆ. ಯಾವುದೇ ವಸ್ತು ನೋಡಿದರೂ ಬ್ರ್ಯಾಂಡೆಡ್‌ ಆಗಿವೆ. ಮಾರುಕಟ್ಟೆಯಲ್ಲಿರುವ ಬಹುತೇಕ ವಸ್ತುಗಳು ಮನೆಯಲ್ಲಿರುವುದು ಕಂಡ ಪೊಲೀಸರಿಗೆ ದಿಗಿಲಾಗಿದೆ. ಮೂರು ಅಂತಸ್ತಿನಲ್ಲೂ ಪ್ರತ್ಯೇಕ ಟಿವಿಗಳು ಮಾತ್ರವಲ್ಲದೇ ಎಲ್ಲ ಬೆಡ್‌ ರೂಂಗಳಲ್ಲೂ ಟಿವಿಗಳ ಅಳವಡಿಸಿಕೊಂಡಿದ್ದಾರೆ. ದಾಳಿ ವೇಳೆ ನಗದಿಗಿಂತ ಹೆಚ್ಚಾಗಿ ಆಸ್ತಿ ಪತ್ರಗಳು ಸಿಕ್ಕಿವೆ.

ಯಾರ್ಯಾರ ಅಕ್ರಮ ಆಸ್ತಿ ಎಷ್ಟೆಷ್ಟು?
 ಗೌರಿಬಿದನೂರು ಅಬಕಾರಿ ಇನ್‌ಸ್ಪೆಕ್ಟರ್‌ ವಿ.ರಮೇಶ್‌ಗೆ ಸೇರಿದ ಐದು ಸ್ಥಳಗಳಲ್ಲಿ 2.44 ಕೋಟಿ ರೂ. ಮೌಲ್ಯದ ಆಸ್ತಿಯ‌ ದಾಖಲೆ ಪತ್ತೆೆ.
 ರಾಯಚೂರು ಉಪವಿಭಾಗದ ಆರೋಗ್ಯ ಇಲಾಖೆಯ ಎಇಇ ವಿಶ್ವ ನಾಥ್‌ ರೆಡ್ಡಿಗೆ ಸೇರಿದ ಎರಡು ಸ್ಥಳಗಳಲ್ಲಿ ಶೋಧಿಸಿದಾಗ 1.27 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿವೆ.
 ತುಮಕೂರು ಜಿಲ್ಲೆ ಶಿರಾ ತಾಲೂಕಿನ ಉಪವಿಭಾಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಇ ಕೆ.ಬಿ.ಪುಟ್ಟರಾಜುಗೆ ಸೇರಿದ ನಾಲ್ಕು ಸ್ಥಳಗಳಲ್ಲಿ 1.04 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂಬುದು ದಾಳಿ ವೇಳೆ ಪತ್ತೆಯಾಗಿದೆ.
 ತುಮಕೂರು ಜಿಲ್ಲೆಯ ಕೆಆರ್‌ಐಡಿಎಲ್‌ ಗ್ರೇಡ್‌ 2ನ ಎಇ ಕೋಂದಡರಾಮಯ್ಯಗೆ ಸೇರಿದ ಆರು ಸ್ಥಳಗಳಲ್ಲಿ ದಾಳಿ ನಡೆಸಿ 2.47 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿವೆ.
 ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ವೈ.ಗಂಗಾಧರ್‌ಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿ 3.75 ಕೋಟಿ ರೂ. ಮೌಲ್ಯದ ಆಸ್ತಿಗೆ ಸೇರಿದ ದಾಖಲೆಗಳು ಸಿಕ್ಕಿವೆ.
ತುಮಕೂರು ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್‌.ರವಿಗೆ ಸೇರಿ ಆರು ಸ್ಥಳಗಳಲ್ಲಿ ತಪಾಸಣೆ ನಡೆಸಿದಾಗ 4.27 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿರುವುದು ಗೊತ್ತಾಗಿದೆ.
ರಾಯಚೂರಿನ ಲೋಕೋಪಯೋಗಿ ಇಲಾಖೆಯ ಎಇಇ ಜಿ.ಎನ್‌. ಪ್ರಕಾಶ್‌ಗೆ ಸೇರಿದ ಎರಡು ಸ್ಥಳಗಳಲ್ಲಿ 2.71ಕೋಟಿ ರೂ.ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
ವಿಜಯಪುರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಶೇಖರ್‌ ಹನುಮತ್‌ ಬಹುರೂಪಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ 3 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next