Advertisement
ತನಿಖಾಧಿಕಾರಿ ಡಿವೈಎಸ್‌ಪಿ ಎಂ.ಎಚ್. ಸತೀಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಮುಂದಿಟ್ಟು ಹೇಳಿಕೆ ದಾಖಲಿಸಿಕೊಂಡರು. ಈ ಪ್ರಕರಣದಲ್ಲಿ ಡಿಕೆಶಿ ಮೊದಲ ಬಾರಿಗೆ ಲೋಕಾಯುಕ್ತದ ಮುಂದೆ ಹಾಜರಾಗಿದ್ದಾರೆ. ಅವರು ಹಾಜರಾದ ಸ್ವಲ್ಪ ಹೊತ್ತಿನಲ್ಲಿ ಮಾಜಿ ಮೇಯರ್ ಸಂಪತ್‌ರಾಜ್ ಕೂಡ ಆಗಮಿಸಿದರು.
ತನಿಖಾ ತಂಡವು ಕೇಳಬೇಕಿ ರುವ ಪ್ರಶ್ನೆಗಳನ್ನು ಮೊದಲೇ ಸಿದ್ಧತೆ ಮಾಡಿತ್ತು. ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಏನು ಹೇಳುತ್ತೀರಿ ಎಂಬಿತ್ಯಾದಿ ಒಂದೊಂದೇ ಪ್ರಶ್ನೆಗೆ ಡಿಸಿಎಂ ಉತ್ತರಿಸುತ್ತಾ ಹೋದರು. ಕೆಲವು ಪ್ರಶ್ನೆಗಳಿಗೆ ದಾಖಲೆಗಳೊಂದಿಗೆ ಅನಂತರ ಮಾಹಿತಿ ಕೊಡುವುದಾಗಿ ಹೇಳಿದ್ದಾರೆಂದು ತಿಳಿದು ಬಂದಿದೆ. ಲೋಕಾಯುಕ್ತ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಇನ್ನಷ್ಟೇ ಸಾಕ್ಷ್ಯ ಕಲೆ ಹಾಕಬೇಕಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಏನಿದು ಪ್ರಕರಣ?
2013ರಿಂದ 2018ರ ಅವಧಿಯಲ್ಲಿ ಆದಾಯಕ್ಕಿಂತ ಕೋಟ್ಯಂತರ ರೂ. ಅಧಿಕ ಮೌಲ್ಯದ ಆಸ್ತಿ ಸಂಪಾದಿಸಿರುವ ಆರೋಪದಡಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿತ್ತು. 2019ರ ಸೆಪ್ಟಂಬರ್‌ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೊಟ್ಟ ಮಾಹಿತಿ ಆಧರಿಸಿ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ತನಿಖೆ ನಡೆಸಲು ಅಂದಿನ ಬಿಜೆಪಿ ರಾಜ್ಯ ಸರಕಾರವು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಡಿಕೆಶಿ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ರದ್ದುಪಡಿಸಿ ಲೋಕಾಯುಕ್ತ ಪೊಲೀಸರಿಗೆ ತನಿಖೆಯನ್ನು ವಹಿಸಿತ್ತು.
Related Articles
ಶಿವಕುಮಾರ್ ವಿರುದ್ಧ ಸಿಬಿಐಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಯನ್ನು ಲೋಕಾಯುಕ್ತಕ್ಕೆ ನೀಡಿರುವ ರಾಜ್ಯ ಸರಕಾರದ ನಡೆಯನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೊರೆ ಹೋಗಿದೆ. ಹಲವು ದಾಖಲೆಗಳನ್ನು ಈಗಾಗಲೇ ಕಲೆ ಹಾಕಿದ್ದು, ನಾವೇ ತನಿಖೆ ಮುಂದುವರಿಸಿ ಚಾರ್ಜ್‌ಶೀಟ್ ಹಾಕುವುದಾಗಿ ಸಿಬಿಐ ಪಟ್ಟು ಹಿಡಿದಿದೆ.
Advertisement
ಇತ್ತ ಡಿಸಿಎಂ ವಿರುದ್ಧ ಕಲೆ ಹಾಕಿರುವ ದಾಖಲೆ ನೀಡು ವಂತೆ ಲೋಕಾಯುಕ್ತ ಪೊಲೀಸರು ಸಿಬಿಐ ಬಳಿ ಕೇಳಿದರೂ ಸಿಬಿಐ ಇದುವರೆಗೆ ಯಾವುದೇ ಮಾಹಿತಿ ಒದಗಿಸಿಲ್ಲ. ಹೀಗಾಗಿ ಸಿಬಿಐ ಕಲೆ ಹಾಕಿರುವ ಸಾಕ್ಷ್ಯ ನೀಡಲು ಸೂಚಿಸುವಂತೆ ಲೋಕಾ ತನಿಖಾಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಲು ತಡೆ ತಂದಿಲ್ಲ.